ಹಿಂಸಾಚಾರ ಪೀಡಿತ ಪ್ರದೇಶ ಭೇಟಿಗೆ ಮುಂದಾದ ತೇಜಸ್ವಿ ಸೂರ್ಯ ಪೊಲೀಸರ ವಶಕ್ಕೆ

Public TV
2 Min Read
TEJASVI SURYA2

ಜೈಪುರ: ಹಿಂಸಾಚಾರ ಪೀಡಿತ ರಾಜಸ್ಥಾನದ ಕರೌಲಿಗೆ ಭೇಟಿ ನೀಡಲು ಮುಂದಾಗಿದ್ದ ಬಿಜೆಪಿ ಯುವ ಮೋರ್ಚಾ ರಾಷ್ಟ್ರೀಯ ಅಧ್ಯಕ್ಷ ಹಾಗೂ ಸಂಸದ ತೇಜಸ್ವಿ ಸೂರ್ಯ ಅವರನ್ನು ತಡೆದಿದ್ದು, ಪೊಲೀಸರು ವಶಕ್ಕೆ ಪಡೆದಿದ್ದಾರೆ.

ರಾಜ್ಯ ಪೊಲೀಸರು ದೌಸಾ ಗಡಿಯಲ್ಲಿ ತಡೆದಾಗ ಸಂಸದ ತೇಜಸ್ವಿ ಸೂರ್ಯ, ರಾಜಸ್ಥಾನದ ಬಿಜೆಪಿ ಘಟಕದ ಅಧ್ಯಕ್ಷ ಸತೀಶ್ ಪೂನಿಯಾ ಮತ್ತು ಹಲವಾರು ಬೆಂಬಲಿಗರೊಂದಿಗೆ ಇದ್ದರು. ಸೂರ್ಯ ಈ ಹಿಂದೆ ತಮ್ಮ ಭೇಟಿ ಕುರಿತು ಟ್ವೀಟ್ ಮಾಡಿದ್ದರು. ಬಿಜೆಪಿ ಬೆಂಬಲಿಗರು ಅಲ್ಲಿಗೆ ತಲುಪಬೇಕು ಎಂದು ಕರೆ ನೀಡಿದ್ದರು. ಇದನ್ನೂ ಓದಿ: ಮಸೀದಿಯಿಂದ ಧ್ವನಿವರ್ಧಕ ತೆಗೆಸುವುದು ಸರ್ಕಾರಕ್ಕೆ ನಾಚಿಕೆಗೇಡಿನ ಸಂಗತಿ: ಸಂಜಯ್‌ ನಿರುಪಮ್‌

ಗುಂಪು ಪ್ರವೇಶಿಸದಂತೆ ಬ್ಯಾರಿಕೇಡ್‌ಗಳನ್ನು ನಿರ್ಮಿಸಲಾಗಿದೆ. ಗಲಭೆ ಪೀಡಿತ ಪ್ರದೇಶಕ್ಕೆ ಬಿಜೆಪಿ ಭೇಟಿ ನೀಡುವುದನ್ನು ಕಾಂಗ್ರೆಸ್ ನೇತೃತ್ವದ ರಾಜ್ಯ ಸರ್ಕಾರ ನಿರ್ಬಂಧಿಸಿದೆ ಎಂದು ಆರೋಪಿಸಿರುವ ಸೂರ್ಯ, ಅಲ್ಲಿಗೆ ತಲುಪುವವರೆಗೂ ನಾವು ಜಾಗ ಬಿಟ್ಟು ಕದಲುವುದಿಲ್ಲ ಎಂದು ಪಟ್ಟು ಹಿಡಿದಿದ್ದರು. ಈ ವೇಳೆ ಅವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಏಪ್ರಿಲ್‌ 2ರಂದು ನವರಾತ್ರಿ ಸಂದರ್ಭದಲ್ಲಿ ಕರೌಲಿಯಲ್ಲಿ ಎರಡು ಸಮುದಾಯಗಳ ನಡುವೆ ಘರ್ಷಣೆಯಾಗಿತ್ತು. ಕಾನೂನು ಸುವ್ಯವಸ್ಥೆ ದೃಷ್ಟಿಯಿಂದ ಈ ಪ್ರದೇಶದಲ್ಲಿ ಏ.12ರವರೆಗೂ ಕರ್ಫ್ಯೂ ಘೋಷಿಸಲಾಗಿತ್ತು. ಇದನ್ನೂ ಓದಿ: ಜಲಿಯನ್ ವಾಲಾಬಾಗ್ ಹತ್ಯಾಕಾಂಡದಲ್ಲಿ ಹುತಾತ್ಮರಾದವರ ತ್ಯಾಗ ಮುಂದಿನ ಪೀಳಿಗೆಗೆ ಪ್ರೇರಣೆ: ಮೋದಿ

