ಶಿವಮೊಗ್ಗ: ಕಳೆದ ಬಾರಿ ವರುಣಾದಿಂದ ನಾನು ಸ್ಪರ್ಧೆ ಮಾಡಿದ್ರೆ ನಿಮ್ಮ ಸಿದ್ದರಾಮಯ್ಯ (Siddaramaiah) ಅವರ ಸ್ಥಿತಿ ಏನಾಗೋದು ಯೋಚಿಸಿ ಎಂದು ಕಾಂಗ್ರೆಸಿಗರ ವಿರುದ್ಧ ಬಿಜೆಪಿ (BJP) ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ (B.Y Vijayendra) ವಾಗ್ದಾಳಿ ನಡೆಸಿದ್ದಾರೆ.
ಶಿವಮೊಗ್ಗದಲ್ಲಿ ಅವರು ಸುದ್ದಿಗೋಷ್ಠಿ ನಡೆಸಿದರು. ಈ ವೇಳೆ, ನಾನು ಮೊದಲ ಬಾರಿ ಶಾಸಕ ಆಗಿರಬಹುದು. ಆದರೆ ಕೆ.ಆರ್.ಪೇಟೆ, ಶಿರಾ ಕ್ಷೇತ್ರದಲ್ಲಿ ಗೆಲುವಿಗೆ ಶ್ರಮಿಸಿದ್ದೇನೆ. ಕಳೆದ ಬಾರಿ ವರುಣಾದಿಂದ ಸ್ಪರ್ಧೆ ಮಾಡಿದ್ದರೆ ನಿಮ್ಮ ಸಿದ್ದರಾಮಯ್ಯ ಸ್ಥಿತಿ ಏನು ಎಂಬುದನ್ನು ಯೋಚಿಸಿ ಎಂದು ಕಾಂಗ್ರೆಸ್ ವಿರುದ್ಧ ಕಿಡಿಕಾರಿದ್ದಾರೆ.
ಸಚಿನ್ ಪಾಂಚಾಳ ಆತ್ಮಹತ್ಯೆ ಕೇಸ್ ವಿಚಾರವಾಗಿ, ಈಶ್ವರಪ್ಪ ಪ್ರಕರಣದಲ್ಲಿ ಇದೇ ಪ್ರಿಯಾಂಕ್ ಖರ್ಗೆ ರಾಜೀನಾಮೆಗೆ ಆಗ್ರಹಿಸಿದ್ದರು. ತನಿಖೆಗೆ ಎದುರಿಸಿ ಎಂದಿದ್ದರು. ಈಗ ಅವರು ಸಹ ಅದೇ ರೀತಿ ರಾಜೀನಾಮೆ ಕೊಟ್ಟು ತನಿಖೆ ಎದುರಿಸಲಿ ಎಂದು ಆಗ್ರಹಿಸಿದ್ದಾರೆ.
ಪ್ರಿಯಾಂಕ್ ಖರ್ಗೆ ಅವರ ಎಡಗೈ ಭಂಟನಿಂದ ಸಚಿನ್ ಪಾಂಚಾಳ ಆತ್ಮಹತ್ಯೆ ಆಗಿದೆ. ಇದನ್ನು ವಿರೋಧಿಸಿ ಕಲಬುರಗಿಯಲ್ಲಿ ದೊಡ್ಡ ಮಟ್ಟದಲ್ಲಿ ಹೋರಾಟ ಆಯೋಜನೆ ಮಾಡಿದ್ದೇವೆ. ಶಿಕಾರಿಪುರದಲ್ಲಿ ನಮ್ಮ ಮುಖಂಡರು ಮೃತಪಟ್ಟಿದ್ದರು ಹೀಗಾಗಿ ಭಾಗವಹಿಸಲು ಸಾಧ್ಯವಾಗಿಲ್ಲ. ನಮ್ಮ ಮುಖಂಡರು ಹೋರಾಟದಲ್ಲಿ ಭಾಗವಹಿಸುತ್ತಿದ್ದಾರೆ. ನಮಗೆ ಪೊಲೀಸರಿಂದ ನ್ಯಾಯ ಸಿಗುವ ವಿಶ್ವಾಸ ಇಲ್ಲ. ಸಚಿನ್ ಸಹೋದರಿ ಅವರ ಕುಟುಂಬ ಸಿಬಿಐ ತನಿಖೆಗೆ ಆಗ್ರಹಿಸಿದ್ದಾರೆ ಎಂದು ಮಾಹಿತಿ ಹಂಚಿಕೊಂಡಿದ್ದಾರೆ.
