ಬೆಳಗಾವಿ: ಕಾಂಗ್ರೆಸ್ ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್ ಹೇಳಿದ ಡ್ಯಾಶ್… ಡ್ಯಾಶ್‍ಗೆ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ತಿರುಗೇಟು ನೀಡಿದ್ದಾರೆ.
ಅಥಣಿ ಕ್ಷೇತ್ರದ ತೆಲಸಂಗ ಗ್ರಾಮದಲ್ಲಿ ಮಾತನಾಡಿದ ಬಸನಗೌಡ ಪಾಟೀಲ್ ಯತ್ನಾಳ್, ಹೆಣ್ಣು ಮಗಳಾಗಿ ಲಕ್ಷ್ಮಿ ಹೆಬ್ಬಾಳ್ಕರ್ ಗಂಡಸ್ತನ ಪ್ರಶ್ನೆ ಮಾಡುವ ರೀತಿ ಮಾತನಾಡೋದು ಸರಿಯಲ್ಲ. ಕ್ಷೇತ್ರದ ಅಭಿವೃದ್ಧಿಗಾಗಿ 1200 ಕೋಟಿ ರೂ. ಅನುದಾನ ತಂದಿದ್ದಾರೆ ಎಂದು ಹೇಳುತ್ತಾರೆ. ಅವರೆನೋ ಡ್ಯಾಶ್ ಎಂದು ಮಾತನಾಡಿದ್ದಾರೆ. ಅವರ ಕ್ಷೇತ್ರಕ್ಕೆ 1200 ಕೋಟಿ ಅನುದಾನ ಹೇಗೆ ಸಿಕ್ಕಿದೆ ಎಂಬ ಡ್ಯಾಶ್ ಡ್ಯಾಶ್ ನಮಗೂ ಗೊತ್ತಿದೆ. ಮಹೇಶ್ ಕುಮಟಳ್ಳಿ ಓರ್ವ ಸಾತ್ವಿಕ ನಾಯಕರಾಗಿದ್ದು, ಅಂತಹವರ ಬಗ್ಗೆ ಹಗುರವಾಗಿ ಮಾತನಾಡಿದ್ರೆ ಸುಮ್ಮನಿರಲ್ಲ ಎಂದು ಎಚ್ಚರಿಕೆ ನೀಡಿದರು.
ಸಿದ್ದರಾಮಯ್ಯರಿಗೆ ಜಯಮಾಲಾ ನೆನಪು ಆಗ್ತಾರೆ. ಹಾಗಾಗಿ ಅವರು ಜಯಮ್ಮನ ಜಯಂತಿ ಮಾಡ್ತಾರೆ. ಸಿದ್ದರಾಮಯ್ಯನವರು ಲಕ್ಷ್ಮಿ ಹೆಬ್ಬಾಳ್ಕರ್ ಅವರನ್ನ ಕಿತ್ತೂರು ರಾಣಿ ಚೆನ್ನಮ್ಮಾ ಅವರಿಗೆ ಹೋಲಿಸುತ್ತಾರೆ. ವೀರರಾಣಿ ಆಗಿರುವ ಕಿತ್ತೂರು ಚೆನ್ನಮ್ಮರ ಕಾಲಿನ ಧೂಳಿಗೆ ಸಮವಲ್ಲ. ಕೆಲವರು ನಾವೇ ಸಿಎಂ ಆಗತ್ತೇವೆ ಎಂದು ತಿರುಕನ ಕನಸು ಕಾಣುತ್ತಿದ್ದಾರೆ. ಯಡಿಯೂರಪ್ಪನವರ ಬದಲಾವಣೆ ಅನ್ನೋದು ಮೂರ್ಖತನದ ಮಾತು. ಬಿಜೆಪಿ ಸರ್ಕಾರವನ್ನು ಮೂರುವರೆ ವರ್ಷ ಯಾರೂ ಅಲುಗಾಡಿಸಲು