ಶಿವಮೊಗ್ಗ: ಮಾಜಿ ಇಂಧನ ಸಚಿವ ಡಿ.ಕೆ ಶಿವಕುಮಾರ್ ಅವರನ್ನು ಬಿಜೆಪಿ ಮುಖಂಡ ಕೆ.ಎಸ್ ಈಶ್ವರಪ್ಪ ಪ್ರಶ್ನಿಸಿದ್ದಾರೆ.
ಶಿವಮೊಗ್ಗದಲ್ಲಿ ಹಮ್ಮಿಕೊಂಡಿದ್ದ ಮತದಾರರ ಅಭಿನಂದನಾ ಸಮಾರಂಭದಲ್ಲಿ ಪಾಲ್ಗೊಂಡು ಬಳಿಕ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಕಾಂಗ್ರೆಸ್ ಅಧಿಕಾರದಲ್ಲಿ ಇದ್ದಾಗ ಬಿಜೆಪಿಯವರ ಮೇಲೆ, ಬಿಜೆಪಿ ಅಧಿಕಾರದಲ್ಲಿ ಇದ್ದಾಗ ಕಾಂಗ್ರೆಸ್ ನವರ ಮೇಲೆ ದಾಳಿ ನಡೆಸುವಂತಿಲ್ಲ ಅಂತ ಕಾನೂನು ಮಾಡಬೇಕೆ ಎಂದು ಮಾಜಿ ಸಚಿವರನ್ನು ಪ್ರಶ್ನಿಸಿದ್ದಾರೆ.
ಆದಾಯ ತೆರಿಗೆ ಇಲಾಖೆ ಸ್ವತಂತ್ರವಾದ ಇಲಾಖೆಯಾಗಿದೆ. ಅಲ್ಲಿ ಯಾರ ಹಸ್ತಕ್ಷೇಪ ನಡೆಯುವುದಿಲ್ಲ ಎಂದಿದ್ದಾರೆ. ಯುಪಿಎ ಸರ್ಕಾರ ಇದ್ದಾಗ ಬಿಜೆಪಿಯವರ ಮೇಲೆ ನಡೆದ ದಾಳಿಯಲ್ಲಿ ಕಾಂಗ್ರೆಸ್ ಕೈವಾಡವಿತ್ತೆ ಎಂದು ಪ್ರಶ್ನಿಸಿದ್ರು.
ರಾಜ್ಯ ಸರ್ಕಾರ ಅಂಗವಿಕಲ ಮಗು ಇದ್ದಂತೆ, ಇದಕ್ಕೆ ಎರಡು ತಲೆ, ನಾಲ್ಕು ಕಾಲು, ಎಂಟು ಕೈ ಎಷ್ಟೋ ಹೊಟ್ಟೆ. ಹೀಗೆ ವಿಚಿತ್ರವಾದ ಮಗು ಹುಟ್ಟಿದೆ ಎಂದು ವಿಶ್ಲೇಷಿಸಿದ್ದಾರೆ. ಈ ಮಗು ಬಹಳ ದಿನ ಉಳಿಯಲ್ಲ. ವಿಚಿತ್ರವಾಗಿ ಹುಟ್ಟಿರುವ ಮಗುವನ್ನು ಉಳಿಸಿಕೊಳ್ಳಲು ಯತ್ನಿಸುತ್ತಿದ್ದಾರೆ ಎಂದಿದ್ದಾರೆ.
ಸಚಿವ ಸಂಪುಟ ಬುಧವಾರ ರಚನೆ ಮಾಡುತ್ತೇವೆ. ಬಹಳಷ್ಟು ಜನ ಮಂತ್ರಿಗಿರಿಗಾಗಿ ಕಾಯುತ್ತಿದ್ದಾರೆ ಅಷ್ಟೆ ಎಂದು ಹೇಳಿದ್ದಾರೆ. ಕಾಂಗ್ರೆಸ್ ಸರ್ಕಾರವನ್ನು ತಮ್ಮ ಹಿಡಿತದಲ್ಲಿಟ್ಟುಕೊಳ್ಳಲು ಸಮನ್ವಯ ಸಮಿತಿ ರಚನೆ ಮಾಡಿಕೊಂಡು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರನ್ನು ಅಧ್ಯಕ್ಷರನ್ನಾಗಿ ಮಾಡಿಕೊಂಡಿದ್ದಾರೆ. ಸಮನ್ವಯ ಸಮಿತಿ ಯಾಕೆ ಬೇಕು ಅಂತ ದೇವೆಗೌಡರು ಹೇಳುತ್ತಿದ್ದಾರೆ. ಆರಂಭದಲ್ಲೇ ಅಪಸ್ವರವೆತ್ತಿದ್ದ ಕಾಂಗ್ರೆಸ್ ದಿನೇ ದಿನೇ ಷರತ್ತುಗಳನ್ನು ಹಾಕುತ್ತಿದೆ. ಕಾಂಗ್ರೆಸ್ ನಾಯಕರು ಜೆಡಿಎಸ್ ಮೇಲೆ ಸವಾರಿ ಮಾಡಲು ಯತ್ನಿಸುತ್ತಿದ್ದಾರೆ ಎಂದಿದ್ದಾರೆ.