ಗಾಂಧಿನಗರ: ಮತಗಳ್ಳತನದ ಆರೋಪದ ನಡುವೆ ಗುಜರಾತ್ ರಾಜಧಾನಿ ಗಾಂಧಿನಗರ ಮಹಾನಗರ ಪಾಲಿಕೆ (Gandhinagar Municipal Corporation) ಚುನಾವಣೆಯಲ್ಲಿ ಬಿಜೆಪಿ(BJP) ಭರ್ಜರಿ ಜಯ ಸಾಧಿಸುವ ಮೂಲಕ ತನ್ನ ಅಧಿಕಾರವನ್ನು ಉಳಿಸಿಕೊಂಡಿದೆ.
ಒಟ್ಟು 44 ಸ್ಥಾನಗಳ ಪೈಕಿ ಬರೋಬ್ಬರಿ 38 ಸ್ಥಾನಗಳನ್ನು ಗೆಲ್ಲುವ ಮೂಲಕ ಕಮಲ ಪಡೆ ಸ್ಪಷ್ಟ ಬಹುಮತ ಗಳಿಸಿದೆ. ಕಾಂಗ್ರೆಸ್ 5 ಸ್ಥಾನಗಳನ್ನು ಗೆದ್ದುಕೊಂಡರೆ, ಪಕ್ಷೇತರ ಅಭ್ಯರ್ಥಿ ಒಂದು ಸ್ಥಾನದಲ್ಲಿ ಜಯಗಳಿಸಿದ್ದಾರೆ. 32 ಸ್ಥಾನಗಳಲ್ಲಿ ಸ್ಪರ್ಧಿಸಿದ್ದ ಆಮ್ ಆದ್ಮಿ ಪಕ್ಷ (AAP) ಒಂದೂ ಸ್ಥಾನ ಗೆಲ್ಲಲಾಗದೆ ಭಾರೀ ಮುಖಭಂಗ ಅನುಭವಿಸಿದೆ.
ಅಕ್ಟೋಬರ್ 11 ರಂದು ನಡೆದ ಮತದಾನದ ಫಲಿತಾಂಶ ಮಂಗಳವಾರ ಪ್ರಕಟಗೊಂಡಿದೆ. ಪಾಲಿಕೆಯ 11 ವಾರ್ಡ್‌ಗಳ ಒಟ್ಟು 44 ಸ್ಥಾನಗಳಿಗೆ (ಪ್ರತಿ ವಾರ್ಡ್‌ಗೆ 4 ಸ್ಥಾನಗಳು) ಚುನಾವಣೆ ನಡೆದಿತ್ತು. ಕಣದಲ್ಲಿದ್ದ 130 ಅಭ್ಯರ್ಥಿಗಳಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್ ಎಲ್ಲಾ 44 ಸ್ಥಾನಗಳಲ್ಲೂ ಸ್ಪರ್ಧಿಸಿದ್ದರೆ, ಆಪ್ 32 ಸ್ಥಾನಗಳಲ್ಲಿ ಕಣಕ್ಕಿಳಿದಿತ್ತು.
ರಾಜ್ಯ ರಾಜಧಾನಿಯಲ್ಲಿ ತನ್ನ ಅಧಿಪತ್ಯವನ್ನು ಮುಂದುವರಿಸಿರುವ ಬಿಜೆಪಿ, 11 ವಾರ್ಡ್‌ಗಳ ಪೈಕಿ 8 ವಾರ್ಡ್‌ಗಳಲ್ಲಿ ಎಲ್ಲ 4 ಸ್ಥಾನಗಳನ್ನೂ ಗೆದ್ದು ಕ್ಲೀನ್‌ಸ್ವೀಪ್ ಮಾಡಿದೆ. ಇತರ ಎರಡು ವಾರ್ಡ್‌ಗಳಲ್ಲಿ ತಲಾ ಮೂರು ಸ್ಥಾನಗಳನ್ನು ಗೆದ್ದುಕೊಂಡಿದೆ. 2021ರ ಚುನಾವಣೆಯಲ್ಲಿ 41 ಸ್ಥಾನಗಳನ್ನು ಗೆದ್ದಿದ್ದ ಬಿಜೆಪಿಯ ಬಲ ಈ ಬಾರಿ 38ಕ್ಕೆ ಇಳಿದಿದ್ದರೂ, ಪಾಲಿಕೆಯಲ್ಲಿ ಸ್ಪಷ್ಟ ಬಹುಮತದೊಂದಿಗೆ ಗದ್ದುಗೆ ಹಿಡಿದಿದೆ. ಇದನ್ನೂ ಓದಿ: FB ಲೈವ್‌ನಲ್ಲೇ ಪಂಜಾಬ್ ಡ್ರಗ್ಸ್ ವಿರೋಧಿ ಹೋರಾಟಗಾರನನ್ನು ಗುಂಡಿಕ್ಕಿ ಹತ್ಯೆಗೈದ ಮೆಡಿಕಲ್ ಮಾಲೀಕ
