ಬೆಂಗಳೂರು: ನಾಲ್ಕನೇ ಬಾರಿ ಸಿಎಂ ಆಗುವ ಉತ್ಸಾಹದಲ್ಲಿರುವ ಬಿ.ಎಸ್.ಯಡಿಯೂರಪ್ಪ ಅವರಿಗೆ ಶುಭಾಶಯ ಕೋರಲು ಅವರ ನಿವಾಸಕ್ಕೆ ಪಕ್ಷದ ಬೆಂಬಲಿಗರು, ಕಾರ್ಯಕರ್ತರು ರಾಜ್ಯದ ವಿವಿಧ ಜಿಲ್ಲೆಗಳಿಂದ ಆಗಮಿಸಿದ್ದಾರೆ.
ಬೆಳಗ್ಗೆ 6 ಗಂಟೆಯಿಂದಲೇ ಬಿಎಸ್‍ವೈ ನಿವಾಸ ದವಳಗಿರಿಗೆ ಆಗಮಿಸಿ ಈ ಬಾರಿ ಬಿಜೆಪಿ ಅಧಿಕಾರಕ್ಕೆ ಬರುತ್ತಿರುವುದು ಸಂತಸ ತಂದಿದೆ ಎಂದು ಸಿಹಿ ಹಂಚಿ ಸಂಭ್ರಮಿಸಿದ್ದಾರೆ. ವಿಶ್ವಾಸಮತ ಪ್ರಕ್ರಿಯೆ ಮುಗಿಯುತ್ತಿದಂತೆಯೇ ಶಿವಮೊಗ್ಗ ಸೇರಿದಂತೆ ರಾಜ್ಯದ ವಿವಿಧ ಭಾಗಗಳಲ್ಲಿ ಬಿಜೆಪಿ ಕಾರ್ಯಕರ್ತರು ಸಿಹಿ ಹಂಚಿ, ಪಟಾಕಿ ಸಿಡಿಸಿ ಸಂಭ್ರಮಿಸಿದ್ದರು.
ಪಕ್ಷದ ಕೆಲ ಕಾರ್ಯಕರ್ತರು ಪಬ್ಲಿಕ್ ಟಿವಿಯೊಂದಿಗೆ ಮಾತನಾಡಿ, ಅವಧಿಗೂ ಮುನ್ನವೇ ಬಿಎಸ್‍ವೈ ಸಿಎಂ ಆಗುವ ಸಂದರ್ಭ ಇತ್ತು. ಆದರೆ ಮೈತ್ರಿಯಿಂದಾಗಿ ಅದು ಸಾಧ್ಯವಾಗಿರಲಿಲ್ಲ. ಎಸ್‍ವೈ ರಾಜ್ಯದ ಜನತೆಗೆ ಒಳ್ಳೆಯ ಆಡಳಿತ ನೀಡುತ್ತಾರೆ ಎಂಬ ವಿಶ್ವಾಸ ಇದೆ. ರಾಜ್ಯದಲ್ಲಿ ರೈತರ ಪರ ಸರ್ಕಾರ ಅಧಿಕಾರಕ್ಕೆ ಬರಲಿದೆ ಎಂದರು.
ಮಂಗಳವಾರ ರಾತ್ರಿ ರಮಡಾ ರೆಸಾರ್ಟಿನಲ್ಲಿ ತಮ್ಮ ಶಾಸಕರೊಂದಿಗೆ ಸಭೆ ನಡೆಸಿ ತಮ್ಮ ನಿವಾಸಕ್ಕೆ ಹಿಂತಿರುಗಿದ್ದ ಬಿಎಸ್ ವೈ, ಇಂದು ರಾಜ್ಯಪಾಲರ ಭೇಟಿ ಮಾಡುವ ಸಾಧ್ಯತೆ ಇದೆ. ಇತ್ತ ಗುರುವಾರ ಅಥವಾ ಶುಕ್ರವಾರ ಸಿಎಂ ಆಗಿ ಬಿಎಸ್‍ವೈ ಪ್ರಮಾಣ ವಚನ ಸ್ವೀಕಾರ ಮಾಡುವ ಮಾಹಿತಿ ಲಭಿಸಿದ್ದು, ಎರಡು ದಿನಗಳಲ್ಲಿ 4 ದಿನಾಂಕಗಳನ್ನು ಮುಹೂರ್ತವನ್ನ ಜ್ಯೋತಿಷಿಗಳು ನಿಗದಿ ಮಾಡಿದ್ದಾರೆ ಎನ್ನಲಾಗಿದೆ. ಪಕ್ಷದ ರಾಷ್ಟ್ರಿಯ ಅಧ್ಯಕ್ಷರಾಗಿರುವ ಅಮಿತ್ ಶಾ, ಕಾರ್ಯಾಧ್ಯಕ್ಷ ಜೆಪಿ ನಡ್ಡಾ ಜೊತೆ ಚರ್ಚಿಸಿ ಮುಂದಿನ ತೀರ್ಮಾನ ಕೈಗೊಳ್ಳುವುದಾಗಿ ಬಿಎಸ್‍ವೈ ಹೇಳಿದ್ದಾರೆ.