tejasvi surya

ನವ ಸಂವತ್ಸರದಂದು (ಹಿಂದೂ ಹೊಸ ವರ್ಷ) ಮುಸ್ಲಿಂ ಪ್ರಾಬಲ್ಯದ ಪ್ರದೇಶದಲ್ಲಿ ಸಾಗುತ್ತಿದ್ದ ಬೈಕ್ ರ‍್ಯಾಲಿ ವೇಳೆ ಕಲ್ಲು ತೂರಾಟದ ಹಿನ್ನೆಲೆಯಲ್ಲಿ ಬೆಂಕಿ ಹಚ್ಚುವಿಕೆ ಮತ್ತು ವಿಧ್ವಂಸಕ ಕೃತ್ಯಗಳ ನಂತರ ಕರ್ಫ್ಯೂ ವಿಧಿಸಲಾಗಿತ್ತು. ಮೆರವಣಿಗೆಯು ಸೂಕ್ಷ್ಮ ಪ್ರದೇಶದಲ್ಲಿ ಹಾದು ಹೋಗುತ್ತಿದ್ದಾಗ ರ‍್ಯಾಲಿಯಲ್ಲಿದ್ದವರು ಪ್ರಚೋದನಕಾರಿ ಘೋಷಣೆಗಳನ್ನು ಕೂಗಿದ್ದರು. ಇದು ಗುಂಪು ದಾಳಿಗೆ ಕಾರಣವಾಗಿತ್ತು. ಈ ವೇಳೆ 8 ಪೊಲೀಸರು ಸೇರಿದಂತೆ 11 ಮಂದಿ ಗಾಯಗೊಂಡಿದ್ದರು.

ವಿಶ್ವ ಹಿಂದೂ ಪರಿಷತ್ (ವಿಎಚ್‌ಪಿ), ರಾಷ್ಟ್ರೀಯ ಸ್ವಯಂಸೇವಕ ಸಂಘ (ಆರ್‌ಎಸ್‌ಎಸ್) ಮತ್ತು ಬಜರಂಗದಳ ಸೇರಿದಂತೆ ಬಲಪಂಥೀಯ ಸಂಘಟನೆಗಳು ರ‍್ಯಾಲಿ ನಡೆಸಿದ್ದವು ಎಂದು ಪೊಲೀಸರು ತಿಳಿಸಿದ್ದಾರೆ. ಇದನ್ನೂ ಓದಿ: ಮುಖಾಮುಖಿ ಭೇಟಿಯಾದ ನಂತರವಷ್ಟೇ ಈಶ್ವರಪ್ಪ ರಾಜೀನಾಮೆ ನಿರ್ಧಾರ: ಬೊಮ್ಮಾಯಿ

ಕೋಮು ಹಿಂಸಾಚಾರದ ನಂತರ ಪೊಲೀಸರು 46 ಜನರನ್ನು ಬಂಧಿಸಿ ವಿಚಾರಣೆಗಾಗಿ ಏಳು ಮಂದಿಯನ್ನು ಕಸ್ಟಡಿಗೆ ತೆಗೆದುಕೊಂಡಿದ್ದಾರೆ ಎಂದು ಭರತ್‌ಪುರ ಶ್ರೇಣಿಯ ಪೊಲೀಸ್ ಮಹಾನಿರೀಕ್ಷಕ ಪ್ರಶಾನ್ ಕುಮಾರ್ ಖಮೇಸ್ರಾ ಮಾಹಿತಿ ನೀಡಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *