2019 ರಲ್ಲಿ ಬಿಜೆಪಿ ಅಧಿಕಾರಕ್ಕೆ ಬರುವುದು ಹಗಲು ಕನಸು: ಚಂದ್ರಬಾಬು ನಾಯ್ಡು

Public TV
1 Min Read
modi naidu

ವಿಜಯವಾಡ: 2019 ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಅಧಿಕಾರಕ್ಕೆ ಬರುವುದಿಲ್ಲ ಇದು ಹಗಲು ಕನಸು ಎಂದು ಆಂಧ್ರಪ್ರದೇಶ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಹೇಳಿದ್ದಾರೆ.

ಪ್ರಧಾನಿ ನರೇಂದ್ರ ಮೋದಿಯವರು ಪ್ರಚಾರ ಪ್ರಿಯರು ನೀಡಿದ ಭರವಸೆಗಳನ್ನು ಈಡೇರಿಸುವಲ್ಲಿ ವಿಫಲರಾಗಿದ್ದಾರೆ ಎಂದು ವಾಗ್ದಾಳಿ ನಡೆಸಿದರು.

ಟಿಡಿಪಿ ವಾರ್ಷಿಕ ಸಮ್ಮೇಳನ ಮಹಾನಾಡು ಉದ್ಘಾಟಿಸಿ ಮಾತನಾಡಿದ ಅವರು ಕೇಂದ್ರ ಸರ್ಕಾರಗಳ ರಚನೆಯಲ್ಲಿ ಟಿಡಿಪಿ ಬಹಳ ಮುಖ್ಯ ಪಾತ್ರವನ್ನು ವಹಿಸುತ್ತಾ ಬಂದಿದೆ. ಪಕ್ಷಕ್ಕೆ ದೇಶದ ರಾಜಕೀಯ ಲೆಕ್ಕಾಚಾರವನ್ನು ಬದಲಿಸುವಷ್ಟು ಶಕ್ತಿ ಇದೆ. ಬಿಜೆಪಿಯನ್ನು ಕಟ್ಟಿಹಾಕಲು ಸಮಾನ ಮನಸ್ಕ ಪಕ್ಷಗಳೊಂದಿಗೆ ಮೈತ್ರಿ ಮಾಡಿಕೊಳ್ಳಲು ತಯಾರಿದ್ದೇವೆ ಎಂದು ತಿಳಿಸಿದರು.

ಹೊಸದಾಗಿ ನಿರ್ಮಾಣವಾದ ಆಂಧ್ರ ರಾಜ್ಯಕ್ಕೆ ಭರವಸೆಯಂತೆ ವಿಶೇಷ ಅನುದಾನವನ್ನು ಕೇಂದ್ರ ಸರ್ಕಾರ ನೀಡಲಿಲ್ಲ. ಕಾಂಗ್ರೆಸ್ ವಿರೋಧ ಪಕ್ಷದಲ್ಲಿದ್ದು ಹೆಚ್ಚಿನದನ್ನು ಮಾಡಲಿಕ್ಕೆ ಆಗುವುದಿಲ್ಲ ಎಂದು ಹೇಳಿ ಕೇಂದ್ರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ಆಂಧ್ರಪ್ರದೇಶಕ್ಕೆ ವಿಶೇಷ ಸ್ಥಾನಮಾನ ನೀಡದಿದ್ದಕ್ಕೆ ಎನ್‍ಡಿಎ ಮೈತ್ರಿ ಕೂಟದಿಂದ ಪಕ್ಷ ಹೊರಬಂದಿದೆ. ರಾಜ್ಯದ ಜನತೆಗೆ ಮೋಸ ಮಾಡಿರುವ ಕೇಂದ್ರದ ಬಿಜೆಪಿ ಸರ್ಕಾರ ಈಗ ವೈಎಸ್‍ಆರ್ ಕಾಂಗ್ರೆಸ್ ಜೊತೆ ಸೇರಿ ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹಾಳು ಮಾಡಲು ನೋಡುತ್ತಿದೆ ಎಂದು ಕಿಡಿಕಾರಿದರು.

ಹೈದ್ರಾಬಾದ್ ತೆಲಂಗಾಣಕ್ಕೆ ಸೇರಿರುವುದರಿಂದ ಆಂಧ್ರ ಪ್ರದೇಶ ರಾಜ್ಯಕ್ಕೆ ವಿಶೇಷ ಅನುದಾನವನ್ನು ನೀಡುವಂತೆ ಕೇಂದ್ರ ಸರ್ಕಾರವನ್ನು ಆಗ್ರಹಿಸುತ್ತಾ ಬಂದಿದೆ. 2014 ರಲ್ಲಿ ಘೋಷಣೆಯಾದ ಆಂಧ್ರ ಪ್ರದೇಶ ರಾಜ್ಯಕ್ಕೆ ಅಂದಿನ ಪ್ರಧಾನಿ ಮನಮೋಹನ್ ಸಿಂಗ್ ಅವರು ಮೊದಲ 5 ವರ್ಷಗಳ ಕಾಲ ವಿಶೇಷ ಅನುದಾನವನ್ನು ನೀಡಲಾಗುತ್ತದೆ ಎಂದು ಘೋಷಿಸಿದ್ದರು.

14ನೇ ಹಣಕಾಸು ಆಯೋಗದಲ್ಲಿ ಆಂಧ್ರಕ್ಕೆ ವಿಶೇಷ ಅನುದಾನಕ್ಕೆ ನೀಡುವ ಸಂಬಂಧ ಯಾವುದೇ ಪ್ರಸ್ತಾಪ ಇಲ್ಲ ಎಂದು ಹೇಳಿ ಎನ್‍ಡಿಎ ಸರ್ಕಾರ ಆರ್ಥಿಕ ನೆರವು ನೀಡಲು ನಿರಾಕರಿಸಿತ್ತು.

Share This Article
Leave a Comment

Leave a Reply

Your email address will not be published. Required fields are marked *