ಕಳ್ಳಗಿವಿ ಇಟ್ಟಿಲ್ಲಾಂದ್ರೆ ಕುಮಾರಸ್ವಾಮಿಗ್ಯಾಕೆ ಟೆನ್ಶನ್: ಶೋಭಾ ಕರಂದ್ಲಾಜೆ ಪ್ರಶ್ನೆ

Public TV
1 Min Read
SHOBHA HDK

ಉಡುಪಿ: ಫೋನ್ ಕದ್ದಾಲಿಕೆ ಯಾರೇ ಮಾಡಿದ್ದರೂ ತಪ್ಪು. ಸಿಬಿಐ ತನಿಖೆಯಿಂದ ಎಲ್ಲಾ ಸತ್ಯಾಂಶ ಹೊರಬರಲಿದೆ. ತಪ್ಪು ಮಾಡಿಲ್ಲ ಎನ್ನುವುದಾದರೆ ಅಪರಾಧ ಭಾವನೆ ಯಾಕೆ ಮೂಡುತ್ತೆ ಎಂದು ಸಂಸದೆ ಶೋಭಾ ಕರಂದ್ಲಾಜೆ, ಮಾಜಿ ಸಿಎಂ ಕುಮಾರಸ್ವಾಮಿ ಅವರಿಗೆ ಪ್ರಶ್ನೆ ಮಾಡಿದ್ದಾರೆ.

ನಗರದಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಕುಮಾರಸ್ವಾಮಿ ಅವರು ಏನೂ ಮಾಡಿಲ್ಲ ಅಂದ್ರೆ ಖುಷಿಯಾಗಿರಲಿ. ಮಾಜಿ ಸಿಎಂ ಸಿದ್ದರಾಮಯ್ಯ ಅವರಿಗೆ ಫೋನ್ ಕದ್ದಾಲಿಕೆ ಬಗ್ಗೆ ತನಿಖೆ ಆಗಬೇಕೆಂಬ ಅಪೇಕ್ಷೆ ಇತ್ತು. ಯಾರು ತಪ್ಪು ಮಾಡಿದ್ದಾರೆ ಎಂಬುದು ತನಿಖೆಯಿಂದ ಗೊತ್ತಾಗಲಿದೆ. ಒಂದು ವೇಳೆ ಯಾರೂ ತಪ್ಪು ಮಾಡಿಲ್ಲ ಅಂದ್ರೆ ಇಡೀ ರಾಜ್ಯವೇ ಖುಷಿಪಡುತ್ತದೆ ಎಂದರು.

SHOBHA

ಸಿಎಂ ಯಡಿಯೂರಪ್ಪ ಪುತ್ರ ವಿಜಯೇಂದ್ರ ವರ್ಗಾವಣೆ ದಂಧೆ ವಿಚಾರದಲ್ಲಿ ಭಾಗಿಯಾಗಿರುವ ಬಗ್ಗೆ ಮಾಧ್ಯಮಗಳು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ಈ ಬಗ್ಗೆ ನನಗೇನೂ ಗೊತ್ತೇ ಇಲ್ಲ. ನಾನು ನನ್ನದೇ ಕೆಲಸದಲ್ಲಿದ್ದೇನೆ. ನೆರೆ ಪ್ರವಾಸ, ಪಾರ್ಲಿಮೆಂಟ್ ಓಡಾಟದಲ್ಲಿದ್ದೇನೆ. ಇದ್ಯಾವುದರ ಬಗ್ಗೆಯೂ ತಲೆ ಕೆಡಿಸಿಕೊಂಡಿಲ್ಲ. ನನ್ನ ಫೋನ್ ಕದ್ದಾಲಿಕೆ ಆದರೆ ಸಮಸ್ಯೆಯಿಲ್ಲ. ಯಾಕೆಂದರೆ ಸಮಾಜ ದ್ರೋಹ, ದೇಶ ದ್ರೋಹದ ಕೆಲಸ ನಾನು ಮಾಡಿಲ್ಲ ಎಂದು ಹೇಳಿದರು.

ರಾಜ್ಯ ಸಚಿವ ಸಂಪುಟ ರಚನೆ ವಿಚಾರವಾಗಿ ಪ್ರತಿಕ್ರಿಯೆ ನೀಡಿದ ಅವರು, ಪಟ್ಟಿಯನ್ನು ಸಿಎಂ ಯಡಿಯೂರಪ್ಪನವರು ಹೈಕಮಾಂಡಿಗೆ ಕೊಟ್ಟಿದ್ದಾರೆ. ಯಾರು ಸಚಿವರಾಗುತ್ತಾರೆ, ಆಗಲ್ಲ ಎನ್ನುವ ನಿರ್ಧಾರ ಸಿಎಂ ಮತ್ತು ಹೈಕಮಾಂಡ್ ನಾಯಕರು ಮಾಡುತ್ತಾರೆ. ಮಂಗಳವಾರ ಪ್ರಮಾಣವಚನದೊಳಗೆ ಪಟ್ಟಿ ಬರಲಿದೆ ಎಂದು ತಿಳಿಸಿದರು.

ಕೇಂದ್ರದಿಂದ ನೆರೆ ಪರಿಹಾರ ಆಧ್ಯಯನ ತಂಡ ಯಾವಾಗ ಬೇಕಾದ್ರು ಬರಬಹುದು ಎಂದ ಅವರು, ಗೃಹ ಸಚಿವರು, ಹಣಕಾಸು ಸಚಿವರು ಈಗಾಗಲೇ ಬಂದು ಹೋಗಿದ್ದಾರೆ. ನಾನು ರಾಜ್ಯ ರಾಜಕಾರಣ ಮಿಸ್ ಮಾಡಿಕೊಳ್ಳುತ್ತಿಲ್ಲ. ಸಂಸದೆಯಾಗಿ ನಾನು ಸಂತೋಷವಾಗಿದ್ದೇನೆ ಎಂದರು.

Share This Article
Leave a Comment

Leave a Reply

Your email address will not be published. Required fields are marked *