– ದೋಸ್ತಿ ಸರ್ಕಾರದಲ್ಲಿ ಮೂರು ಗುಂಪು
– ಜೆಡಿಎಸ್ ನಂಬರ್ ಝೀರೋ ಆದ್ರೂ ಅಚ್ಚರಿ ಇಲ್ಲ: ತೇಜಸ್ವಿನಿಗೌಡ
ಬೆಂಗಳೂರು: ಲೋಕಸಭಾ ಚುನಾವಣೆಯಲ್ಲಿ ಎಷ್ಟು ಸೀಟು ಗೆಲ್ಲುತ್ತೇವೆಂದು ಈಗಲೇ ಹೇಳುವುದು ಬೇಡ. ಆದರೆ ಈ ಚುನಾವಣೆಯಲ್ಲಿಯೂ ಕಪ್ ನಮ್ಮದೇ ಎಂದು ಬಿಜೆಪಿ ವಕ್ತಾರ ಗೋ.ಮಧುಸೂದನ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ನಗರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಈ ಹಿಂದೆ ಕರ್ನಾಟಕದಲ್ಲಿ ಬಿಜೆಪಿ ಮೂರನೇ ಸ್ಥಾನದಲ್ಲಿತ್ತು. ಈಗ ಮೊದಲನೇ ಸ್ಥಾನದಲ್ಲಿದೆ. ಆದರೆ ಮೊದಲ ಸ್ಥಾನದಲ್ಲಿದ್ದ ಕಾಂಗ್ರೆಸ್ ಎರಡನೇ ಸ್ಥಾನಕ್ಕೆ ಕುಸಿದಿದೆ. ಏನೇ ಆದರೂ ರಾಜ್ಯದಲ್ಲಿ ಬಿಜೆಪಿ ಹೆಚ್ಚು ಕ್ಷೇತ್ರಗಳಲ್ಲಿ ಜಯಗಳಿಸುತ್ತದೆ ಎಂದು ಹೇಳಿದರು.
Advertisement
Advertisement
ತುಮಕೂರು ಲೋಕಸಭಾ ಕ್ಷೇತ್ರವನ್ನು ಕಾಂಗ್ರೆಸ್‍ನಲ್ಲೇ ಉಳಿಸಿಕೊಳ್ಳಲು ಆಗಲಿಲ್ಲ ಎನ್ನುವ ನೋವು ಉಪಮುಖ್ಯಮಂತ್ರಿ ಜಿ.ಪರಮೇಶ್ವರ್ ಅವರಿಗೆ ಕಾಡುತ್ತಿದೆ. ಕಾಂಗ್ರೆಸ್-ಜೆಡಿಎಸ್ ಮೈತ್ರಿ ಒಂದು ರೀತಿಯಲ್ಲಿ ವಿ3 ಆಗುತ್ತಿದೆ. ಎರಡು ಪಕ್ಷಗಳು ಸೇರಿ ಮೈತ್ರಿ ಮಾಡಿಕೊಂಡಿವೆ. ಆದರೆ ಈಗ ದೋಸ್ತಿ ಸರ್ಕಾರದಲ್ಲಿ ಮೂರು ಗುಂಪುಗಳಾಗಿವೆ ಎಂದು ವ್ಯಂಗ್ಯವಾಡಿದರು.
Advertisement
ಬೆಂಗಳೂರು ಉತ್ತರ ಕ್ಷೇತ್ರಕ್ಕೆ ಮೈತ್ರಿ ಅಭ್ಯರ್ಥಿ ಹಾಕಲು ಜೆಡಿಎಸ್‍ಗೆ ಸಾಧ್ಯವಾಗುತ್ತಿಲ್ಲ. ಇತ್ತ ಉಡುಪಿ-ಚಿಕ್ಕಮಗಳೂರು, ಉತ್ತರ ಕನ್ನಡ, ವಿಜಯಪುರದಲ್ಲಿ ಅಭ್ಯರ್ಥಿಯೇ ಇಲ್ಲ ಎಂದ ಅವರು, ಸಚಿವ ಆರ್.ವಿ.ದೇಶಪಾಂಡೆ ಅವರ ಪರಿಸ್ಥಿತಿ ನೋಡಿದರೆ ಪಾಪ ಅನಿಸುತ್ತದೆ. ಅವರೇ ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡರ ಮನೆಗೆ ಹೋಗಿದ್ದರು. ದೇಶಪಾಂಡೆ ಅವರದ್ದು ಎಂತಹ ದಯನೀಯ ಸ್ಥಿತಿ ಎಂದು ಲೇವಡಿ ಮಾಡಿದರು.
