– ದ್ವೇಷದ ತೀರ್ಪು ಕೊಡುವುದು ಒಳ್ಳೆಯದಲ್ಲ
ಬೆಂಗಳೂರು: ರಾಜೀನಾಮೆ ಕೊಟ್ಟವರಿಗೂ ನಮಗೂ ಯಾವ ಸಂಬಂಧವಿಲ್ಲ. ನಾವು ಯಾರೂ ಅವರನ್ನು ನೋಡಿಲ್ಲ. ಮಾತಾಡಿಸಿಯೂ ಇಲ್ಲ ಎಂದು ಬಿಜೆಪಿ ಮುಖಂಡ ಆರ್.ಅಶೋಕ್ ಹೇಳಿದ್ದಾರೆ.
ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಮಾತನಾಡಿದ ಅವರು, ನಾವು ಯಾರೂ ಅತೃಪ್ತ ಶಾಸಕರ ಜೊತೆ ಹೋಗಿಲ್ಲ, ಬಂದಿಲ್ಲ. ಅವರ ಜೊತೆಗೆ ಕಾಣಿಸಿಕೊಂಡಿಲ್ಲ. ನಮ್ಮ ಪಾಡಿಗೆ ನಾವು ಬಂದಿದ್ದೇವೆ. ಅವರ ಪಾಡಿಗೆ ಅವರು ಬಂದಿದ್ದಾರೆ ಅಷ್ಟೇ. ನಾನು ಅಶ್ವತ್ಥ್ ನಾರಾಯಣ್ ಬೇರೆ ಕೆಲಸಕ್ಕೆ ಹೋಗಿದ್ದೆವು ಎಂದು ಅತೃಪ್ತ ಶಾಸಕರ ಜೊತೆಗಿದ್ದ ಮಾತುಗಳನ್ನು ತಳ್ಳಿಹಾಕಿದರು.
Advertisement
Advertisement
ನೂರಕ್ಕೆ ನೂರು ಪರ್ಸೆಂಟ್ ಬಹುಮತ ಸಾಬೀತು ಪಡಿಸುತ್ತೇವೆ. ರಾಜ್ಯದ ಜನರು ಜೆಡಿಎಸ್‍ಗೆ 37 ಸ್ಥಾನ ಕೊಟ್ಟು ಥರ್ಡ್ ಪ್ಲೇಸ್‍ನಲ್ಲಿ ಇಟ್ಟಿದ್ದರು. ಆದರೆ ಥರ್ಡ್ ಪ್ಲೇಸ್ ಬಂದವರು ಫಸ್ಟ್ ಪ್ಲೇಸ್‍ಗೆ ಬಂದರು. ಇದು ರಾಜ್ಯದ ದುರಂತ. ಈ ದುರಂತ ಹೋಗಿ, ಒಳ್ಳೆಯ ದಿನಗಳು ಬಂದಿವೆ. ಮತ್ತೆ ಬಿ.ಎಸ್ ಯಡಿಯೂರಪ್ಪ ಸಿಎಂ ಆಗಿದ್ದಾರೆ ಎಂದು ತಿಳಿಸಿದರು.
Advertisement
ರಾಜ್ಯದ ಜನತೆಗೆ ಅಭಿವೃದ್ಧಿ, ಸುಭದ್ರ ಹಾಗೂ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಆಡಳಿತ ಕೊಡಬೇಕಿದೆ. ಕೇಂದ್ರದಲ್ಲೂ, ರಾಜ್ಯದಲ್ಲೂ ಬಿಜೆಪಿ ಸರ್ಕಾರ ಇದೆ. ಮೂವತ್ತು ವರ್ಷದ ಬಳಿಕ ಇಂತಹ ಅವಕಾಶ ಬಂದಿದೆ. ಕೇಂದ್ರದ ಯೋಜನೆ, ಅನುದಾನ ತರುವ ನಿಟ್ಟಿನಲ್ಲಿ ಕೆಲಸ ಮಾಡುತ್ತೇವೆ ಎಂದು ಹೇಳಿದರು.
Advertisement
ಅತೃಪ್ತ ಶಾಸಕರನ್ನು ಅನರ್ಹಗೊಳಿಸಿದ ಸ್ಪೀಕರ್ ರಮೇಶ್ ಕುಮಾರ್ ಅವರ ಆದೇಶದ ಕುರಿತು ಪ್ರತಿಕ್ರಿಯೆ ನೀಡಿದ ಶಾಸಕರು, ಸ್ಪೀಕರ್ ನಡೆ ಅನುಮಾನಕ್ಕೆ ಎಡೆಮಾಡಿಕೊಟ್ಟಿದೆ. ದ್ವೇಷದ ತೀರ್ಪು ಕೊಡುವುದು ಒಳ್ಳೆಯದಲ್ಲ. ರಮೇಶ್ ಕುಮಾರ್ ಅವರು ಕೂಡ ಒಬ್ಬ ಶಾಸಕರೇ. ಅವರು ಸ್ಪೀಕರ್ ಹುದ್ದೆಗೆ ಗೌರವ ಕೊಟ್ಟು ಮಾಡಬೇಕಿತ್ತು. ಈ ಹಿಂದೆ ಇಂತಹ ತೀರ್ಪು ಬಂದಿರಲಿಲ್ಲ ಎಂದರು.
ಭಾನುವಾರ ಮಧ್ಯಾರಾತ್ರಿ 12.50ರ ಸುಮಾರಿಗೆ ಕೆಂಪೇಗೌಡ ಏರ್‍ಪೋರ್ಟಿಗೆ ಬೈರತಿ ಬಸವರಾಜು, ಎಸ್.ಟಿ ಸೋಮಶೇಖರ್, ಶಿವರಾಮ್ ಹೆಬ್ಬಾರ್, ಮುನಿರತ್ನ ಹಾಗೂ ಎಂ ಟಿಬಿ ನಾಗರಾಜ್ ಬಂದಿಳಿದಿದ್ದಾರೆ. ಅನರ್ಹರು ಏರ್‍ಪೋರ್ಟಿನಿಂದ ಹೊರಬಂದ ಬಳಿಕ ಆರ್.ಅಶೋಕ್, ಅಶ್ವತ್ಥ್ ನಾರಾಯಣ್ ಕೂಡ ಆಗಮಿಸಿದ್ದಾರೆ. ಇವರ ಜೊತೆ ಪಕ್ಷೇತರ ಶಾಸಕ ನಾಗೇಶ್ ಕೂಡ ಬಂದಿದ್ದು, ಮಾಧ್ಯಮಗಳ ಕಣ್ತಪ್ಪಿಸಿ ಎಸ್ಕೇಪ್ ಆಗಿದ್ದರು.