ಕಾರವಾರ: ಬಿಜೆಪಿಯ ಫೈರ್ ಬ್ರಾಂಡ್ ಸಂಸದ, ಪ್ರಖಂಡ ಹಿಂದುತ್ವವಾದಿ ಅನಂತ್‌ಕುಮಾರ್ ಹೆಗಡೆಗೆ (Ananth Kumar Hegde) ಈ ಬಾರಿ ಉತ್ತರ ಕನ್ನಡ (Uttar Kannada) ಟಿಕೆಟ್ ಮಿಸ್ ಆಗಿದೆ. ಟಿಕೆಟ್ ಕೈತಪ್ಪಿದ್ದಕ್ಕೆ ಮುನಿಸಿಕೊಂಡು ಬಿಜೆಪಿ (BJP) ಅಭ್ಯರ್ಥಿ ಪರ ಚುನಾವಣಾ ಪ್ರಚಾರಕ್ಕೆ ಬಾರದೇ ದೂರ ಸರಿದಿದ್ದಾರೆ. ಇದೇ ಹೊತ್ತಲ್ಲಿ ಏಪ್ರಿಲ್ 28ಕ್ಕೆ ಪ್ರಧಾನಿ ಮೋದಿ (PM Modi) ಜಿಲ್ಲೆಗೆ ಪ್ರಚಾರಕ್ಕಾಗಿ ಆಗಮಿಸುತ್ತಿದ್ದು, ಮುನಿಸು ಮರೆತು ಸಮಾವೇಶದಲ್ಲಿ ಭಾಗಿಯಾಗ್ತಾರಾ ಅನ್ನೋ ಕುತೂಹಲ ಮೂಡಿಸಿದೆ.
ಕಾಂಗ್ರೆಸ್ ವಿರುದ್ಧ ಬೆಂಕಿ ಉಗುಳುವ ಬಿಜೆಪಿಯ ಫೈರ್‌ಬ್ರಾಂಡ್ ಅನಂತ್‌ಕುಮಾರ್ ಹೆಗಡೆ ಕಳೆದ 30 ವರ್ಷಗಳಿಂದ ಸೋಲು ಕಾಣದೇ ಸಂಸದರಾಗಿದ್ದವರು. ಸೋಲಿಲ್ಲದ ಸರದಾರ ಅನಂತ್‌ಕುಮಾರ್ ಹೆಡೆಗೆ ಈ ಬಾರಿ ಟಿಕೆಟ್ ಕೈತಪ್ಪಿದೆ. ಲೋಕಸಭಾ ಚುನಾವಣೆ ಹತ್ತಿರವಾಗ್ತಿದ್ದಂತೆ ದಿಢೀರ್ ಆಗಿ ಕಾಣಿಸಿಕೊಂಡು ಸಿಎಂ ಸಿದ್ದರಾಮಯ್ಯ ವಿರುದ್ಧ ಗುಡುಗಿದ್ದ ಹೆಗಡೆ, ಟಿಕೆಟ್ ಕೈತಪ್ಪುತ್ತಿದ್ದಂತೆ ಮತ್ತೆ ಮಾಯವಾಗಿದ್ದಾರೆ. ವಿಶ್ವೇಶ್ವರ ಹೆಗಡೆ ಕಾಗೇರಿಗೆ (Vishweshwar Hegde Kageri) ಟಿಕೆಟ್ ಘೋಷಣೆ ಬಳಿಕ ಅನಂತ್‌ಕುಮಾರ್ ಹೆಗಡೆ ಎಲ್ಲೂ ಕಾಣಿಸಿಕೊಳ್ಳುತ್ತಿಲ್ಲ. ಪ್ರಚಾರಕ್ಕೂ ಬಾರದೇ ನಾಯಕರ ಕರೆಯನ್ನೂ ಸ್ವೀಕರಿಸದೇ ಪಕ್ಷದಿಂದಲೇ ಅಂತರ ಕಾಪಾಡಿಕೊಂಡಿದ್ದಾರೆ. ಇದನ್ನೂ ಓದಿ: ಮಲೇರಿಯಾದಿಂದ ಮಕ್ಕಳನ್ನು ರಕ್ಷಿಸಲು ಈ ಮುನ್ನೆಚ್ಚರಿಕೆಗಳಿರಲಿ
