ಬೆಂಗಳೂರು: ಅಲ್ಪಸಂಖ್ಯಾತ ಸಮುದಾಯದವರಿಗೆ ಸರ್ಕಾರದಿಂದ ಮತ್ತೊಂದು ಬಂಪರ್ ಕೊಡುಗೆ ಸಿಕ್ಕಿದೆ. ಅಲ್ಪಸಂಖ್ಯಾತರು ವಾಸಿಸುವ ನಗರ ಪ್ರದೇಶದ ಹಿಂದುಳಿದ ಕಾಲೋನಿಗಳು (Backward Colonies Of Minorities) ಮಾದರಿ ಕಾಲೋನಿಯಾಗಿ ಅಭಿವೃದ್ಧಿಗೆ ಸರ್ಕಾರ ಮುಂದಾಗಿದೆ. 22 ವಿಧಾನಸಭಾ ಕ್ಷೇತ್ರಗಳಲ್ಲಿ ಮಾದರಿ ಕಾಲೋನಿ ನಿರ್ಮಾಣಕ್ಕೆ ಸರ್ಕಾರ ತಿರ್ಮಾನ ಮಾಡಿದ್ದು, 398 ಕೋಟಿ ರೂ. ಮೊತ್ತದ ಯೋಜನೆ ಜಾರಿಗೆ ಸಂಪುಟ ಸಭೆ (Cabinet Meeting) ಒಪ್ಪಿಗೆ ಕೊಟ್ಟಿದೆ.
ಅಲ್ಪಸಂಖ್ಯಾತರು ಇರುವ ಅತಿ ಹಿಂದುಳಿದ ಹಾಗೂ ಹಿಂದುಳಿದ ಕಾಲೋನಿಗಳನ್ನು ಮಾದರಿ ಕಾಲೋನಿಗಳಾಗಿ ಅಭಿವೃದ್ಧಿಪಡಿಸುವುದು ಉದ್ದೇಶ. ಇದಕ್ಕಾಗಿ ಈಗಾಗಲೇ 1,000 ಕೋಟಿ ರೂ.ಗಳನ್ನು ರಾಜ್ಯ ಸರ್ಕಾರ ಮೀಸಲಿಟ್ಟಿದೆ. ಆ ಮೊತ್ತಕ್ಕೆ ಕ್ರಿಯಾ ಯೋಜನೆ ಸಿದ್ಧಪಡಿಸಿ ಹಂತಹಂತವಾಗಿ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲು ತೀರ್ಮಾನಿಸಲಾಗಿದೆ. ಅದರ ಭಾಗವಾಗಿ ಈಗ 398 ಕೋಟಿ ರೂ ವೆಚ್ಚದಲ್ಲಿ ಅಲ್ಪಸಂಖ್ಯಾತರ ಕಾಲೋನಿಗಳ ಅಭಿವೃದ್ಧಿ ಕಾಮಗಾರಿಗಳನ್ನು ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ಕೈಗೊಳ್ಳಲಿದೆ. ಇದನ್ನೂ ಓದಿ: ಸಾಹಸಸಿಂಹ ವಿಷ್ಣುವರ್ಧನ್, ಬಿ.ಸರೋಜಾದೇವಿಗೆ ಮರಣೋತ್ತರ ‘ಕರ್ನಾಟಕ ರತ್ನ’ ಪ್ರಶಸ್ತಿ ಘೋಷಣೆ
ಸರ್ಕಾರದ ಈ ನಡೆಗೆ ಬಿಜೆಪಿ ನಾಯಕರು ಮತ್ತೊಂದು ಓಲೈಕೆ ರಾಜಕೀಯ ಎಂದು ಟೀಕಿಸಿದ್ದಾರೆ. ಬೆಂಗಳೂರಿನಲ್ಲಿ ಮಾತನಾಡಿದ ಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣ ಸ್ವಾಮಿ, ಮುಸ್ಲಿಮರಲ್ಲಿ ಬಡವರಿದ್ದಾರೆ, ದಲಿತರಲ್ಲಿ ಬಡವರಿದ್ದಾರೆ. ಈ ಬಡವರನ್ನು ಮೇಲೆತ್ತಿ, ಅಲ್ಪಸಂಖ್ಯಾತರ ಕಾಲೋನಿಗಳನ್ನು ಅಭಿವೃದ್ಧಿ ಮಾಡೋದಲ್ಲ. ಈ ತರಹದ ಓಲೈಕೆ ಬಿಡಲಿ. ಕಾಂಗ್ರೆಸ್, ಧರ್ಮ-ಧರ್ಮಗಳ ನಡುವೆ ವಿಷ ಬೀಜ ಬಿತ್ತುತ್ತಿದ್ದಾರೆ. ಇದು ಸರ್ಕಾರದ ಓಲೈಕೆ ರಾಜಕಾರಣ. ಇದು ರಾಜ್ಯದ ಜನತೆಗೂ ಗೊತ್ತಿದೆ. ಓಲೈಕೆ ಮಾಡಿ ಜನರನ್ನು ದಾರಿ ತಪ್ಪಿಸುವ ಕೆಲಸ ಇದು ಎಂದು ಟೀಕಿಸಿದ್ದಾರೆ. ಇದನ್ನೂ ಓದಿ: ಶಾಸಕ ಸತೀಶ್ ಸೈಲ್‌ಗೆ 7 ದಿನಗಳ ಮಧ್ಯಂತರ ಜಾಮೀನು ಮಂಜೂರು