ಕಾಂಗ್ರೆಸ್ ಪಕ್ಷ ಒಟ್ಟು ಐದು ಸ್ಥಾನಗಳಲ್ಲಿ ಜಯ ಸಾಧಿಸಿದ್ದು, ವಾರ್ಡ್ 6ರಲ್ಲಿ ಎಲ್ಲ ನಾಲ್ಕು ಸ್ಥಾನಗಳಲ್ಲೂ ಬಿಜೆಪಿ ಅಭ್ಯರ್ಥಿಗಳನ್ನು ಸೋಲಿಸಿ ಕ್ಲೀನ್‌ಸ್ವೀಪ್ ಮಾಡಿದೆ. 2021ರ ಚುನಾವಣೆಯಲ್ಲಿ ಕೇವಲ ಮೂರು ಸ್ಥಾನಗಳನ್ನು ಗೆದ್ದಿದ್ದ ಕಾಂಗ್ರೆಸ್, ಈ ಬಾರಿ ತನ್ನ ಸಂಖ್ಯೆಯನ್ನು 5ಕ್ಕೆ ಹೆಚ್ಚಿಸಿಕೊಂಡಿದೆ.
ಗುಜರಾತ್‌ನಲ್ಲಿ ಪರ್ಯಾಯ ಶಕ್ತಿಯಾಗಿ ಹೊರಹೊಮ್ಮಲು ಯತ್ನಿಸುತ್ತಿರುವ ಆಮ್ ಆದ್ಮಿ ಪಕ್ಷಕ್ಕೆ ಈ ಚುನಾವಣೆ ತೀವ್ರ ಹಿನ್ನಡೆ ತಂದಿದೆ. 32 ಸ್ಥಾನಗಳಲ್ಲಿ ಸ್ಪರ್ಧಿಸಿದ್ದರೂ ಪಕ್ಷಕ್ಕೆ ಒಂದೇ ಒಂದು ಸ್ಥಾನದಲ್ಲೂ ಗೆಲುವು ಸಾಧಿಸಲು ಸಾಧ್ಯವಾಗಲಿಲ್ಲ. ಹಿಂದಿನ ಚುನಾವಣೆಯಲ್ಲಿ ಗೆದ್ದಿದ್ದ ಏಕೈಕ ಸ್ಥಾನವನ್ನೂ ಆಪ್ ಈ ಬಾರಿ ಕಳೆದುಕೊಂಡಿದೆ.
2010ರಲ್ಲಿ ಅಸ್ತಿತ್ವಕ್ಕೆ ಬಂದ ಗಾಂಧಿನಗರ ಮಹಾನಗರ ಪಾಲಿಕೆಯಲ್ಲಿ 2011ರಲ್ಲಿ ಕಾಂಗ್ರೆಸ್ ಗೆಲುವು ಸಾಧಿಸಿತ್ತು. 2016ರಲ್ಲಿ ಉಭಯ ಪಕ್ಷಗಳ ನಡುವೆ ಸಮಬಲದ ಹೋರಾಟ ನಡೆದಿತ್ತಾದರೂ, ಕಾಂಗ್ರೆಸ್ ಕಾರ್ಪೊರೇಟರ್ ಪಕ್ಷಾಂತರದಿಂದ ಬಿಜೆಪಿ ಅಧಿಕಾರಕ್ಕೇರಿತ್ತು. ಇದೀಗ ಸತತ ಎರಡನೇ ಬಾರಿಗೆ ಬಿಜೆಪಿ ಸಂಪೂರ್ಣ ಜನಾದೇಶದೊಂದಿಗೆ ಗಾಂಧಿನಗರ ಮಹಾನಗರ ಪಾಲಿಕೆಯಲ್ಲಿ ತನ್ನ ಪ್ರಾಬಲ್ಯವನ್ನು ಉಳಿಸಿಕೊಂಡಿದೆ. 2021ರ ಚುನಾವಣೆಯಲ್ಲಿ ಬಿಜೆಪಿ 41, ಕಾಂಗ್ರೆಸ್ 2, ಆಪ್ 1 ಸ್ಥಾನವನ್ನು ಗೆದ್ದುಕೊಂಡಿತ್ತು.