Advertisement
ಧಾರವಾಡದಲ್ಲಿ ನಿರ್ಮಾಣ ಹಂತದ ಕಟ್ಟಡ ಕುಸಿದ ದುರಂತ ವಿಚಾರವಾಗಿ ಪ್ರತಿಕ್ರಿಯೆ ನೀಡಿದ ಅವರು, ಇದರಲ್ಲಿ ರಾಜ್ಯ ಸರ್ಕಾರದ ತಪ್ಪಿದೆ. ಕಟ್ಟಡ ಕುಸಿದು, ಭಾರೀ ಅನಾಹುತ ಸಂಭವಿಸಿದ್ದರೂ ಕಟ್ಟಡದ ಮಾಲೀಕರನ್ನು ವಶಕ್ಕೆ ಪಡೆದಿರಲಿಲ್ಲ. ಈಗ ಗಂಗಪ್ಪ ಕಂತಿ ಅವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಕಟ್ಟಡದ ಜಾಗವು ಮಾಜಿ ಸಚಿವ ವಿನಯ್ ಕುಲಕರ್ಣಿ ಅವರ ಮಾವನ ಹೆಸರಲ್ಲಿದೆ. ಆದರೆ ಜಾಗದ ನಿಜವಾದ ಮಾಲೀಕ ವಿನಯ್ ಕುಲಕರ್ಣಿ. ಅದು ಬೇನಾಮಿ ಆಸ್ತಿಯಾಗಿದೆ. ಹೀಗಾಗಿ ಎಫ್‍ಐಆರ್ ನಲ್ಲಿ ಮಾಜಿ ಸಚಿವ ಹೆಸರು ಸೇರಿಸಬೇಕು ಎಂದು ಆಗ್ರಹಿಸಿದರು.
ಪ್ರಧಾನಿ ನರೇಂದ್ರ ಮೋದಿ ಅವರನ್ನು ಹತ್ಯೆ ಮಾಡಿ ಎಂದು ಮಾಜಿ ಶಾಸಕ ಬೇಳೂರು ಗೋಪಾಲಕೃಷ್ಣ ಹೇಳಿಕೆ ನೀಡಿದ್ದರು. ಈ ಸಂಬಂಧ ಅವರ ಮೇಲೆ ಇನ್ನೂ ಕ್ರಮಕೈಗೊಂಡಿಲ್ಲ. ಇದಕ್ಕೆ ಕಾಂಗ್ರೆಸ್ ನೇರ ಹೊಣೆಯಾಗಿದೆ. ಪ್ರಜಾಪ್ರಭುತ್ವದ ಮೇಲೆ ಕಾಂಗ್ರೆಸ್‍ಗೆ ನಂಬಿಕೆ ಇದ್ದರೆ ಗೋಪಾಲಕೃಷ್ಣ ಅವರನ್ನು ಬಂಧಿಸಲಿ ಎಂದು ಒತ್ತಾಯಿಸಿದರು.
ಸುಮಲತಾ ಅಂಬರೀಶ್ ಅವರು ನಾಮಪತ್ರ ಸಲ್ಲಿಸುವ ವೇಳೆ ನೆರೆದಿದ್ದ ಜನಸ್ತೋಮ ಕಂಡು ಮೈತ್ರಿ ಸರ್ಕಾರದ ಮುಖಂಡರ ಜಂಘಾಬಲವೇ ಉಡುಗಿ ಹೋಗಿದೆ. ಇದರಿಂದಾಗಿ ಮಾಜಿ ಸಿಎಂ ಸಿದ್ದರಾಮಯ್ಯ ಅವರು ತಮ್ಮ ಮನೆಗೆ ಬಂದಿದ್ದ ಮಂಡ್ಯ ಮತ್ತು ಹಾಸನದ ಕಾಂಗ್ರೆಸ್ ಕಾರ್ಯಕರ್ತರ ಮೇಲೆ ಕೂಗಾಡಿದ್ದಾರೆ. ಇತ್ತ ಸಿಎಂ ಕುಮಾರಸ್ವಾಮಿ ಅವರು ಮಾಧ್ಯಮಗಳ ಹಾಗೂ ಚಿತ್ರೋದ್ಯಮದವರ ಮೇಲೆ ಕಿಡಿಕಾರುತ್ತಿದ್ದಾರೆ ಎಂದರು.
ವಿಧಾನ ಪರಿಷತ್ ಸದಸ್ಯೆ ತೇಜಸ್ವಿನಿ ಅವರು ಮಾತನಾಡಿ, ಧಾರವಾಡದಲ್ಲಿ ನಡೆದ ಕಟ್ಟಡ ದುರಂತದ ಸ್ಥಳಕ್ಕೆ ಇದೂವರೆಗೆ ಸಿಎಂ ಕುಮಾರಸ್ವಾಮಿ ಭೇಟಿಕೊಟ್ಟಿಲ್ಲ. ಅವರಿಗೆ ತಮ್ಮ ಮಗ ಮಂಡ್ಯದಲ್ಲಿ ಸ್ಪರ್ಧೆ ಮಾಡುವುದೇ ಮುಖ್ಯವಾಗಿದೆ. ಹೀಗಾಗಿ ಸಿಎಂ ಧಾರವಾಡಕ್ಕೆ ಹೋಗದೇ ಮಂಡ್ಯದಲ್ಲೇ ಕೂತಿದ್ದಾರೆ. ಈ ಬಾರಿ ಜೆಡಿಎಸ್ ನಂಬರ್ ಝೀರೋ ಆದ್ರೂ ಅಚ್ಚರಿ ಇಲ್ಲ ಎಂದರು.