ಬೆಂಗಳೂರು: ಬಿಜೆಪಿ (BJP) ನಾಯಕರು ಮತ್ತು ಬಿಜೆಪಿಗೆ ಬೆಂಬಲ ಕೊಟ್ಟಿರುವ ಪಕ್ಷದ ನಾಯಕರು ರಾಹುಲ್ ಗಾಂಧಿ(Rahul Gandhi) ವಿರುದ್ಧ ಜೀವ ಬೆದರಿಕೆ ಹಾಕುತ್ತಿದ್ದು ಕೂಡಲೇ ಎಲ್ಲರನ್ನು ಬಂಧಿಸಬೇಕು ಎಂದು ಸಿಎಂ ಸಿದ್ದರಾಮಯ್ಯ ಆಗ್ರಹಿಸಿದ್ದಾರೆ.
ಗೃಹ ಕಚೇರಿ ಕೃಷ್ಣದಲ್ಲಿ ಸುದ್ದಿಗೋಷ್ಠಿ ನಡೆಸಿದ ಮಾತನಾಡಿದ ಅವರು, ಇತ್ತೀಚೆಗೆ ರಾಹುಲ್ ಗಾಂಧಿ ಮೇಲೆ ಬಿಜೆಪಿಯವರು ಗಧಾಪ್ರಹಾರ ನಡೆಸುತ್ತಿದ್ದಾರೆ. ಟೀಕೆಗಳನ್ನು ಮಾತ್ರ ಮಾಡುತ್ತಿಲ್ಲ. ಸುಳ್ಳು ಆರೋಪ ಮಾತ್ರ ಮಾಡುತ್ತಿಲ್ಲ. ಅವರಿಗೆ ಕೊಲೆ ಬೆದರಿಕೆ ಆರೋಪ ಮಾಡುತ್ತಿದ್ದಾರೆ. ರಾಹುಲ್ ಗಾಂಧಿ ಅವರ ಜನಪ್ರಿಯತೆ ಕುಗ್ಗಿಸಲು, ಅವರನ್ನ ಹಣಿಯಲು ಆರೋಪ ಮಾಡುತ್ತಿದ್ದಾರೆ. ಇಂತಹ ಆರೋಪಗಳಿಗೆ, ಗೊಡ್ಡು ಬೆದರಿಕೆಗಳಿಗೆ, ಕೊಲೆ ಬೆದರಿಕೆಗೆ ರಾಹುಲ್ ಗಾಂಧಿ ಹೆದರುವುದಿಲ್ಲ ಎಂದು ಬಿಜೆಪಿ ನಾಯಕರಿಗೆ ತಿರುಗೇಟು ನೀಡಿದ್ದಾರೆ. ಇದನ್ನೂ ಓದಿ: ಬಿಜೆಪಿ ಯತ್ನಾಳ್‌ರನ್ನ ಪಕ್ಷದಲ್ಲಿ ಇಟ್ಟುಕೊಂಡಿರೋದೆ ಬೊಗಳಿಸೋಕೆ: ಸಿದ್ದರಾಮಯ್ಯ
ರಾಹುಲ್ ಗಾಂಧಿ ಇಂದಿರಾಗಾಂಧಿ (Indira Gandhi) ಕುಟುಂಬದಿಂದ ಬಂದವರು. ದೇಶಕ್ಕಾಗಿ ಪ್ರಾಣ ತೆತ್ತವರು. ಅವರ ತಂದೆ ಕೂಡಾ ಬಾಂಬ್ ಸ್ಫೋಟದಲ್ಲಿ ಜೀವ ಕಳೆದುಕೊಂಡವರು. ಬಿಜೆಪಿ ನಾಯಕರು ಇತ್ತೀಚೆಗೆ ತಾರ್ವಿಂದರ್ ಸಿಂಗ್ ಮಾರ್ವ, ನೇರವಾಗಿ ರಾಹುಲ್ ಗಾಂಧಿಗೆ ನೀವು ಸರಿಯಾಗಿ ನಡೆದುಕೊಳ್ಳದೇ ಇದ್ದರೆ ಇಂದಿರಾಗಾಂಧಿಗೆ ಆದ ಗತಿಯೇ ನಿಮಗೂ ಆಗುತ್ತೆ ಎಂದು ಬೆದರಿಕೆ ಹಾಕಿದ್ದಾರೆ. ರೈಲ್ವೆ ಖಾತೆ ರಾಜ್ಯ ಸಚಿವರು ರವನೀತ್ ಬಿಟ್ಟು ಅವರು ರಾಹುಲ್ ಅವರಿಗೆ ನೀವು ಒಬ್ಬ ಭಯೋತ್ಪಾದಕ ಎಂದು ಕರೆದಿದ್ದಾರೆ. ಇದರ ಅರ್ಥ ಸಾರ್ವಜನಿಕರನ್ನ ಎತ್ತಿ ಕಟ್ಟೋದು. ಇಂತಹ ಪ್ರಚೋದನೆ ಮಾತು ಆಡಿ ರಾಹುಲ್ ವಿರುದ್ಧ ಜನರನ್ನು ಎತ್ತಿಕಟ್ಟುವ ಪ್ರಯತ್ನ ಮಾಡುತ್ತಿದ್ದಾರೆ ಎಂದು ಆರೋಪ ಮಾಡಿದರು. ಇದನ್ನೂ ಓದಿ: ಡ್ರಗ್ಸ್ ಹಾವಳಿ ತಡೆಗೆ ಸಚಿವರ ನೇತೃತ್ವದಲ್ಲಿ ಟಾಸ್ಕ್ ಫೋರ್ಸ್ ರಚನೆ: ಸಿಎಂ ಘೋಷಣೆ
ಏಕನಾಥ್ ಶಿಂಧೆ ರಾಹುಲ್ ಗಾಂಧಿ ನಾಲಿಗೆ ಕತ್ತರಿಸಿದರೆ 11 ಲಕ್ಷ ರೂ. ಕೊಡುತ್ತೇನೆ ಎಂದು ಹೇಳಿದ್ದಾರೆ. ಇದು ಕೂಡಾ ಕೊಲೆ ಬೆದರಿಕೆ. ಕೂಡಲೇ ಈ ದುಷ್ಟ ಶಾಸಕನನ್ನ ಕೊಲೆ ಬೆದರಿಕೆ ಕೇಸ್ ಹಾಕಿ ಬಂಧನ ಮಾಡಬೇಕು ಎಂದು ಮಹಾರಾಷ್ಟ್ರ ಸರ್ಕಾರಕ್ಕೆ ಒತ್ತಾಯ ಮಾಡುತ್ತೇನೆ ಎಂದರು.