ಆಗುವುದಿಲ್ಲ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಲಕ್ಷ್ಮಿ ಹೆಬ್ಬಾಳ್ಕರ್ ಹೇಳಿದ್ದೇನು? ನಾನು ಬೆಳಗಾವಿ ರಾಜಕಾರಣ ಬದಲು ಮಾಡಬಲ್ಲೆ. ಕೊಟ್ಟ ಕುದುರೆ ಏರಲು ಆಗದವನು ಇನ್ನೊಂದು ಕುದುರೆ ಏರುತ್ತೇನೆ ಅನ್ನೋನು ವೀರನೂ ಅಲ್ಲ ಶೂರನೂ ಅಲ್ಲ. ಡ್ಯಾಶ್ ನೂ ಅಲ್ಲ ಎಂದು ಅನರ್ಹರ ವಿರುದ್ಧ ವಾಗ್ದಾಳಿ ನಡೆಸಿದ್ದರು. ಮಹೇಶ್ ಕುಮಟಳ್ಳಿ ಮಳ್ಳ ಮಳ್ಳ ಮಂಚಕ್ಕೆ ಎಷ್ಟು ಕಾಲು ಅಂದ್ರೆ ಮೂರು ಮತ್ತೊಂದು ಅನ್ನೋವಂತಹ ಮಳ್ಳ. 2013 ಮತ್ತು 2018ರ ಚುನಾವಣೆಗೆ ಟಿಕೆಟ್ ಕೊಡಿಸಲು ನಾನೂ ಸಹಾಯ ಮಾಡಿದ್ದೆ. ಒಳ್ಳೆಯವರು, ಸುಸಂಸ್ಕೃತರು ಇದ್ದಾರೆ ಅಂದುಕೊಂಡಿದ್ದೆವು. ಆದರೆ ಅವರು ದ್ರೋಹ ಮಾಡಿದ್ದಾರೆ ಎಂದು ಕಿಡಿಕಾರಿದ್ದರು.
ಪಕ್ಷವೆನ್ನುವ ಹೆತ್ತ ತಾಯಿಗೆ ದ್ರೋಹ ಮಾಡಿದ್ದಾರೆ. ಇವತ್ತು ಹಾಲು ಕುಡಿದ ಮಕ್ಕಳು ಬದುಕುತ್ತಿಲ್ಲ ಇನ್ನು ಇವರು ವಿಷ ಕುಡಿದವರು ಇವರು ಬದುಕುತ್ತಾರಾ? ಜನ್ಮಕೊಟ್ಟ ತಾಯಿ ಒಬ್ಬರಿದ್ರೆ ಜಗತ್ತನ್ನು ತೋರಿಸಿದ ತಾಯಿ ನಮ್ಮ ಪಕ್ಷ. ಅಂತಹ ಪಕ್ಷಕ್ಕೆ ದ್ರೋಹ ಮಾಡಿ ಹೋಗಿದ್ದಾರೆ. ಅನುದಾನ ಕೊಡದಿದ್ದಕ್ಕೆ ಇವರೆಲ್ಲ ಪಕ್ಷ ಬಿಟ್ಟು ಹೋಗಿದ್ದಾರಂತೆ. ಲಕ್ಷ್ಮಿ ಹೆಬ್ಬಾಳ್ಕರ್ ಗೆ ಕೊಟ್ಟಷ್ಟು ಅನುದಾನ ನಮಗೆ ಕೊಡಲಿಲ್ಲ ಅಂತಾರೆ. ಅನುದಾನ ಕೇಳೋಕೆ ಆಗದೇ ಇವರೇನು ಬಾಯಲ್ಲಿ ಕಡಬು ಇಟ್ಟುಕೊಂಡಿದ್ದರಾ? ಮಂತ್ರಿಗಳ ಕಾಲು, ಕೈ ಹಿಡಿದು ಕೇಳಿ ಅನುದಾನ ಪಡೆಯಬಹುದಿತ್ತು ಎಂದು ವಾಗ್ದಾಳಿ ನಡೆಸಿದ್ದರು.