ಬೆಂಗಳೂರು: ನೀವು ಬಿಜೆಪಿಗೆ ಬಂದರೆ ನಿಮ್ಮ ಎಲ್ಲಾ ಸಮಸ್ಯೆಗಳು ಪರಿಹಾರ ಆಗುತ್ತೆ ಎಂದು ಬಿಜೆಪಿ ನಾಯಕರು, ಕೆಲ ಆಪ್ತರು ನಮಗೆ ಬಿಜೆಪಿ ಸೇರ್ಪಡೆಗೆ ಆಫರ್ ನೀಡಿದ್ದರು ಎಂದು ಸಂಸದ ಡಿಕೆ ಸುರೇಶ್ ಹೇಳಿದ್ದಾರೆ.
ಪಬ್ಲಿಕ್ ಟಿವಿಗೆ ವಿಶೇಷ ಸಂದರ್ಶನ ನೀಡಿ ಮಾತನಾಡಿದ ಸಂಸದ ಡಿಕೆ ಸುರೇಶ್ ಅವರು, ರಾಜ್ಯದ ಇತರೆ ನಾಯಕರಿಗೆ ಆಫರ್ ನೀಡಿದಂತೆ ನಮಗೂ ಬಿಜೆಪಿ ನಾಯಕರು ಆಫರ್ ನೀಡಿದ್ದರು. ನಾವು ಸ್ವಲ್ಪ ಸ್ಟ್ರಾಂಗ್ ಇದ್ದೀವಿ ಎನ್ನುವ ಕಾರಣಕ್ಕೆ ಹೆಚ್ಚು ಒತ್ತಡ ತಂದಿದ್ದರು. ಅಲ್ಲದೇ ಐಟಿ, ಇಡಿ, ಸಿಬಿಐ ಎಲ್ಲಾ ಸಮಸ್ಯೆ ಪರಿಹಾರ ಅಗುತ್ತೆ ಎಂಬ ಆಫರ್ ನೀಡಿದ್ದಾಗಿ ಹೇಳಿದ್ದಾರೆ.
ನಮ್ಮ ಪಕ್ಷ ಮುಖಂಡರು ನಿರಂತರವಾಗಿ ನಮಗೆ ಬೆಂಬಲ ನೀಡಿದ್ದಾರೆ. ನಮ್ಮ ಮೇಲೆ ಪಕ್ಷ ಹೆಚ್ಚಿನ ಜವಾಬ್ದಾರಿ ನೀಡಿದೆ. ನಾವು ನಂಬಿರುವ ತತ್ವ, ಸಿದ್ಧಾಂತ, ಜನಸೇವೆ ಮಾಡಲು ಪಕ್ಷದಲ್ಲೇ ಮುಂದುವರೆಯುತ್ತೆವೆ. ಬೇರೆ ಪಕ್ಷಕ್ಕೆ ಹೋಗಿ ನಾವು ಮಾಡುವಂತಹದ್ದು ಏನು ಇಲ್ಲ. ಕಾಂಗ್ರೆಸ್ ನಲ್ಲಿದೇ ಜನ ಸೇವೆ ಮುಂದುವರೆಸುತ್ತೇವೆ. ನಾವು ಯಾವುದೇ ತಪ್ಪು ಮಾಡಿಲ್ಲ. ಹಾಗಾಗಿ ಯಾವುದೇ ಭಯ ಇಲ್ಲಾ ಎಂದು ಹೇಳಿದರು.
ಕಾಂಗ್ರೆಸ್ ಪಕ್ಷದಲ್ಲಿ ನಿಮ್ಮನ್ನು ನಿರ್ಲಕ್ಷ ಮಾಡಿದ್ದರಾ ಎಂಬ ಪ್ರಶ್ನೆಗೆ ಉತ್ತರಿಸಿ, ಪಕ್ಷ ನೀಡಿದ ಜವಾಬ್ದಾರಿಯನ್ನು ಡಿಕೆ ಶಿವಕುಮಾರ್ ಸೇರಿದಂತೆ ನಾನು ಮಾಡುತ್ತಿದ್ದು, ಪಕ್ಷ ಯಾವುದೇ ಜವಾಬ್ದಾರಿ ನೀಡದೆ ಇದ್ದರೆ ಎಲ್ಲಾ ಶಾಸಕರ ಹಾಗೇ ಜನರ ಸೇವೆ ಮಾಡುತ್ತೇವೆ. ಆದರೆ ಯಾರ ಮೇಲೆ ಬಿದ್ದು ಯಾವುದೇ ಸ್ಥಾನ ನೀಡಿ ಎಂದು ಇದುವರೆಗೂ ಹೋಗಿಲ್ಲ, ಮುಂದೆ ಹೋಗುವ ಸಂದರ್ಭವೂ ಬರಲ್ಲ ಎಂದರು.