ಯುಪಿ (Uattara Pradesh) ಸರ್ಕಾರದ ಮಂತ್ರಿ ರಘುರಾಜ್ ಸಿಂಗ್, ರಾಹುಲ್ ಗಾಂಧಿ ಅವರು ದೇಶದ ನಂಬರ್ 1 ಭಯೋತ್ಪಾದಕ ಎಂದು ಹೇಳಿದ್ದಾರೆ. ನೇರವಾಗಿ ಕೊಲೆ ಬೆದರಿಕೆ ಆಗಿದ್ದರು ಕೂಡಾ ಇವತ್ತಿನವರೆಗೂ ಯಾರ ಮೇಲು ಸರ್ಕಾರಗಳು ಕ್ರಮ ತೆಗೆದುಕೊಂಡಿಲ್ಲ. ಕೆಲವು ಕಡೆ ಕಾಟಾಚಾರಕ್ಕೆ ದೂರು ದಾಖಲು ಮಾಡಿಕೊಂಡಿದ್ದಾರೆ. ಮಹಾರಾಷ್ಟ್ರದಲ್ಲಿ ಸಂಜಯ್ ಗಾಯಕ್ವಾಡ್ ವಿರುದ್ಧ ಕಾಂಗ್ರೆಸ್ ಪಕ್ಷದವರು ಪ್ರತಿಭಟನೆ ಮಾಡಿದ್ದಾರೆ. ಆಗ ಅವರಿಗೆ ನಿಮ್ಮನ್ನೆಲ್ಲ ಹೂತಾಕುತ್ತೇನೆ ಎಂದು ಹೇಳಿದ್ದಾನೆ. ಒಬ್ಬ ಶಾಸಕ ಹೀಗೆ ಹೇಳಬಹುದಾ? ಎಂದು ಪ್ರಶ್ನಿಸಿದರು. ಇದನ್ನೂ ಓದಿ: ಜಾಮೀನು ಭವಿಷ್ಯ ಗುರುವಾರ ನಿರ್ಧಾರ: ಅಟ್ರಾಸಿಟಿ ಕಾಯ್ದೆ ಅನ್ವಯವಾಗಲ್ಲ – ಮುನಿರತ್ನ ವಕೀಲರ ವಾದ ಏನು?
ಇಷ್ಟೆಲ್ಲ ಕೊಲೆ ಬೆದರಿಕೆ ಹಾಕಿದರೂ ಯಾವುದೇ ಕ್ರಮ ಆಗಲಿಲ್ಲ. ಕರ್ನಾಟಕ ಕಾಂಗ್ರೆಸ್ ಸರ್ಕಾರ ಇದನ್ನ ತೀವ್ರವಾಗಿ ಖಂಡಿಸುತ್ತದೆ. ಇದು ಸಣ್ಣ ವಿಷಯ ಅಲ್ಲ. ಪ್ರಾಣ ಭಯ ಉಂಟು ಮಾಡೋದು ಸರಿಯಲ್ಲ. ಶೋಕಿಗೋಸ್ಕರ ದೂರು ದಾಖಲು ಆಗಿದೆ. ಏನು ಕ್ರಮ ಆಗಿಲ್ಲ. ಪರೋಕ್ಷವಾಗಿ ಆರೋಪಿಗಳಿಗೆ ಇವರು ಪ್ರಚೋದನೆ ಮಾಡುತ್ತಿದ್ದಾರೆ ಎಂದು ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದರು.
ರಾಹುಲ್ ಗಾಂಧಿ ಅವರಿಗೆ ಬೆದರಿಕೆ ಹಾಕಿರುವವರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ಹೂಡಬೇಕು. ಕೂಡಲೇ ಕಠಿಣ ಕ್ರಮ ತೆಗೆದುಕೊಳ್ಳಬೇಕು. ರಾಹುಲ್ ಗಾಂಧಿ ಅವರನ್ನ ರಾಜಕೀಯವಾಗಿ ಮುಗಿಸುತ್ತೇವೆ ಎಂದು ಬಿಜೆಪಿಯವರು ಅಂದುಕೊಂಡಿದ್ದರೆ ಅದು ಅವರ ಮೂರ್ಖತನ. ಕಾಂಗ್ರೆಸ್ ಪಕ್ಷ ಇದನ್ನ ಸಹಿಸಿಕೊಳ್ಳುವುದಿಲ್ಲ ಎಂದು ಕಿಡಿಕಾರಿದರು. ಇದನ್ನೂ ಓದಿ: ರಮೇಶ್ ಜಾರಕಿಹೊಳಿ ಬಾಯಲ್ಲೂ ಪಕ್ಷದ ಸಿದ್ಧಾಂತ ಬಂದಿರೋದು ಒಳ್ಳೆಯ ಬೆಳವಣಿಗೆ: ವಿಜಯೇಂದ್ರ