ಕೋಲ್ಕತಾ: ಮಮತಾ ಬ್ಯಾನರ್ಜಿ ಸಿಎಂ ಆಗಿ ಅಧಿಕಾರ ನಡೆಸುತ್ತಿರುವ ಪಶ್ಚಿಮ ಬಂಗಾಳದಲ್ಲಿ ಮತ್ತೆ ರಾಜಕೀಯ ದ್ವೇಷದ ರಕ್ತದೋಕುಳಿ ಚೆಲ್ಲಿದೆ. ಹೂಗ್ಲಿ ಜಿಲ್ಲೆಯ ಆರಾಮ್‍ಬಾಗ್ ಪ್ರದೇಶದಲ್ಲಿ ಸ್ಥಳೀಯ ಬಿಜೆಪಿ ನಾಯಕನನ್ನು ಕೊಲೆಗೈಯಲಾಗಿದ್ದು, ಇದರಲ್ಲಿ ಟಿಎಂಸಿ(ತೃಣಮೂಲ ಕಾಂಗ್ರೆಸ್) ಕೈವಾಡವಿದೆ ಎಂದು ಬಿಜೆಪಿ ಆರೋಪಿಸಿದೆ.
ಆರಾಮ್‍ಬಾಗ್ ಪ್ರದೇಶದ ಸ್ಥಳೀಯ ಬಿಜೆಪಿ ನಾಯಕ ಶೇಖ್ ಅಮಿರ್ ಖಾನ್ ಮೃತ ದುರ್ದೈವಿ. ಖಾನ್ ಅವರ ಮೇಲೆ ಕತ್ತಿಯಿಂದ ಹಲ್ಲೆ ನಡೆಸಿ, ಬಿದಿರು ಕೋಲಿನಿಂದ ಥಳಿಸಿ ಮಾರಣಾಂತಿಕ ದಾಳಿ ನಡೆಸಲಾಗಿತ್ತು. ಈ ಹಲ್ಲೆಯಿಂದ ಗಂಭೀರ ಗಾಯಗೊಂಡ ಖಾನ್ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಿಸದೆ ಆಸ್ಪತ್ರೆಯಲ್ಲಿಯೇ ಖಾನ್ ಪ್ರಾಣ ಬಿಟ್ಟಿದ್ದಾರೆ ಎನ್ನಲಾಗಿದೆ. ಸದ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಮಹಿಳೆಯರನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
Advertisement
Advertisement
ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಸರಿಯಿಲ್ಲ. ಈ ಕೊಲೆ ಹಿಂದೆ ಟಿಎಂಸಿ ಪಕ್ಷದ ಕೈವಾಡವಿದೆ. ಖಾನ್ ಅವರ ಮೇಲೆ ದಾಳಿ ನಡೆದ ಸ್ಥಳ ಎಸ್‍ಡಿಪಿಒ ಕಚೇರಿಯಿಂದ ಹೆಚ್ಚು ದೂರವಿಲ್ಲ. ಆದರೂ ಪೊಲೀಸರು ಸ್ಥಳಕ್ಕೆ ತಲುಪಲು ತಡಮಾಡಿದರು ಎಂದು ಸ್ಥಳೀಯ ಬಿಜೆಪಿ ನಾಯಕರು ಆರೋಪಿಸಿದ್ದಾರೆ. ಅಲ್ಲದೆ ಬಿಜೆಪಿ ಕಾರ್ಯಕರ್ತರು ಹತ್ಯೆಯನ್ನು ಖಂಡಿಸಿ ರಾಷ್ಟ್ರೀಯ ಹೆದ್ದಾರಿ ತಡೆದು ಪ್ರತಿಭಟನೆ ನಡೆಸಿದ್ದಾರೆ. ಜೊತೆಗೆ ಆರೋಪಿಗಳನ್ನು ತಕ್ಷಣ ಬಂಧಿಸಬೇಕೆಂದು ಆಗ್ರಹಿಸಿದ್ದಾರೆ.
Advertisement
Advertisement
ಆದರೆ ಈ ಆರೋಪಗಳನ್ನು ಟಿಎಂಸಿ ಪಕ್ಷ ತಳ್ಳಿಹಾಕಿದೆ ಎಂದು ಮೂಲಗಳಿಂದ ತಿಳಿದು ಬಂದಿದೆ. ಈ ಬಗ್ಗೆ ಹೂಗ್ಲಿ ಟಿಎಂಸಿ ನಾಯಕ ಮಾತನಾಡಿ, ಕೊಲೆ ಪ್ರಕರಣದಲ್ಲಿ ತಮ್ಮ ಪಕ್ಷದವರ ಕೈವಾಡವಿಲ್ಲ. ಆದರೆ ಬಿಜೆಪಿ ಕಾರ್ಯಕರ್ತರೇ ಲೋಕಸಭಾ ಚುನಾವಣೆಯ ಬಳಿಕ ನಮ್ಮ ಕಾರ್ಯಕರ್ತರ ಮೇಲೆ ಹಲ್ಲೆ ನಡೆಸುತ್ತಿದ್ದಾರೆ ಎಂದು ಪ್ರತ್ಯಾರೋಪ ಮಾಡಿದ್ದಾರೆ.
ಈ ಹಿಂದೆ ಕೂಡ ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ನಾಯಕರು, ಆರ್‍ಎಸ್‍ಎಸ್ ನಾಯಕರು ಹಾಗೂ ಟಿಎಂಸಿ ನಾಯಕರ ಕೊಲೆಗಳು, ಅನುಮಾನಾಸ್ಪದ ಸಾವಿನ ಪ್ರಕರಣಗಳು ಬೆಳಕಿಗೆ ಬಂದಿದ್ದವು. ಲೋಕಸಭೆ ಚುನಾವಣೆ ಸಮಯದಲ್ಲಿ ಹಾಗೂ ಚುನಾವಣೆ ಬಳಿಕ ರಾಜಕೀಯ ನಾಯಕರ ಕೊಲೆ ಪ್ರಕರಣ ಹೆಚ್ಚಾಗಿದ್ದವು. ಈಗ ಅದೇ ಸಾಲಿಗೆ ಇನ್ನೊಂದು ಪ್ರಕರಣ ಕೂಡ ಸೇರಿಕೊಂಡಿದೆ.