ದುಬೈ: ಚಾಂಪಿಯನ್ಸ್ ಟ್ರೋಫಿ ಫೈನಲ್ ಪಂದ್ಯದ ವೇಳೆ ಟೀಂ ಇಂಡಿಯಾ (Team India) ಸ್ಪಿನ್ನರ್ ಯಜುವೇಂದ್ರ ಚಹಲ್ (Yuzvendra Chahal) ಯುವತಿಯೊಂದಿಗೆ ಕಾಣಿಸಿಕೊಂಡು ಸುದ್ದಿಯಾಗಿದ್ದರು. ಈ ಬೆನ್ನಲ್ಲೇ ಧನಶ್ರೀ ತಮ್ಮ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಅಚ್ಚರಿ ಸಂದೇಶವೊಂದನ್ನ ಹಂಚಿಕೊಂಡಿದ್ದಾರೆ.
ಹೌದು. ನೃತ್ಯ ಸಂಯೋಜಕಿ ಧನಶ್ರೀ ವರ್ಮಾ (Dhanashree Verma) ಮತ್ತು ಚಹಲ್ ಬೇರ್ಪಟ್ಟಿದ್ದಾರೆ. ಡಿವೋರ್ಸ್ ಪಡೆದ ನಂತರ ಚಹಲ್ ಮತ್ತೆ ಡೇಟಿಂಗ್ ಮಾಡುತ್ತಿದ್ದಾರಾ? ಎಂಬ ಪ್ರಶ್ನೆ ಎದ್ದಿತ್ತು. ಈ ವೇಳೆ ನೆಟ್ಟಿಗರು ಸೋಷಿಯಲ್ ಮೀಡಿಯಾಗಳಲ್ಲಿ ಟಾಂಗ್ ಕೊಡುವಂತೆ ಮೀಮ್ಸ್‌ಗಳನ್ನು ಹಂಚಿಕೊಂಡಿದ್ದರು. ಇನ್ನಷ್ಟು ಮಂದಿ ಟ್ರೋಲ್ ಮಾಡಿದ್ದರು. ಈ ಬೆನ್ನಲ್ಲೇ ಧನಶ್ರೀ ತಮ್ಮ ಇನ್‌ಸ್ಟಾಗ್ರಾಮ್ ಸ್ಟೋರಿಯಲ್ಲಿ ಪುಟ್ಟ ಸಂದೇಶವೊಂದನ್ನ ಹಂಚಿಕೊಂಡಿದ್ದಾರೆ.
ʻಮಹಿಳೆಯರನ್ನು ದೂಷಿಸುವುದು ಯಾವಾಗಲೂ ಫ್ಯಾಷನ್‌ನಲ್ಲಿದೆʼ ಎಂದು ಬರೆದುಕೊಂಡಿದ್ದಾರೆ. ಈ ಬೆನ್ನಲ್ಲೇ ಚಹಲ್ ಅಭಿಮಾನಿಗಳು ಧನಶ್ರೀ ಕಾಲೆಳೆಯುವ ಕೆಲಸ ಮಾಡಿದ್ದಾರೆ.
ಸೂಪರ್ ಸಂಡೇ ದುಬೈನಲ್ಲಿ ನಡೆದ ಚಾಂಪಿಯನ್ಸ್ ಟ್ರೋಫಿ ಪಂದ್ಯ ವೀಕ್ಷಣೆಗೆ ಬಂದಿದ್ದ ಚಹಲ್ ಗ್ಯಾಲರಿಯಲ್ಲಿ ಆರ್‌ಜೆ ಮಹ್ವಾಶ್ ಜೊತೆ ಕುಳಿತಿದ್ದಾರೆ. ಚಹಲ್- ಆರ್.ಜೆ ಮಹ್ವಾಶ್ ಅವರ ಫುಲ್ ವೈರಲ್ ಆಗಿರುವ ಫೋಟೋಗಳಿಗೆ ನೆಟ್ಟಿಗರು ವಿಧ ವಿಧವಾದ ಕಾಮೆಂಟ್ ಮಾಡುತ್ತಿದ್ದರು.
