ಹುಬ್ಬಳ್ಳಿ: ಸಚಿವ ಡಿ.ಕೆ.ಶಿವಕುಮಾರ್ ಅವರು ನನ್ನ ಜೊತೆ ತಿರುಗಾಡುವ ಮುಖಂಡರೊಬ್ಬರಿಗೆ ಕಾಂಗ್ರೆಸ್ ಸೇರುವಂತೆ 5 ಲಕ್ಷ ರೂ. ಆಮಿಷ ಒಡ್ಡಿದ್ದಾರೆ ಎಂದು ಸಂಸದೆ ಶೋಭಾ ಕರಂದಾಜ್ಲೆ ಅವರು ಹೊಸ ಬಾಂಬ್ ಸಿಡಿಸಿದ್ದಾರೆ.
ಕುಂದಗೋಳ ತಾಲೂಕಿನ ಸಂಶಿ ಗ್ರಾಮದಲ್ಲಿ ನಡೆದ ಸಮಾವೇಶದಲ್ಲಿ ಮಾತನಾಡಿದ ಅವರು, ಸಚಿವರು ನನಗೆ ಆಮಿಷ ಒಡ್ಡಿದ್ದಾರೆ ಎಂದು ನಮ್ಮ ಪಕ್ಷದ ಮುಖಂಡರು ನನ್ನ ಬಳಿ ಹೇಳಿಕೊಂಡಿದ್ದಾರೆ. ಆದರೆ ನಾವು ಖರೀದಿಗೆ ಇಲ್ಲ ಅಂತ ಸಚಿವರಿಗೆ ಕುಂದಗೋಳ ಕ್ಷೇತ್ರದ ಜನರು ತಿರುಗೇಟು ಕೊಟ್ಟಿದ್ದಾರೆ ಎಂದು ಹೇಳಿದರು.
ಲೋಕಸಭಾ ಚುನಾವಣೆ ಪ್ರಚಾರದ ವೇಳೆ ಸಚಿವರು ಶಿವಮೊಗ್ಗಕ್ಕೆ ಹೋಗಿದ್ದರು. ಭದ್ರಾವತಿಯಲ್ಲಿ ಹಣ ಹಂಚಲು ಮುಂದಾಗಿದ್ದರು. ಆದರೆ ಕಾರಿನ ಟೈಯರ್ ನಲ್ಲಿ 2 ಕೋಟಿ ರೂ. ಸಿಕ್ಕಿಬಿತ್ತು. ಈ ಹಿಂದೆ ನಂಜನಗೂಡು ಉಪ ಚುನಾವಣೆ ಪ್ರಚಾರಕ್ಕೆ ಹೋಗಿದ್ದರು. ಆಗಲೂ ಲಾರಿಯಲ್ಲಿ ಹಣ ಸಾಗಿಸುವ ಪ್ರಯತ್ನ ಮಾಡಿ, ಸಿಕ್ಕಿಬಿದ್ದಿದ್ದರು. ಈ ಮೂಲಕ ಅಕ್ರಮವಾಗಿ ಚುನಾವಣೆ ಗೆಲ್ಲಲು ಸಚಿವರು ಮುಂದಾಗುತ್ತಿದ್ದಾರೆ ಎಂದು ದೂರಿದರು.
ನರೇಂದ್ರ ಮೋದಿ ಅವರು ಮತ್ತೆ ಪ್ರಧಾನಿಯಾಗುತ್ತಾರೆ. ಮುಂದಿನ ಐದು ವರ್ಷಗಳಲ್ಲಿ ದೇಶವನ್ನು ಉನ್ನತ ಮಟ್ಟಕ್ಕೆ ಕರೆದೊಯ್ಯುತ್ತಾರೆ. ಅವರಿಗೆ ನಾವು ಶಕ್ತಿ ತುಂಬುವ ಕೆಲಸವನ್ನು ಮಾಡಬೇಕು ಎಂದರು.
ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ 104 ಸ್ಥಾನಗಳಲ್ಲಿ ಗೆಲುವು ಸಾಧಿಸಿತ್ತು. ಆದರೆ ಈ ಗೆಲುವಿನ ನೇತೃತ್ವದ ವಹಿಸಿದ್ದ ಬಿ.ಎಸ್.ಯಡಿಯೂರಪ್ಪ ಅವರು ಈಗ ವಿರೋಧಪಕ್ಷದ ನಾಯಕ ಸ್ಥಾನದಲ್ಲಿ ಕುಳಿತಿದ್ದಾರೆ. ಕೇವಲ 37 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿದ ಕುಮಾರಸ್ವಾಮಿ ಅವರು ಸಿಎಂ ಆಗಿದ್ದಾರೆ ಎಂದು ಗುಡುಗಿದರು.