ಬೆಂಗಳೂರು: ಪಕ್ಷಪಾತಿ ಧೋರಣೆ ಅನುಸರಿಸುತ್ತಿದ್ದಾರೆ ಎಂದು ಆರೋಪಿಸುತ್ತಿರುವ ಬಿಜೆಪಿ, ಸ್ಪೀಕರ್ ರಮೇಶ್ ಕುಮಾರ್ ಅವರಿಗೆ ಶಾಕ್ ಕೊಡಲು ಮುಂದಾಗಿದೆ.
ಬಿಎಸ್ ಯಡಿಯೂರಪ್ಪ ಅವರು ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕಾರ ಮಾಡಿದ ತಕ್ಷಣವೇ ಸ್ಪೀಕರ್ ಅವರಿಗೆ ಅವಿಶ್ವಾಸ ನೋಟಿಸ್ ನೀಡಲು ಮುಂದಾಗಿದ್ದಾರೆ ಎನ್ನುವ ವಿಚಾರ ಮೂಲಗಳಿಂದ ತಿಳಿದು ಬಂದಿದೆ.
ಅವಿಶ್ವಾಸ ನೋಟಿಸ್ ಕೊಟ್ಟರೆ ರಮೇಶ್ ಕುಮಾರ್ ಅವರಿಗೆ ಸ್ಪೀಕರ್ ಆಗಿ ಯಾವುದೇ ನಿರ್ಧಾರ ಕೈಗೊಳ್ಳುವಂತಿಲ್ಲ. ಅವಿಶ್ವಾಸ ಮಂಡನೆಯ ನಿರ್ಣಯ ಪಾಸ್ ಆಗುವವರೆಗೆ, ಈಗ ಬಾಕಿ ಇರುವ ಶಾಸಕರ ಅನರ್ಹತೆ ಅಥವಾ ರಾಜೀನಾಮೆ ಅಂಗೀಕಾರ ಹೀಗೆ ಯಾವುದೇ ತೀರ್ಮಾನವನ್ನು ಕೈಗೊಳ್ಳುವಂತಿಲ್ಲ. ಈ ಲೆಕ್ಕಾಚಾರವನ್ನು ಬಿಜೆಪಿ ಇಟ್ಟುಕೊಂಡಿದೆ ಎನ್ನಲಾಗಿದೆ.
ನಿನ್ನೆ ಮೂವರು ಶಾಸಕರನ್ನು ಅನರ್ಹಗೊಳಿಸಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ್ದ ಸ್ಪೀಕರ್, ಏಕಾಏಕಿಯಾಗಿ ನನ್ನನ್ನು ತೆಗೆದು ಹಾಕಲು ಸಾಧ್ಯವಿಲ್ಲ. ಸರ್ಕಾರ ಬದಲಾದರೂ ನಾನು ಸ್ಪೀಕರ್ ಆಗಿಯೇ ಮುಂದುವರಿಯುತ್ತೇನೆ. ಆದರೆ ಅಲ್ಲಿಯವರೆಗೆ ನಾನು ಕುಳಿತುಕೊಳ್ಳುವುದಿಲ್ಲ. ಒಂದು ವೇಳೆ ನನ್ನ ವಿರುದ್ಧ ಅವಿಶ್ವಾಸ ನಿರ್ಣಯ ಮಂಡಿಸಬೇಕಿದ್ದರೆ ಅದಕ್ಕೆ ಅವರು ನೋಟಿಸ್ ಕೊಡಲೇಬೇಕಾಗುತ್ತದೆ. 14 ದಿನ ಕಾಲಾವಕಾಶ ಇರುತ್ತದೆ ಎಂದಿದ್ದರು.
ಯಡಿಯೂರಪ್ಪ ಅವರು ಪ್ರಮಾಣ ವಚನ ಸ್ವೀಕಾರ ಮಾಡಿದ ಬಳಿಕ ಮೊದಲು ಸ್ಪೀಕರ್ ಅವರ ಕಾರ್ಯದರ್ಶಿಗೆ ನೋಟಿಸ್ ಕೊಡಲಾಗುತ್ತದೆ. ಈ ನೋಟಿಸಿಗೆ 14 ದಿನಗಳ ಕಾಲ ಕಾಲಾವಕಾಶ ಇರುತ್ತದೆ. ಈ 14 ದಿನದಲ್ಲಿ ಒಂದು ದಿನ ಮತಕ್ಕೆ ಹಾಕುವ ಪ್ರಸ್ತಾಪ ಮಾಡಬೇಕಾಗುತ್ತದೆ. ಒಂದು ವೇಳೆ ಸ್ಪೀಕರ್ ವಿರುದ್ಧ ಅವಿಶ್ವಾಸ ನಿರ್ಣಯ ಮಾಡಿದರೆ ಅವರು ಯಾವುದೇ ರೀತಿಯ ನಿರ್ಧಾರವನ್ನು ತೆಗೆದುಕೊಳ್ಳುವಂತಿಲ್ಲ.
ಉಳಿದಿರುವ ಶಾಸಕರ ಅನರ್ಹತೆ ಹಾಗೂ ರಾಜೀನಾಮೆ ಅಂಗೀಕಾರ ವಿಚಾರ ಇನ್ನೂ ಬಾಕಿಯಿದ್ದು ಸ್ಪೀಕರ್ ಯಾವ ನಿರ್ಧಾರ ಕೈಗೊಳ್ಳುತ್ತಾರೆ ಎನ್ನುವ ಕುತೂಹಲ ಹೆಚ್ಚಾಗಿದೆ.