ಕೆಲ ದಿನಗಳ ಹಿಂದೆ ಮಹ್ವಾಶ್ (RJ Mahvash) ಜೊತೆ ಚಹಲ್ ಕಾಣಿಸಿಕೊಂಡಿದ್ದರು. ಸಾಮಾಜಿಕ ಜಾಲತಾಣದಲ್ಲಿ ಫೋಟೋ ವೈರಲ್ ಆದ ಬೆನ್ನಲ್ಲೇ ಗಾಸಿಪ್‌ಗಳು ಎದ್ದಿದ್ದವು. ಈ ಗಾಸಿಪ್‌ಗಳನ್ನು ಮಹ್ವಾಶ್ ತಳ್ಳಿ ಹಾಕಿದ್ದರು. ಹೀಗಿದ್ದರೂ ಈಗ ಮತ್ತೆ ಚಹಲ್ ಜೊತೆ ಮಹ್ವಾಶ್ ಕಾಣಿಸಿಕೊಂಡಿದ್ದರು.
ಯಜುವೇಂದ್ರ ಚಹಲ್ ಮತ್ತು ನಟಿ ಧನಶ್ರೀ (Dhanashree Verma) ಅಧಿಕೃತವಾಗಿ ಬೇರೆ ಬೇರೆಯಾಗಿದ್ದಾರೆ. ಫೆ.20 ರಂದು ಬಾಂದ್ರಾ ಕುಟುಂಬ ನ್ಯಾಯಾಲಯದಲ್ಲಿ ದಂಪತಿಯ ಅಂತಿಮ ವಿಚ್ಛೇದನ (Divorce) ವಿಚಾರಣೆ ನಡೆಯಿತು. ಚಹಲ್ ಮತ್ತು ಧನಶ್ರೀ ಇಬ್ಬರೂ ಬೆಳಿಗ್ಗೆ 11 ಗಂಟೆಯಿಂದ ವಿಚಾರಣೆಗೆ ಹಾಜರಾಗಿದ್ದರು. ನ್ಯಾಯಾಲಯವು ಸುಮಾರು 45 ನಿಮಿಷಗಳ ಕಾಲ ನಡೆದ ಕೌನ್ಸಿಲಿಂಗ್‌ಗೆ ಹಾಜರಾಗುವಂತೆ ಅವರಿಗೆ ಸೂಚಿಸಿತು. ಅಲ್ಲಿ ಅವರು ಪರಸ್ಪರ ಒಪ್ಪಿಗೆಯ ಮೂಲಕ ಡಿವೋರ್ಸ್ ಪಡೆಯುತ್ತೇವೆ ಎಂದು ತಿಳಿಸಿದ್ದರು.
ತಮ್ಮ ವಿಚ್ಛೇದನದ ಹಿಂದಿನ ಕಾರಣದ ಬಗ್ಗೆ ಪ್ರಶ್ನಿಸಿದಾಗ, ಚಹಲ್ ಮತ್ತು ಧನಶ್ರೀ ‘ಹೊಂದಾಣಿಕೆಯ ಸಮಸ್ಯೆ’ ಕಾರಣವನ್ನು ನೀಡಿದ್ದರು. ಪ್ರಕರಣವನ್ನು ಪರಿಶೀಲಿಸಿದ ನಂತರ ಮತ್ತು ಎಲ್ಲಾ ಪ್ರಕ್ರಿಯೆ ಪೂರ್ಣಗೊಳಿಸಲಾಗಿದೆಯೇ ಎಂದು ಖಚಿತಪಡಿಸಿಕೊಂಡ ನಂತರ ನ್ಯಾಯಾಧೀಶರು ಸಂಜೆ 4:30ಕ್ಕೆ ಅಧಿಕೃತವಾಗಿ ಅವರ ವಿಚ್ಛೇದನ ತೀರ್ಪು ಪ್ರಕಟಿಸಿದರು.