– ಸೂಲಿಬೆಲೆ ಪರ ಬ್ಯಾಟಿಂಗ್, ಸದಾನಂದಗೌಡರಿಗೆ ಟಾಂಗ್
– ಇದೇ ಖಾತೆ ಬೇಕು ಅಂತ ಸರ್ಕಾರಿ ಕಾರು ಬಿಟ್ಟು ಓಡಿ ಹೋಗ್ಲಿಲ್ಲ
– ಸಿ.ಟಿ.ರವಿ ವಿರುದ್ಧ ಗುಡುಗಿದ ಯತ್ನಾಳ್
ವಿಜಯಪುರ: ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ತಮ್ಮದೇ ಪಕ್ಷದ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿ.ಎಲ್.ಸಂತೋಷ್ ವಿರುದ್ಧ ನೇರ ವಾಗ್ದಾಳಿ ನಡೆಸಿದ್ದಾರೆ.
ನಗರದಲ್ಲಿ ಮಾತನಾಡಿದ ಶಾಸಕರು, ದಕ್ಷಿಣ ಭಾರತದಲ್ಲಿ ಸಂಘಟನಾತ್ಮಕ ಚತುರರು, ವೀರರು, ಧೀರರು ಎಂದು ಹೇಳಿಕೊಳ್ಳುವವರು ಕೇರಳ, ಆಂಧ್ರಪ್ರದೇಶದ ಉಸ್ತುವಾರಿ ಹೊಂದಿದ್ದಾಗ ಎಷ್ಟು ಸೀಟು ಗೆದ್ದು ತಂದರು. ಕೇರಳದಲ್ಲಿ ಐದು ಲೋಕಸಭಾ ಕ್ಷೇತ್ರಗಳಲ್ಲಿ ಗೆಲ್ಲುತ್ತೇವೆ ಎಂದು ಭಾಷಣ ಮಾಡಿದರು. ಕೊನೆಗೆ ಗೆದ್ದಿದ್ದು ಎಷ್ಟು? ಒಂದೇ ಒಂದು ಲೋಕಸಭಾ ಕ್ಷೇತ್ರದಲ್ಲಿ ಗೆದ್ದು ಬರಲಿಲ್ಲ. ಬರೀ ಕಥೆ ಹೇಳಿದರು ಎಂದು ಬಿ.ಎಸ್.ಸಂತೋಷ್ ವಿರುದ್ಧ ಕಿಡಿಕಾರಿದರು.
ಕೇರಳದಲ್ಲಿ ಶಬರಿಮಲೆ ವಿವಾದ ಇದ್ದಾಗಲೂ ಲೋಕಸಭಾ ಚುನಾವಣೆಯಲ್ಲಿ ಒಂದು ಸೀಟು ಗೆಲ್ಲಿಸಲು ಅವರಿಂದ ಸಾಧ್ಯವಾಗಲಿಲ್ಲ. ಕೆಲ ಮಾಧ್ಯಮಗಳು ಜಾತಿ ಅಭಿಮಾನದಿಂದ ಅವರನ್ನೇ ಹೊಗಳಿದವು ಎಂದು ಮಾಧ್ಯಮಗಳ ಮೇಲೆ ಗೂಬೆ ಕೂಡಿಸಿದರು.