ಖುದ್ದು ಅಭ್ಯರ್ಥಿ ವಿಶ್ವೇಶ್ವರ ಹೆಗಡೆ ಕಾಗೇರಿ ಅವರನ್ನು ಭೇಟಿ ಮಾಡಿ ಪ್ರಚಾರಕ್ಕೆ ಕರೆತರುವ ನಿರಂತರ ಪ್ರಯತ್ನ ಮಾಡುತ್ತಲೇ ಇದ್ದರೂ ಸಫಲವಾಗಿಲ್ಲ. ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ನಡ್ಡಾ, ಅಮಿತ್ ಶಾ ಸಹ ಕರೆ ಮಾಡಿದರೂ ಕರೆ ಸ್ವೀಕರಿಸದೇ ದೂರ ಉಳಿದಿದ್ದಾರೆ. ಇದನ್ನೂ ಓದಿ: ನಟಿ ಅಮೂಲ್ಯ ಮಾವ, ಬಿಜೆಪಿ ಮುಖಂಡ ರಾಮಚಂದ್ರ ಮನೆ ಮೇಲೆ ಚುನಾವಣಾಧಿಕಾರಿಗಳ ದಾಳಿ
ಹೆಗಡೆ ಮುನಿಸಿನ ನಡುವೆ ಪ್ರಧಾನಿ ನರೇಂದ್ರ ಮೋದಿ ಉತ್ತರ ಕನ್ನಡಕ್ಕೆ ಪ್ರಚಾರಕ್ಕೆ ಆಗಮಿಸುತ್ತಿದ್ದಾರೆ. ವಿಶ್ವೇಶ್ವರ ಹೆಗಡೆ ಕಾಗೇರಿ ಪರ ಮತ ಯಾಚಿಸಲಿದ್ದಾರೆ. ಪ್ರಧಾನಿ ಮೋದಿ ಪ್ರಚಾರ ಸಭೆಗಾದರೂ ಅಸಮಾಧಾನಿತ ಅನಂತಕುಮಾರ್ ಹೆಗಡೆ ತಮ್ಮ ಮುನಿಸು ಬದಿಗೊತ್ತಿ ಭಾಗಿಯಾಗ್ತಾರಾ ಅನ್ನೋದು ಭಾರೀ ಕುತೂಹಲಕ್ಕೆ ಕಾರಣವಾಗಿದೆ.
ಅನಂತ್‌ಕುಮಾರ್ ಹೆಗಡೆ ಮುನಿಸು ಇಂದು ನಿನ್ನೆಯದಲ್ಲ. ಹಿಂದಿನ ವಿಧಾನಸಭಾ ಚುನಾವಣೆಯಲ್ಲಿ ತಾನು ಸೂಚಿಸಿದ ವ್ಯಕ್ತಿಗಳಿಗೆ ಟಿಕೆಟ್ ನೀಡಲಿಲ್ಲ ಎಂಬ ಕಾರಣದಿಂದ ಪಕ್ಷದ ಪ್ರಚಾರಕ್ಕೂ ಬಾರದೇ ದೂರ ಉಳಿದರೆ ಅಂಕೋಲದಲ್ಲಿ ನಡೆದ ಪ್ರಧಾನಿ ನರೇಂದ್ರ ಮೋದಿಯವರ ಕಾರ್ಯಕ್ರಮಕ್ಕೂ ಗೈರಾಗಿ ಮೌನಕ್ಕೆ ಶರಣಾಗಿದ್ದರು. ಇದರ ಪ್ರತಿಫಲವಾಗಿ ಭಟ್ಕಳ, ಕಾರವಾರ, ಶಿರಸಿ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿಗಳು ಹೆಗಡೆ ಬೆಂಬಲಿಗರ ಬಂಡಾಯದಿಂದ ಅಲ್ಪ ಮತದಲ್ಲಿ ಸೋಲು ಕಾಣಬೇಕಾಯ್ತು. ಇದೀಗ ತಮಗೇ ಟಿಕೆಟ್ ಮಿಸ್ ಆಗಿರೋದು ಅಸಮಾಧಾನ ದುಪ್ಪಟ್ಟಾಗಿದೆ.
ಕೆಲವು ಮೂಲಗಳ ಪ್ರಕಾರ ಹೆಗಡೆ ರಾಜ್ಯ ರಾಜಕಾರಣಕ್ಕೆ ಬರಲಿದ್ದಾರೆ ಎಂಬ ಸುದ್ದಿಗಳಿವೆ. ಹೀಗಾಗಿ ಮೋದಿ ಕಾರ್ಯಕ್ರಮಕ್ಕೆ ಹೆಗಡೆ ಭಾಗವಹಿಸಬಹುದು ಎಂಬ ನಿರೀಕ್ಷೆಯನ್ನು ಸ್ಥಳೀಯ ನಾಯಕರು ಇಟ್ಟುಕೊಂಡಿದ್ದಾರೆ.