ಬೆಂಗಳೂರು: ವಿಧಾನಸಭೆ ಚುನಾವಣೆ ನಂತರ ಸೋಲಿನ ಹತಾಶೆಯಲ್ಲಿರುವ ರಾಜ್ಯ ಬಿಜೆಪಿಗೆ ಬೂಸ್ಟ್ ಕೊಡಲು ರಾಷ್ಟ್ರೀಯ ಬಿಜೆಪಿ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿಎಲ್ ಸಂತೋಷ್ (BL Santosh) ಅಖಾಡಕ್ಕಿಳಿದಿದ್ದಾರೆ. ಬೆಂಗಳೂರಿನ ಬಿಜೆಪಿ (BJP) ಕಚೇರಿಯಲ್ಲಿಂದು ಮಹತ್ವದ ಸಭೆ ನಡೆಸಿ ನಾಯಕರಲ್ಲಿ ಜೋಷ್ ತುಂಬೋ ಕೆಲಸ ಮಾಡಿದ್ದಾರೆ. ಲೋಕಸಭೆ ಚುನಾವಣಾ ತಯಾರಿಗೆ ಟಾಸ್ಕ್ ಕೊಟ್ಟಿದ್ದಾರೆ. ಇದೇ ವೇಳೆ ಆಪರೇಷನ್ ಹಸ್ತಕ್ಕೆ ಠಕ್ಕರ್ ಕೊಡಲು ರಿವರ್ಸ್ ಆಪರೇಷನ್‌ನ ಸುಳಿವನ್ನೂ ಸಭೆಯಲ್ಲಿ ಬಿಎಲ್ ಸಂತೋಷ್ ನೀಡಿದ್ದಾರೆ.
ವಿಧಾನಸಭೆ ಚುನಾವಣೆ ಮುಗಿದು ಮೂರೂವರೆ ತಿಂಗಳಾದರೂ ರಾಜ್ಯ ಬಿಜೆಪಿಯಲ್ಲಿ ಶೂನ್ಯ ಮನಸ್ಥಿತಿ. ಯಾವ ನಾಯಕರಲ್ಲೂ ಜೋಷ್ ಉಳಿದಿಲ್ಲ. ಪರಿಣಾಮ ಪಕ್ಷ ಸಂಘಟನೆಯಲ್ಲಿ ಬಿಜೆಪಿ ಹಿಂದೆ ಬಿದ್ದಿದೆ. ಈ ಪರಿಣಾಮ ಅರಿತ ಹೈಕಮಾಂಡ್ ಈಗ ರಾಷ್ಟ್ರೀಯ ಬಿಜೆಪಿ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿಎಲ್ ಸಂತೋಷ್ ಮೂಲಕ ರಾಜ್ಯ ಬಿಜೆಪಿಗೆ ಬೂಸ್ಟ್ ಕೊಡಿಸುವ ಕಾರ್ಯಕ್ಕೆ ಕೈ ಹಾಕಿದೆ.
ಈ ಹಿನ್ನೆಲೆಯಲ್ಲಿ ಬೆಂಗಳೂರಿನ ರಾಜ್ಯ ಬಿಜೆಪಿ ಪ್ರಧಾನ ಕಚೇರಿಯಲ್ಲಿ ಇಂದು ಬಿಎಲ್ ಸಂತೋಷ್ ನೇತೃತ್ವದಲ್ಲಿ ಮಹತ್ವದ ಸಭೆ ನಡೆಸಲಾಯಿತು. ಸಭೆಯಲ್ಲಿ ಹಾಲಿ/ಮಾಜಿ ಸಂಸದರು, ಶಾಸಕರು, ಜಿಲ್ಲಾ ಸಂಘಟನಾ ಪದಾಧಿಕಾರಿಗಳು ಭಾಗವಹಿಸಿದ್ದರು. ಈ ಸಭೆಯಲ್ಲಿ ರಾಜ್ಯದಲ್ಲಿ ಪ್ರಸ್ತುತ ಬಿಜೆಪಿಯ ಪರಿಸ್ಥಿತಿ, ಪಕ್ಷ ಸಂಘಟನೆ, ಲೋಕಸಭೆ ಚುನಾವಣಾ ತಯಾರಿ, ಗ್ಯಾರಂಟಿಗಳ ಜಾರಿ, ಸರ್ಕಾರದ ನಕಾರಾತ್ಮಕ ನಡೆ, ನಿರ್ಧಾರಗಳು, ಆಪರೇಷನ್ ಹಸ್ತ ಸೇರಿ ಹಲವು ವಿಚಾರಗಳ ಬಗ್ಗೆ ಚರ್ಚೆ ನಡೆಸಲಾಯ್ತು. ನಾಯಕರಿಗೆ ಬಿಎಲ್ ಸಂತೋಷ್ ಪಕ್ಷ ಸಂಘಟನೆ ಕುರಿತು ಟಾಸ್ಕ್‌ಗಳನ್ನು ನೀಡಿದರು.
