ಮುಗಿಯದ ‘ಮಹಾ’ ಜಗಳ- ಮತ್ತೊಮ್ಮೆ ಚುನಾವಣೆ ಎದುರಿಸಲು ಸಿದ್ಧವೆಂದ ಬಿಜೆಪಿ

Public TV
2 Min Read
BJP MAHARASTRA

ಮುಂಬೈ: ಚುನಾವಣಾ ಫಲಿತಾಂಶ ಬಂದು 10 ದಿನಗಳೇ ಕಳೆದರೂ ಮಹಾರಾಷ್ಟ್ರದಲ್ಲಿ ಇನ್ನೂ ಯಾರೊಬ್ಬರೂ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿಲ್ಲ. ಇದೀಗ ಅಧಿಕಾರಕ್ಕೆ ಸಂಬಂಧಿಸಿದಂತೆ ಶಿವಸೇನೆ ನಡೆಯಿಂದ ಸಿಟ್ಟಿಗೆದ್ದ ಬಿಜೆಪಿ ನಾಯಕರು ಹಾಗೂ ಕಾರ್ಯಕರ್ತರು ಮತ್ತೊಮ್ಮೆ ಚುನಾವಣೆ ಎದುರಿಸಲು ಸಿದ್ಧರಾಗಿರುವುದಾಗಿ ಬಿಜೆಪಿ ಸಚಿವ ಜಯ್ ಕುಮಾರ್ ರಾವಲ್ ತಿಳಿಸಿದ್ದಾರೆ.

ಅಧಿಕಾರಕ್ಕಾಗಿ ಬಿಜೆಪಿ ಹಾಗೂ ಶಿವಸೇನೆ ಮಧ್ಯೆ ಭಾರೀ ಪೈಪೋಟಿ ನಡೆಯುತ್ತಿರುವ ಸಂಬಂಧ ರಾವಲ್ ಮಾಧ್ಯಮಕ್ಕೆ ಪ್ರತಿಕ್ರಿಯಿಸಿದರು. ಇನ್ನೊಂದು ಬಾರಿ ಚುನಾವಣೆ ನಡೆದರೆ ನಾವೇ ಜಯಗಳಿಸುವುದಾಗಿ ವಿಶ್ವಾಸ ವ್ಯಕ್ತಪಡಿಸಿರುವ ಸಚಿವರು, ಮಹಾರಾಷ್ಟ್ರ ಜನ ಪ್ರಧಾನಿ ಮೋದಿ, ಅಮಿತ್ ಶಾ ಹಾಗೂ ದೇವೇಂದ್ರ ಫಡ್ನವಿಸ್ ಅವರ ಕೆಲಸವನ್ನು ಮೆಚ್ಚಿದ್ದಾರೆ ಎಂದು ಹೇಳಿದರು.

jaykumar

ಶಿವಸೇನೆಯವರು ಮೊದಲು 50:50 ಕೇಳಿದ್ದರು. ಆದರೆ ಇದೀಗ ತಮ್ಮ ವರಸೆಯನ್ನು ಬದಲಿಸಿದ್ದು, ನಮ್ಮ ಮೇಲೆ ಬ್ಲ್ಯಾಕ್ ಮೇಲ್ ಮಾಡುತ್ತಿದ್ದಾರೆ. ಇದರಿಂದ ಬಿಜೆಪಿ ಕಾರ್ಯಕರ್ತರು ಶಿವಸೇನೆ ವಿರುದ್ಧ ಕೆಂಡಾಮಂಡಲರಾಗಿದ್ದಾರೆ. ಈ ಹಿನ್ನೆಲೆಯಲ್ಲಿ ನಾವು ಮತ್ತೊಮ್ಮೆ ಚುನಾವಣೆಗೆ ರೆಡಿಯಾಗಿದ್ದೇವೆ ಎಂದು ಸಚಿವರು ತಿಳಿಸಿದ್ದಾರೆ.

