ಬೆಂಗಳೂರು: ಬಿಜೆಪಿಯವರು ಸುಳ್ಳು ಹೇಳುವುದನ್ನು ತಮ್ಮ ಕಸುಬಾಗಿ ಮಾಡಿಕೊಂಡಿದ್ದು, ದೊಡ್ಡ ಮಟ್ಟದಲ್ಲಿ ಸುಳ್ಳನ್ನು ಪ್ರಚಾರ ಮಾಡುತ್ತಿದ್ದಾರೆ ಎಂದು ಸಚಿವ ಕೆಜೆ ಜಾರ್ಜ್ ತಿರುಗೇಟು ನೀಡಿದ್ದಾರೆ.
ಡಿವೈಎಸ್‍ಪಿ ಗಣಪತಿ ಆತ್ಮಹತ್ಯೆ ಪ್ರಕರಣದಲ್ಲಿ ರಾಜೀನಾಮೆ ನೀಡಬೇಕೆಂಬ ಬಿಜೆಪಿ ಆಗ್ರಹಕ್ಕೆ ವಿಧಾನಸೌಧದಲ್ಲಿ ಪ್ರತಿಕ್ರಿಯಿಸಿದ ಅವರು, ಡಿವೈಎಸ್ಪಿ ಪ್ರಕರಣವು ಈಗ ಸುಪ್ರೀಂ ಕೋರ್ಟ್‍ನಲ್ಲಿದೆ. ಹೀಗಾಗಿ ಪ್ರಕರಣದ ಬಗ್ಗೆ ನಾನು ಹೆಚ್ಚು ಮಾತನಾಡುವುದಿಲ್ಲ ಎಂದರು.
Advertisement
ಬಿಜೆಪಿಯವರು ಸಾಕ್ಷ್ಯಗಳು ನಾಶ ಆಗಿದೆ ಎಂದು ಹೇಳುತ್ತಿದ್ದಾರೆ. ನನಗೂ ಹಾಗೂ ಫೋನ್ ಕಾಲ್‍ಗಳಿಗೆ ಯಾವುದೇ ಸಂಬಂಧವಿಲ್ಲ. ಈ ಪ್ರಕರಣಕ್ಕೂ ನನಗೂ ಸಂಬಂಧ ಇದ್ದರೆ ಸಾಕ್ಷ್ಯ ತೋರಿಸಲಿ ಎಂದು ಜಾರ್ಜ್ ಸವಾಲು ಹಾಕಿದರು.
Advertisement
ಸಿಐಡಿಯಿಂದ ಸಾಕ್ಷ್ಯ ನಾಶವಾಗಿದೆ ಎನ್ನುವ ಆರೋಪಕ್ಕೆ ಪ್ರತಿಕ್ರಿಯಿಸಿ, ಈ ಪ್ರಶ್ನೆಗೆ ಸಿಐಡಿಯವರು ಉತ್ತರಿಸಬೇಕು. ವರದಿ ಸರಿ ಇಲ್ಲ ಎಂದು ಹೇಳಿ ಸುಪ್ರೀಂ ಕೋರ್ಟ್ ಗೆ ಹೋಗಿದ್ದಾರೆ. ದಾಖಲೆ ಇದ್ದರೆ ಸಿಐಡಿಗೆ ಕೊಡಬಹುದಿತ್ತಲ್ಲ ಯಾಕೆ ಸಾಕ್ಷ್ಯಗಳನ್ನು ಕೊಡಲಿಲ್ಲ ಎಂದು ಜಾರ್ಜ್ ಪ್ರಶ್ನಿಸಿದರು.
Advertisement
ಈ ಪ್ರಕರಣದಲ್ಲಿ ನನ್ನ ಹೆಸರು ಕೇಳಿಬಂದ ಕೂಡಲೇ ಸ್ವಯಂ ಪ್ರೇರಿತವಾಗಿ ರಾಜೀನಾಮೆ ನೀಡಿದೆ. ನಂತರ ಸಿಐಡಿಯವರು ಬಿ ರಿಪೋರ್ಟ್ ಹಾಕಿದಾಗ ಸಿಎಂ ನನ್ನನ್ನು ಮತ್ತೆ ಮಂತ್ರಿಯನ್ನಾಗಿ ಮಾಡಿದ್ದರು. ಯಾರೂ ಹೀಗೆ ರಾಜಿನಾಮೆ ಕೊಡುವುದಿಲ್ಲ. ಆದರೆ ನಾನು ಕೊಟ್ಟಿದ್ದೇನೆ. ಈಗಲೂ ಕೇಂದ್ರದ ಹಾಲಿ ಸಚಿವರ ಮೇಲೆ ಚಾರ್ಜ್ ಶೀಟ್ ಹಾಕಲಾಗಿದೆಯೇ? ಅವರೆಲ್ಲ ಯಾಕೆ ರಾಜಿನಾಮೆ ಕೊಟ್ಟಿಲ್ಲ ಎನ್ನುವುದನ್ನು ಜನ ಗಮನಿಸುತ್ತಾರೆ ಎಂದರು.
Advertisement
ಮೇಯರ್ ಚುನಾವಣೆ ವಿಚಾರವಾಗಿ ಮಾತನಾಡಿದ ಜಾರ್ಜ್ ಬಿಬಿಎಂಪಿ ಮೇಯರ್ ಚುನಾವಣೆ ಮುಂದಿನ ತಿಂಗಳಲ್ಲಿ ನಡೆಯಲಿದೆ ಹಾಗೂ ಈ ಸಲವೂ ಬಿಬಿಎಂಪಿಯಲ್ಲಿ ಕಾಂಗ್ರೆಸ್ – ಜೆಡಿಎಸ್ ಮೈತ್ರಿ ಮುಂದುವರೆಯುತ್ತದೆ ಎಂದು ಹೇಳಿದರು.
ಇದನ್ನೂ ಓದಿ: ಡಿವೈಎಸ್‍ಪಿ ಗಣಪತಿ ಆತ್ಮಹತ್ಯೆ ಕೇಸ್: ಕಂಪ್ಯೂಟರ್ ಫೈಲ್, ಫೋನ್ ಕಾಲ್ ಡಿಲೀಟ್