ಮುಖ್ಯವಾಗಿ ಚುನಾವಣಾ ಸೋಲಿಗೆ ಹೆದರದಂತೆ, ನಿರಾಶರಾಗದಂತೆ ಸಂತೋಷ್ ಧೈರ್ಯ ಹೇಳಿದ್ದಾರೆ. ಲೋಕಸಭೆ ಚುನಾವಣೆಯಲ್ಲಿ ಅತಿ ಹೆಚ್ಚು ಸ್ಥಾನ ಬಿಜೆಪಿ ಗೆಲ್ಲಲಿದೆ. ಆ ನಂತರ ರಾಜ್ಯ ಕಾಂಗ್ರೆಸ್ ಸರ್ಕಾರದ ಪರಿಸ್ಥಿತಿ ಏನಾಗುತ್ತೆ ಅಂತಾ ನೋಡಿ. ನಮ್ಮಲ್ಲಿಂದ ಯಾರೂ ಕಾಂಗ್ರೆಸ್‌ಗೆ ಹೋಗಲ್ಲ. 10 ಜನ ಹೋದರೂ ಅದಕ್ಕೆ ಸಮನಾದ ಒಬ್ಬರನ್ನು ಕರೆತರಬಹುದು. ನನ್ನ ಜೊತೆಯೇ ಸಂಪರ್ಕದಲ್ಲಿ 40-45 ಜನ ಇದ್ದಾರೆ. ದೆಹಲಿಯವರು ಒಪ್ಪಿಗೆ ಕೊಟ್ಟರೆ ನಾಳೆಯೇ ಒಂದು ದಿನದ ಕೆಲಸ. ಆದರೆ ನಮಗೆ ಈಗ ಆಪರೇಷನ್ ಅಗತ್ಯವಿಲ್ಲ. ನಾವು ಈಗ ಸರ್ಕಾರ ಮಾಡಬೇಕಾಗಿಲ್ಲ. ಮುಂದೆ ನೋಡೋಣ ಅಂತ ಸಂತೋಷ್ ರಿವರ್ಸ್ ಆಪರೇಷನ್ ಸುಳಿವು ಕೊಟ್ಟಿದ್ದಾರೆ. ಪಕ್ಷ ಬಿಟ್ಟು ಹೋಗುವವರ ಬಗ್ಗೆ ಚಿಂತೆ ಬೇಡ. ಯಾರೂ ಕೂಡಾ ಪಕ್ಷ ಬಿಟ್ಟು ಹೋಗುವುದಿಲ್ಲ ಅಂತಲೂ ಸಭೆಯಲ್ಲಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ಬಜೆಟ್‌ನಲ್ಲಿ ಕೃಷ್ಣಾ ಮೇಲ್ದಂಡೆ ಯೋಜನೆ ನಿರ್ಲಕ್ಷ್ಯ – ಸಿಎಂರಿಂದ ಸಿಗುತ್ತಾ ಪರಿಹಾರ?