ಮಹಾರಾಷ್ಟ್ರದ ಸುಪಾರಿ ಕಿಲ್ಲರ್ ಬಳಸಿಕೊಂಡು ಶಾಸಕ ಮತ್ತಿಮೋಡ್, ಹಿಂದೂ ಮುಖಂಡರ ಹತ್ಯೆಗೆ ಸಂಚು ಮಾಡಿದ್ದಾರೆ. ವಿಪಕ್ಷ ನಾಯಕರು ಬೆಳೆದರೆ ಗುಲ್ಬರ್ಗಾದಲ್ಲಿ ಇವರ ಬೇಳೆ ಬೇಯಿಸಲು ಸಾಧ್ಯವಿಲ್ಲ ಎಂದು ಹತ್ಯೆ ಮಾಡಲು ಹೊರಟಿದ್ದಾರೆ. ಪ್ರಿಯಾಂಕ್ ಖರ್ಗೆಯವರೇ ನಿಮಗೆ ಸಲಹೆ ಕೊಡ್ತೇನೆ. ನೀವು ಪ್ರಾಮಾಣಿಕರಾಗಿದ್ದರೆ ಸಿಬಿಐ ತನಿಖೆಗೆ ವಹಿಸಿ. ಸಿದ್ದರಾಮಯ್ಯ ಅವರನ್ನು ನಂಬಬೇಡಿ. ನಿಮ್ಮ ಪಕ್ಷದಲ್ಲಿ ಹಲವು ಷಡ್ಯಂತ್ರ ನಡೆಯುತ್ತಿದೆ. ನಿಮಗೆ ಸಿದ್ದರಾಮಯ್ಯ ಅವರಿಂದ ನ್ಯಾಯ ಸಿಗಲ್ಲ. ನಿಮಗೆ ಮುಖ್ಯಮಂತ್ರಿ ಆಗುವ ಆಸೆ ಇದ್ದರೆ ಸಿಬಿಐ ತನಿಖೆಗೆ ವಹಿಸಿ ಎಂದಿದ್ದಾರೆ.
ಕಾಂಗ್ರೆಸ್ ಸರ್ಕಾರ ಎರಡು ವರ್ಷದಲ್ಲಿ ಏನು ಸಾಧನೆ ಆಗಿದೆ ಎಂದು ಸಿದ್ದರಾಮಯ್ಯ ಅವರ ಮಂತ್ರಿಗಳು ಹೇಳಬೇಕು. ಎರಡು ವರ್ಷದಲ್ಲಿ ಅವರ ಸಾಧನೆ ಶೂನ್ಯ. ಈ ಅವಧಿಯಲ್ಲಿ ಯಾವೊಬ್ಬ ಶಾಸಕ ಶಂಕುಸ್ಥಾಪನೆ ಗುದ್ದಲಿ ಪೂಜೆ ಮಾಡಿಲ್ಲ. ನಾವು ಹೇಳಿದರೆ ವಿಪಕ್ಷ ಶಾಸಕರ ಟೀಕೆ ಅಂತಾರೆ. ಕಾಂಗ್ರೆಸ್ ಶಾಸಕರು ಆಡಳಿತ ಪಕ್ಷದ ಶಾಸಕರು ಆರೋಪ ಮಾಡ್ತಿದ್ದಾರೆ. ಕಾಗವಾಡ ಶಾಸಕ, ಆರ್ ವಿ ದೇಶಪಾಂಡೆ ಆರೋಪ ಮಾಡಿದ್ದಾರೆ. ಕ್ಷೇತ್ರಕ್ಕೆ ಅನುದಾನ ತರಲು ಪರದಾಡ್ತಿದ್ದಾರೆ ಎಂದು ಆರೋಪಿಸಿದ್ದಾರೆ.