Connect with us

Latest

ದೋಸ್ತಿ ಸರ್ಕಾರ ಬೀಳಿಸಿದ್ದು ಪ್ರಜಾಪ್ರಭುತ್ವ ಇತಿಹಾಸದಲ್ಲಿ ಕರಾಳ ಅಧ್ಯಾಯ: ಮಾಯಾವತಿ

Published

on

ಲಕ್ನೋ: ಕರ್ನಾಟಕದ ರಾಜಕೀಯ ಪ್ರಜಾಪ್ರಭುತ್ವ ಇತಿಹಾಸದಲ್ಲಿಯೇ ಅತ್ಯಂತ ಕರಾಳ ಅಧ್ಯಾಯ ಎಂದು ಬಹುಜನ ಸಮಾಜ ಪಕ್ಷದ ನಾಯಕಿ ಮಾಯಾವತಿ ಹೇಳಿದ್ದಾರೆ.

ಈ ಕುರಿತು ಟ್ವೀಟ್ ಮಾಡಿರುವ ಅವರು, ಬಿಜೆಪಿಯು ಸಂವಿಧಾನಕ್ಕೆ ವಿರುದ್ಧವಾಗಿ ಅಧಿಕಾರ ಮತ್ತು ಹಣ ಬಲದಿಂದ ಕರ್ನಾಟಕದ ಸಮ್ಮಿಶ್ರ ಸರ್ಕಾರದ ಬೀಳಿಸಿದೆ. ಇದು ಪ್ರಜಾಪ್ರಭುತ್ವ ಇತಿಹಾಸದಲ್ಲಿ ಒಂದು ಕರಾಳ ಅಧ್ಯಾಯವಾಗಿ ದಾಖಲಾಗಲಿದೆ. ಇದು ಖಂಡನೀಯ ಎಂದು ಹೇಳಿದ್ದಾರೆ.

ಮಾಯಾವತಿ ಅವರು ನಿನ್ನೆಯಷ್ಟೇ ತಮ್ಮ ಮಾತು ಮೀರಿ ನಡೆದುಕೊಂಡ ಕರ್ನಾಟಕ ಬಿಎಸ್‍ಪಿ ಏಕೈಕ ಶಾಸಕ ಎನ್.ಮಹೇಶ್ ಅವರನ್ನು ಪಕ್ಷದಿಂದ ಉಚ್ಛಾಟನೆಗೊಳಿಸಿದ್ದರು. ವಿಶ್ವಾಸ ಮತಯಾಚನೆ ವೇಳೆ ಸಮ್ಮಿಶ್ರ ಸರ್ಕಾರಕ್ಕೆ ಬೆಂಬಲ ನೀಡುವಂತೆ ಮಾಯಾವತಿ ಅವರು ಎನ್.ಮಹೇಶ್ ಅವರಿಗೆ ಸ್ಪಷ್ಟ ಸೂಚನೆ ನೀಡಿದ್ದರು. ಆದರೆ ಪಕ್ಷದ ನಿಷ್ಠೆಯ ಸೂಚನೆಯನ್ನೂ ಮೀರಿ ಎನ್.ಮಹೇಶ್ ಸದನಕ್ಕೆ ಗೈರಾಗಿದ್ದರು. ಹೀಗಾಗಿ ತುರ್ತು ಕ್ರಮ ತೆಗೆದುಕೊಂಡಿರುವ ಮಾಯಾವತಿ, ಮಹೇಶ್ ಅವರನ್ನು ಪ್ರಾಥಮಿಕ ಸದಸ್ಯತ್ವದಿಂದ ವಜಾಗೊಳಿಸಿದ್ದಾರೆ.

ಈ ಕುರಿತು ಪ್ರತಿಕ್ರಿಯೆ ನೀಡಿರುವ ಎನ್.ಮಹೇಶ್ ಅವರು, ಜುಲೈ 16ರ ಬಳಿಕ ನಾನು ಕ್ಷೇತ್ರದಿಂದ ಹೊರ ಹೋಗಿದ್ದೆ, ಈ ಸಂದರ್ಭದಲ್ಲಿ ನನ್ನ ಮೊಬೈಲ್ ಸ್ವಿಚ್ ಆಫ್ ಆಗಿತ್ತು. ಪಕ್ಷದ ಸೂಚನೆಯಂತೆ ತಟಸ್ಥರಾಗಿಯೇ ಇದ್ದರು ಕೂಡ ನನ್ನನ್ನು ಉಚ್ಛಾಟನೆ ಮಾಡಿದ್ದಾರೆ. ಇಲ್ಲಿ ಬಂದ ಮೇಲೆ ನನಗೆ ಅವರು ಟ್ವೀಟ್ ಮಾಡಿರುವ ಮಾಹಿತಿ ಸಿಕ್ಕಿತ್ತು. ನಾನು ಪಕ್ಷದ ಶಿಸ್ತನ್ನು ಉಲ್ಲಂಘನೆ ಮಾಡಿಲ್ಲ. ಸಂವಹನ ಕೊರತೆಯಿಂದ ಈ ಘಟನೆ ನಡೆದಿದೆ. ಮುಂದಿನ ದಿನಗಳಲ್ಲಿ ಎಲ್ಲವೂ ಕೂಡ ಸರಿ ಹೋಗಲಿದೆ. ನಾನು ಪಕ್ಷದ ಸದಸ್ಯನಾಗಿಯೇ ಮುಂದುವರಿಯುತ್ತೇನೆ ಎಂದಿದ್ದರು.

ಆಪರೇಷನ್ ಕಮಲಕ್ಕೆ ಒಳಗಾಗಿದ್ದೇನೆ ಎನ್ನುವುದು ನಾನ್ ಸೆನ್ಸ್, ಯಾವುದೇ ಕಾರಣಕ್ಕೂ ಬಿಜೆಪಿಗೆ ಹೋಗದೇ ತಟಸ್ಥನಾಗಿರುವೆ. ನನಗೂ ಖಾಸಗಿ ಜೀವನ ಇರುತ್ತದೆ. ಆ ಹಿನ್ನೆಲೆಯಲ್ಲಿ ಮಾಹಿತಿಯ ಕೊರತೆ ಆಗಿದೆ. ಮುಂದಿನ ಸಮಯದಲ್ಲಿ ಪಕ್ಷದ ನಾಯಕರೊಂದಿಗೆ ಮಾತನಾಡುತ್ತೇನೆ. ಎಲ್ಲವೂ ಸರಿಹೋಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದರು.

Click to comment

Leave a Reply

Your email address will not be published. Required fields are marked *