ಇಂದು ಬಿಜೆಪಿ ನಾಯಕರು ಹಾಗೂ ಕಾರ್ಯಕರ್ತರು ನನ್ನ ವಿರುದ್ಧ ಸಿಟ್ಟಾದರು. ಬಿಜೆಪಿ ಹಾಗೂ ಶಿವಸೇನೆ ಜೊತೆಗೂಡಿ ಸಮ್ಮಿಶ್ರ ಸರ್ಕಾರ ನಡೆಸಲು ನಾವು ಅವಕಾಶ ಕೊಡಲ್ಲ. ಒಂದು ವೇಳೆ ಆ ಅವಕಾಶ ನೀಡಿದರೆ ನಾವು ಮತ್ತೊಮ್ಮೆ ಅವರ ವಿರುದ್ಧ ಚುನಾವಣೆಗೆ ನಿಲ್ಲುತ್ತೇವೆ. ಈ ವೇಳೆ ನಾವು 5 ಸೀಟು ಗೆಲ್ಲುತ್ತೇವೆ ಎಂಬ ನಂಬಿಕೆಯಿದೆ ಎಂದು ಹೇಳಿರುವುದಾಗಿ ಸಚಿವರು ಮಾಧ್ಯಮಕ್ಕೆ ತಿಳಿಸಿದರು.

ಒಟ್ಟಿನಲ್ಲಿ ಶಿವಸೇನೆ ಬಿಜೆಪಿಯೇತರ ಸರ್ಕಾರ ರಚನೆಯತ್ತ ಮುಖ ಮಾಡುತ್ತಿದ್ದು, ಎನ್‌ಸಿಪಿ(ರಾಷ್ಟ್ರೀಯ ಕಾಂಗ್ರೆಸ್ ಪಕ್ಷ) ಮತ್ತು ಕಾಂಗ್ರೆಸ್ ಕಡೆ ಒಲವು ತೋರಿಸುತ್ತಿದೆ. ಆದರೆ ನಾವು ವಿರೋಧ ಪಕ್ಷದಲ್ಲಿಯೇ ಕುಳಿತುಕೊಳ್ಳುತ್ತೇವೆ ಎಂದು ಎನ್‌ಸಿಪಿ ಸ್ಪಷ್ಟಪಡಿಸಿದೆ. ಶಿವಸೇನೆ ಮಾತ್ರ ನಮಗೆ 170 ಶಾಸಕರ ಬೆಂಬಲವಿದೆ ಎಂದು ಹೇಳಿಕೊಂಡು, ಎನ್‌ಸಿಪಿ ಶಾಸಕರನ್ನು ತೆರೆಮರೆಯಲ್ಲಿ ಸಂಪರ್ಕಿಸುವ ಪ್ರಯತ್ನಕ್ಕೆ ಕೈಹಾಕಿದೆ ಎಂಬುದಾಗಿ ವರದಿಯಾಗಿದೆ.

ಈ ಮಧ್ಯೆ ಇಂದು ದೇವೇಂದ್ರ ಫಡ್ನವಿಸ್ ಅವರು ಅಮಿತ್ ಶಾ ಅವರನ್ನು ಭೆಟಿ ಮಾಡಿ ಮಾತುಕತೆ ನಡೆಸಿದ್ದಾರೆ. ಇತ್ತ ಎನ್‌ಸಿಪಿ ಮುಖ್ಯಸ್ಥ ಶರದ್ ಪವಾರ್ ಕೂಡ ಕಾಂಗ್ರೆಸ್ ಅಧಿನಾಯಕಿ ಸೋನಿಯಾ ಗಾಂಧಿಯವರನ್ನು ಭೇಟಿ ಮಾಡಲಿದ್ದಾರೆ ಎಂದು ವರದಿಯಾಗಿದೆ.

Share This Article
Leave a Comment

Leave a Reply

Your email address will not be published. Required fields are marked *