ಶಿವಮೊಗ್ಗ: ಬಿಜೆಪಿಯಲ್ಲಿ ಆರ್‌ಎಸ್‌ಎಸ್ ಸಂಘಟನಾ ಕಾರ್ಯದರ್ಶಿ ಸಂತೋಷ್ ಹಿಡಿತ ಶುರುವಾಗಿದ್ದು, ಯಡಿಯೂರಪ್ಪ-ಶೋಭಾಗೆ ಬೆಲೆ ಇಲ್ಲದಂತಾಗಿದೆ ಎಂದು ಕಾಂಗ್ರೆಸ್ ಮುಖಂಡ ಬೇಳೂರು ಗೋಪಾಲಕೃಷ್ಣ ಹೇಳಿದ್ದಾರೆ.
ನಗರದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಮೈತ್ರಿ ಅಭ್ಯರ್ಥಿ ಸುಮಾರು 20 ಸಾವಿರ ಮತಗಳ ಅಂತರದಲ್ಲಿ ಗೆಲ್ಲುತ್ತಾರೆ. ಪ್ರಧಾನಿ ಮೋದಿ ಹೆಸರಲ್ಲಿ ಬಿಎಸ್‍ವೈ ಮತ ಕೇಳಿದ್ದು, ತಮ್ಮ ಅಸ್ತಿತ್ವ ಕಳೆದುಕೊಂಡಿರುವುದಕ್ಕೆ ಸಾಕ್ಷಿಯಾಗಿದೆ. ಅಲ್ಲದೇ ರಾಜ್ಯ ಬಿಜೆಪಿಯಲ್ಲಿ ಸಂತೋಷ್ ಜೀ ಅವರ ಹಿಡಿತ ಶುರುವಾಗಿದ್ದು, ಯಡಿಯೂರಪ್ಪ ಹಾಗೂ ಶೋಭಾ ಕರಂದ್ಲಾಜೆ ಅವರ ಮಾತಿಗೆ ಬೆಲೆ ಇಲ್ಲದಂತಾಗಿದೆ ಎಂದು ಹೇಳಿದ್ದಾರೆ.
Advertisement
Advertisement
ನನಗೆ ಮೋಸ ಮಾಡಿದವರಿಗೆ ಅಧಿಕಾರ ಸಿಗಬಾರದು ಎಂದು ನಾನು ಬಯಸಿದ್ದೆ. ಇಂದು ನನ್ನ ಹರಕೆಯಂತೆಯೇ ಆಗಿದೆ. ಸಮ್ಮಿಶ್ರ ಸರ್ಕಾರ ಬಿದ್ದು ಹೋಗುತ್ತೆ ಎಂಬ ಮಾತು ಕೇಳಿ ಕಳೆದ ವರ್ಷದಿಂದ ಕೇಳಿ ಕೇಳಿ ಸಾಕಾಗಿದ್ದು, ಇವರಿಗೆ ಭ್ರಮೆ ಅಷ್ಟೇ ಎಂದರು. ಅಲ್ಲದೇ ಚುನಾವಣೆ ಬಳಿಕ ಸರ್ಕಾರ ಗಟ್ಟಿಯಾಗಿ ನಿಲ್ಲಲಿದ್ದು, ನೀತಿ ಸಂಹಿತೆಯ ಕಾರಣಗಳಿಂದ ಸರ್ಕಾರದ ಪ್ರಗತಿ ಕುಂಠಿತ ಆಗುತ್ತಿದೆ ಎಂದು ತಿಳಿಸಿದರು.
Advertisement
Advertisement
ಬಿಜೆಪಿ ಕೈಗೊಂಬೆಯಾದ ಡಿಸಿ: ಜಿಲ್ಲೆಯಲ್ಲಿ ಬಿಜೆಪಿ ತಾಳಕ್ಕೆ ತಕ್ಕಂತೆ ಜಿಲ್ಲಾಧಿಕಾರಿಗಳು ಕುಣಿಯುತ್ತಿದ್ದಾರೆ. ಅವರಿಗೆ ನಮ್ಮ ಸರ್ಕಾರ ಇದೆ ಎಂಬುದು ಮರೆತು ಹೋಗಿದೆ. ಬಿಜೆಪಿ ಶಾಸಕರಿಗೆ ಭಯಪಟ್ಟಿರುವ ಜಿಲ್ಲಾಧಿಕಾರಿಗಳು ಅವರ ಕೈಗೊಂಬೆ ಆಗಿದ್ದು, ಆ ಮೂಲಕ ಸರ್ಕಾರಕ್ಕೆ ಕೆಟ್ಟ ಹೆಸರು ತರಲು ಪ್ರಯತ್ನಿಸುತ್ತಿದ್ದಾರೆ. ಸಾಗರ ಶಾಸಕರು ಮರಳು ದಂಧೆ ನಡೆಸಲು ಹೊರಟ್ಟಿದ್ದರು. ಅಲ್ಲದೇ ಒಂದು ಲಾರಿಗೆ ಹತ್ತು ಸಾವಿರ ಕೇಳಿದ್ದರು. ಇದು ಸಾಧ್ಯವಾಗದೆ ಇದ್ದಾಗ ಪ್ರತಿಭಟನೆಗೆ ಮುಂದಾಗಿದ್ದಾರೆ. ಇಂಥ ಶಾಸಕರನ್ನ ಇದೂವರೆಗೂ ನಾನು ನೋಡಿರಲಿಲ್ಲ. ಹಾಲಪ್ಪ ಅವರ ಸಹೋದರರ ಮಕ್ಕಳು ಈಗಲೂ ಸಾಗರ ತಾಲೂಕಿನ ಆವಿನಹಳ್ಳಿಯಲ್ಲಿ ಕಳ್ಳತನದಿಂದ ಮರಳು ಹೊಡೆಯುತ್ತಿದ್ದಾರೆ. ಆದ್ದರಿಂದ ಇದರ ವಿರುದ್ಧ ಪ್ರತಿಭಟನೆ ನಡೆಸಲು ಮೇ 23ರ ನಂತರ ಜಿಲ್ಲಾಧಿಕಾರಿಗಳ ಕಚೇರಿ ಎದುರು ಅಮರಣಾಂತ ಉಪವಾಸ ಸತ್ಯಾಗ್ರಹ ನಡೆಸುತ್ತೇನೆ ಎಂದರು.