ಸಿಎಂ ಬಿ.ಎಸ್.ಯಡಿಯೂರಪ್ಪ ಹಾಗೂ ದಿವಂಗತ ಅನಂತ್‍ಕುಮಾರ್ ಅವರು ರಾಜ್ಯದಲ್ಲಿ ವ್ಯವಸ್ಥಿತವಾಗಿ ಪಕ್ಷ ಕಟ್ಟಿದ್ದಾರೆ. ಈ ಇಬ್ಬರು ನಾಯಕರು ಮಕ್ಕಳು, ಮನೆ ಬಿಟ್ಟು ಪಕ್ಷವನ್ನು ಬೆಳೆಸಿದ್ದಾರೆ. ಅನಂತ್‍ಕುಮಾರ್ ಅವರು ಇದ್ದಿದ್ದರೆ ರಾಜ್ಯಕ್ಕೆ ಇಂತಹ ಪರಿಸ್ಥಿತಿ ಬರುತ್ತಿರಲಿಲ್ಲ. ಪ್ರಧಾನಿ ನರೇಂದ್ರ ಮೋದಿ ಅವರ ಬಳಿ ಹೋಗಿ ರಾಜ್ಯದ ಸಮಸ್ಯೆ ಬಗ್ಗೆ ಮಾತನಾಡುವ ನಾಯಕರು ಇಂದು ರಾಜ್ಯದಲ್ಲಿ ಯಾರೂ ಇಲ್ಲ ಎಂದು ಪರೋಕ್ಷವಾಗಿ ರಾಜ್ಯ ಬಿಜೆಪಿ ಸಂಸದರ ವಿರುದ್ಧ ಕಿಡಿಕಾರಿದರು.
ಪ್ರವಾಹ ಸಂತ್ರಸ್ತರಿಗೆ ಕೇಂದ್ರದ ಪರಿಹಾರ ವಿಚಾರವಾಗಿ ಪ್ರತಿಕ್ರಿಯೆ ನೀಡಿದ ಶಾಸಕರು, ಚಿಂತಕ ಚಕ್ರವರ್ತಿ ಸೂಲಿಬೆಲೆ ಕೇಳುವುದರಲ್ಲಿ ತಪ್ಪೇನಿಲ್ಲ. ಅವರು ನರೇಂದ್ರ ಮೋದಿ ಪ್ರಧಾನಿಯಾಗಲಿ ಎಂದು ತಪಸ್ಸು ಮಾಡಿದವರು. ನಿಮ್ಮ ವೈಫಲ್ಯಗಳನ್ನು ಅವರ ಮೇಲೆ ಯಾಕೆ ಹಾಕುತ್ತೀರಿ. ಅವರ ವಿರುದ್ಧ ಟೀಕೆ ಮಾಡುವ ನೈತಿಕತೆ ನಿಮಗೆ ಇಲ್ಲ ಎಂದು ಕೇಂದ್ರ ಸಚಿವ ಡಿ.ವಿ.ಸದಾನಂದಗೌಡ ಅವರ ವಿರುದ್ಧ ವಾಗ್ದಾಳಿ ನಡೆಸಿದರು.
ಚಕ್ರವರ್ತಿ ಸೂಲಿಬೆಲೆ ಅವರನ್ನು ಬೈದು ನಿಮ್ಮ ಗೌರವ ಅಷ್ಟೇ ಅಲ್ಲ ಪ್ರಧಾನಿ ಮೋದಿ ಗೌರವವನ್ನು ಕಳೆಯಬೇಡಿ. ಅವರನ್ನ ಬೈದರೆ ಪಕ್ಷಕ್ಕೆ ಹಿನ್ನಡೆಯಾಗುತ್ತದೆ. ಸೂಲಿಬೆಲೆ ಅವರಿಗೆ ಏನು ಆಗಲ್ಲ, ಅವರೇನು ಚುನಾವಣೆಗೆ ನಿಲ್ಲುವುದಿಲ್ಲ, ರಾಜಕೀಯ ಬಯಸಿದವರಲ್ಲ. ನಿಮ್ಮ ಕೆಲಸ ನೀವು ಸರಿಯಾಗಿ ಮಾಡಿ ಎಂದು ಕೇಂದ್ರ ಸಚಿವರನ್ನು ಜಾಡಿಸಿದರು.