ಇನ್ನು ರಾಜ್ಯಾಧ್ಯಕ್ಷ ಸ್ಥಾನ, ವಿಪಕ್ಷ ನಾಯಕನ ಆಯ್ಕೆ ವಿಳಂಬ ಬಗ್ಗೆ ಸಭೆಯಲ್ಲಿ ಮಾತಾಡಿದ ಸಂತೋಷ್, ನೇಮಕ ಆಗಿದೆ ನಿಜ. ಆದರೆ ಅದರ ಬಗ್ಗೆ ಎಲ್ಲ ನೀವು ತಲೆಕೆಡೆಸಿಕೊಳ್ಳಬೇಡಿ. ಅದರ ಬಗ್ಗೆ ವರಿಷ್ಠರು ಸೂಕ್ತ ಸಂದರ್ಭದಲ್ಲಿ ಸೂಕ್ತ ತೀರ್ಮಾನ ಮಾಡಲಿದ್ದಾರೆ. ಆದರೆ ನೀವಂತೂ ಒಟ್ಟಾಗಿ ಪಕ್ಷದ ಕೆಲಸ ಮಾಡಿ. ಬೂತ್ ಮಟ್ಟದಿಂದ ಪಕ್ಷ ಸಂಘಟಿಸಿ, ಪಕ್ಷ ವಹಿಸಿದ ಜವಾಬ್ದಾರಿಯನ್ನು ಸಮರ್ಥವಾಗಿ ನಿಭಾಯಿಸಿ ಎಂದು ನಾಯಕರಿಗೆ ಸಂತೋಷ್ ಕಿವಿಮಾತು ಹೇಳಿದ್ದಾರೆ.
ಆಪರೇಷನ್ ಹಸ್ತದ ಆತಂಕ ಇರೋ ಹಿನ್ನೆಲೆಯಲ್ಲಿ ವಲಸಿಗರ ವಿಶ್ವಾಸ ಗಳಿಸುವ ಕಸರತ್ತಿಗೂ ಬಿಜೆಪಿ ಮುಂದಾಗಿದೆ. ಈ ಸಭೆಯಲ್ಲಿ ಮಾತಾಡಿರುವ ಬಿಎಲ್ ಸಂತೋಷ್, ಬಾಂಬೆ ಬಾಯ್ಸ್, ವಲಸಿಗರು ಅಂತಾ ನಮ್ಮ ಜೊತೆ ಬಂದವರನ್ನು ನಾವೇ ಹೇಳುವುದು ಬೇಡ ಎಂದು ಎಲ್ಲರಿಗೂ ತಾಕೀತು ಮಾಡಿದ್ದಾರೆ. ಅವರು ನಮ್ಮ ಕಷ್ಟ ಕಾಲಕ್ಕೆ ನಮ್ಮ ಜೊತೆ ಬಂದಿದ್ದಾರೆ. ಅವರು ಹೋಗುತ್ತಾರೆ ಅಂತಾ ನಾವೇ ಹೇಳುವುದು ಸರಿಯಲ್ಲ ಎಂದು ವಲಸಿಗರ ಪರ ಸಭೆಯಲ್ಲಿ ಸಂತೋಷ್ ಬ್ಯಾಟಿಂಗ್ ಮಾಡಿದ್ದಾರೆ.
ಈ ಸಭೆಗೆ ಶಾಸಕ ಎಸ್‌ಟಿ ಸೋಮಶೇಖರ್, ಶಿವರಾಂ ಹೆಬ್ಬಾರ್, ಮಾಜಿ ಸಚಿವರಾದ ವಿ ಸೋಮಣ್ಣ, ನಾರಾಯಣ ಗೌಡ, ಶಂಕರ್ ಪಾಟೀಲ್ ಮುನೇನಕೊಪ್ಪ, ಮಾಜಿ ಶಾಸಕ ಕುಮಾರ್ ಬಂಗಾರಪ್ಪ, ಮಾಜಿ ಶಾಸಕ ರೇಣುಕಾಚಾರ್ಯ ಮತ್ತಿತರರು ಗೈರಾಗುವ ಮೂಲಕ ಸೆಡ್ಡು ಹೊಡೆದಿದ್ದಾರೆ. ಸಭೆಗೆ ರಮೇಶ್ ಜಾರಕಿಹೊಳಿ ಅಂಡ್ ಟೀಂ, ಮಾಜಿ ಸಚಿವ ಡಾ.ಕೆ ಸುಧಾಕರ್, ಬಿಸಿ ಪಾಟೀಲ್ ಮತ್ತಿತರ ವಲಸಿಗರು ಭಾಗವಹಿಸಿದರು. ಇದನ್ನೂ ಓದಿ: ಮಾರ್ಗ ಮಧ್ಯೆ ಕೈಕೊಟ್ಟ ಅಂಬುಲೆನ್ಸ್ – ಆನೆ ದಾಳಿಯಿಂದ ಗಾಯಗೊಂಡಿದ್ದ ಶಾರ್ಪ್ ಶೂಟರ್ ಅರಣ್ಯ ಸಿಬ್ಬಂದಿ ಸಾವು
Web Stories