Connect with us

Bengaluru City

ಶಾಸಕ ಆನಂದ್ ಸಿಂಗ್‍ಗೆ ಬಿಜೆಪಿಯಿಂದ ಶೋಕಾಸ್ ನೋಟಿಸ್

Published

on

ಬೆಂಗಳೂರು: ಬಿಜೆಪಿ ಪಕ್ಷ ನಿಲುವಿಗೆ ವಿರುದ್ಧವಾಗಿ ಟಿಪ್ಪು ಜಯಂತಿಯಲ್ಲಿ ಭಾಗವಹಿಸಿದ್ದ ಹೊಸಪೇಟೆಯ ಶಾಸಕ ಆನಂದ್ ಸಿಂಗ್ ಅವರಿಗೆ ಬಿಜೆಪಿ ಶಿಸ್ತು ಸಮಿತಿ ಶೋಕಾಸ್ ನೋಟಿಸ್ ಜಾರಿ ಮಾಡಿದೆ.

ಶಾಸಕ ಆನಂದ್ ಸಿಂಗ್ ಇಂದು ಬೆಳಗ್ಗೆ ಹೊಸಪೇಟೆಯಲ್ಲಿ ನಡೆದ ಸರ್ಕಾರಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದು ಬಿಜೆಪಿ ನಾಯಕರಿಗೆ ಮುಜುಗರಕ್ಕೆ ಕಾರಣವಾಗಿತ್ತು. ಈ ಕುರಿತು 7 ದಿನಗಳಲ್ಲಿ ವಿವರಣೆ ನೀಡುವಂತೆ ರಾಜ್ಯ ಬಿಜೆಪಿ ಶಿಸ್ತು ಸಮಿತಿ ಅಧ್ಯಕ್ಷ ಶಂಕರಪ್ಪ ಅವರು ನೋಟಿಸ್ ಜಾರಿ ಮಾಡಿದ್ದಾರೆ.

ಟಿಪ್ಪು ಜಯಂತಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದು ಮಾತ್ರವಲ್ಲೇ ಅದನ್ನು ಬಹಿರಂಗವಾಗಿ ಸಮರ್ಥನೆ ಮಾಡಿಕೊಂಡ ಹಿನ್ನೆಲೆಯಲ್ಲಿ ನೋಟಿಸ್ ಜಾರಿ ಮಾಡಲಾಗಿದೆ ಎಂದು ರಾಜ್ಯ ಬಿಜೆಪಿಯ ಪ್ರಧಾನ ಕಾರ್ಯದರ್ಶಿ ಎನ್.ರವಿಕುಮಾರ್ ಮಾಧ್ಯಮ ಹೇಳಿಕೆ ಬಿಡುಗಡೆ ಮಾಡಿ ತಿಳಿಸಿದ್ದಾರೆ.

ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವುದರ ಬಗ್ಗೆ ಪ್ರತಿಕ್ರಿಯಿಸಿದ್ದ ಆನಂದ್ ಸಿಂಗ್, ಎಲ್ಲ ಜಯಂತಿಯಲ್ಲಿ ನಾನು ಪಾಲ್ಗೊಳ್ಳುತ್ತೇನೆ. ಎಲ್ಲ ಜಯಂತಿಯಂತೆ ಟಿಪ್ಪು ಜಯಂತಿ ಕೂಡ ಒಂದು. ವಿಜಯನಗರ ಕ್ಷೇತ್ರದಲ್ಲಿ ಭೇದಭಾವವಿಲ್ಲ. ಕ್ಷೇತ್ರದ ಜನರ ಇಚ್ಛೆಯಂತೆ ಪಾಲ್ಗೊಂಡಿದ್ದೇನೆ. ಟಿಪ್ಪು ಜಯಂತಿಯಲ್ಲಿ ಪಾಲ್ಗೊಳ್ಳಬಾರದು ಎಂದು ಯಾರು ಹೇಳಿಲ್ಲ. ಕೃಷ್ಣದೇವರಾಯರ ಆಳ್ವಿಕೆಯಲ್ಲಿ ಎಲ್ಲರನ್ನು ಒಂದೇ ರೀತಿ ನೋಡಲಾಗುತ್ತಿತ್ತು. ಇದರಲ್ಲಿ ಯಾವುದೇ ರಾಜಕೀಯವಿಲ್ಲ ಎಂದು ತಮ್ಮ ನಡೆಯನ್ನು ಸಮರ್ಥಿಸಿಕೊಂಡಿದ್ದರು.

ಹೊಸಪೇಟೆಯಲ್ಲಿ ಸರ್ಕಾರದಿಂದ ಆಚರಿಸುತ್ತಿರುವ ಟಿಪ್ಪು ಜಯಂತಿ ಕಾರ್ಯಕ್ರಮದಲ್ಲಿ ಶಾಸಕ ಆನಂದ ಸಿಂಗ್ ಅನಾರೋಗ್ಯದ ಮಧ್ಯೆಯೂ ಪಾಲ್ಗೊಂಡು ಅಚ್ಚರಿ ಮೂಡಿಸಿದ್ದರು.

ಬಳ್ಳಾರಿಯ ಸಂಸದ ಶ್ರೀರಾಮುಲು ಹಾಗೂ ಜನಾರ್ದನ ರೆಡ್ಡಿ ಅವರ ಪರಮಾಪ್ತನಾಗಿರುವ ಪಾಲಿಕೆಯ ಸದಸ್ಯ ಗೋವಿಂದರಾಜಲು ನೇತೃತ್ವದಲ್ಲಿ ಬಿಜೆಪಿ ಕಚೇರಿಯ ಮುಂಭಾಗ ಟಿಪ್ಪು ಜಯಂತಿಯನ್ನು ಆಚರಣೆ ಮಾಡಲಾಗಿತ್ತು.

ಕಚೇರಿಯಲ್ಲಿ ಟಿಪ್ಪು ಜಯಂತಿ ಆಚರಣೆ ಮಾಡಲು ಬಿಜೆಪಿಯ ಅಲ್ಪಸಂಖ್ಯಾತ ವಿಭಾಗದ ಕಾರ್ಯಕರ್ತರು ಕಳೆದ ರಾತ್ರಿಯೇ ಸಂಸದ ಶ್ರೀರಾಮುಲು ಅನುಮತಿ ಸಹ ಪಡೆದುಕೊಂಡಿದ್ದಾರೆ ಎನ್ನಲಾಗಿದೆ. ನಾಯಕರು ಬಳ್ಳಾರಿಯಲ್ಲಿ ಮುಸ್ಲಿಂ ಮತಗಳನ್ನು ಪಡೆಯಲು ಇಬ್ಬಗೆಯ ನೀತಿ ಅನುಸರಿಸುತ್ತಿರುವುದು ಬಿಜೆಪಿಯ ಹಿರಿಯ ನಾಯಕರ ಅಸಮಾಧಾನಕ್ಕೆ ಕಾರಣವಾಗಿತ್ತು.

Click to comment

Leave a Reply

Your email address will not be published. Required fields are marked *