ಹೋಗ್ರಿ ಪ್ರಧಾನಿ ಬಳಿ ಪರಿಹಾರ ಹಣ ತನ್ನಿ. ಒಬ್ಬರು ಹುಬ್ಬಳ್ಳಿಯಲ್ಲಿ, ಇನ್ನೊಬ್ಬರು ಬೆಂಗಳೂರಿನಲ್ಲಿ ಕುಳಿತು ಏನ್ ಮಾಡುತ್ತಿದ್ದಿರೀ. ಕರ್ನಾಟಕಕ್ಕೆ 10 ಸಾವಿರ ಕೋಟಿ ರೂ. ಪರಿಹಾರ ತೆಗೆದುಕೊಂಡು ಬನ್ನಿ. ಇಲ್ಲೆ ಕುಳಿತು ಯಾರ್ಯಾರಿಗೋ ದೇಶದ್ರೋಹಿ ಎಂದು ಟೀಕೆ ಮಾಡುತ್ತೀರಿ ಎಂದು ಕೇಂದ್ರ ಸಚಿವರಾದ ಪ್ರಹ್ಲಾದ್ ಜೋಷಿ ಹಾಗೂ ಡಿ.ವಿ.ಸದಾನಂದಗೌಡ ಅವರಿಗೆ ಪರೋಕ್ಷವಾಗಿ ಟಾಂಗ್ ಕೊಟ್ಟರು.
ರಾಜ್ಯದಲ್ಲಿ ಹುಡುಗಾಟಿಕೆ ಹಚ್ಚಿದ್ದೀರಾ? ಸಂಸದರಾಗಿ ಕಥೆ ಹೇಳುದ್ದೀರಿ. ಹೇಳುವವರು ಕೇಳುವವರು ಇಲ್ವಾ ನಿಮಗೆ? ನಾನು ಪಕ್ಷ ಕಟ್ಟಿದ್ದೇನೆ, 10 ವರ್ಷ ಸಂಸದನಾಗಿ, ಕೇಂದ್ರ ಸಚಿವನಾಗಿ ಜವಾಬ್ದಾರಿ ನಿಭಾಯಿಸಿದ್ದೇನೆ. ನೀವು ಮಾತ್ರ ಜಿಲ್ಲೆಗೆ ಸೀಮಿತವಾಗಿ ಉಳಿದಿದ್ದಿರಾ, ಜಿಲ್ಲೆ ಬಿಟ್ಟು ಹೊರಗೆ ಬನ್ನಿ. ಹೋಗಿ ಹಠ ಹಿಡಿದು ನೆರೆ ಪರಿಹಾರ ಹಣ ತೆಗೆಕೊಂಡು ಬನ್ನಿ ಎಂದು ರಾಜ್ಯದ ಸಂಸದರನ್ನು ತರಾಟೆಗೆ ತೆಗೆದುಕೊಂಡರು.
ಉದ್ದೇಶ ಇಟ್ಟುಕೊಂಡು ಯತ್ನಾಳ್ ಅವರು ಪಕ್ಷದ ವಿರುದ್ಧ ಮಾತನಾಡುತ್ತಿದ್ದಾರೆ ಎಂಬ ಸಚಿವ ಸಿ.ಟಿ.ರವಿ ಅವರ ಹೇಳಿ ವಿರುದ್ಧ ಕಿಡಿಕಾರಿದ ಶಾಸಕರು, ನಾನೇನು ಮಂತ್ರಿಯಾಗಬೇಕು ಅಂತ ಯಾರ ಕಾಲು ಹಿಡಿದಿಲ್ಲ. ಇದೇ ಖಾತೆ ಬೇಕು ಅಂತ ಸರ್ಕಾರಿ ಕಾರು ಬಿಟ್ಟು ಓಡಿ ಮನೆಗೆ ಹೋಗಿ ಮಲಗಲಿಲ್ಲ. ಅರ್ಹತೆ ಇದ್ದರೆ ಸಚಿವ ಸ್ಥಾನ ನೀಡುತ್ತಾರೆ. ಮಾಜಿ ಪ್ರಧಾನಿ ಅಟಲ್ ಬಿಹರಿ ವಾಜಪೇಯಿ ಅವರು ನನ್ನ ಅರ್ಹತೆ ಗುರುತಿಸಿಯೇ ಮಂತ್ರಿ ಮಾಡಿದ್ದರು ಎಂದು ಟಾಂಗ್ ಕೊಟ್ಟರು.