ಮಡಿಕೇರಿ: ಕೊಡಗು ಜಿಲ್ಲಾ ಬಿಜೆಪಿಯ (BJP) ಮುಖಂಡ, ಸಂಪಾಜೆ ನಿವಾಸಿ ಬಾಲಚಂದ್ರ ಕಳಗಿ (Balachandra Kalagi) ಅವರನ್ನು ಹತೈಗೈದ ಅಪರಾಧಿಗಳಿಗೆ ಕೊಡಗು ಜಿಲ್ಲಾ 1ನೇ ಅಪರ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಜೀವಾವಧಿ ಶಿಕ್ಷೆ ವಿಧಿಸಿದೆ.
ಕಲ್ಲುಗುಂಡಿ ನಿವಾಸಿ ಹರಿಪ್ರಸಾದ್ ಹಾಗೂ ಲಾರಿ ಚಾಲಕ ಮಡಿಕೇರಿಯ ಜಯನ್ ಶಿಕ್ಷೆಗೆ ಗುರಿಯಾದವರಾಗಿದ್ದಾರೆ. ಅ.16ರಂದು ಇಬ್ಬರನ್ನು ದೋಷಿಗಳೆಂದು ತೀರ್ಪು ನೀಡಿದ್ದ ಕೋರ್ಟ್ ಶನಿವಾರ ಶಿಕ್ಷೆಯ ಪ್ರಮಾಣವನ್ನು ಪ್ರಕಟಿಸಿದೆ.
10 ಸಾವಿರ ರೂ. ದಂಡದ ಮೊತ್ತವನ್ನು ಮೃತ ಬಾಲಚಂದ್ರ ಕಳಗಿ ಅವರ ಪತ್ನಿಗೆ ನೀಡುವಂತೆ ಆದೇಶಿಸಿದೆ. ಪ್ರಾಸಿಕ್ಯೂಷನ್ ಪರವಾಗಿ ಸರ್ಕಾರಿ ಅಭಿಯೋಜಕ ದೇವೇಂದ್ರಪ್ಪ ವಾದ ಮಂಡಿಸಿದ್ದರು.
ಏನಿದು ಪ್ರಕರಣ?
ಕೊಡಗು ಜಿಲ್ಲೆಯ ಮಡಿಕೇರಿ ತಾಲೂಕಿನ ಸಂಪಾಜೆ ಗ್ರಾ.ಪಂ ಮಾಜಿ ಅಧ್ಯಕ್ಷರಾಗಿದ್ದ ಬಾಲಚಂದ್ರ ಕಳಗಿ ಮಾರ್ಚ್ 19, 2019 ರಂದು ಕಾರಿನಲ್ಲಿ ಪ್ರಯಾಣಿಸುತ್ತಿದ್ದಾಗ ಮೇಕೇರಿ-ತಾಳತ್‌ಮನೆ ರಸ್ತೆಯಲ್ಲಿ ಲಾರಿಯಿಂದ ಡಿಕ್ಕಿ ಹೊಡೆಸಿ ಹತ್ಯೆ ಮಾಡಲಾಗಿತ್ತು. ಇದನ್ನೂ ಓದಿ: ಅಪಘಾತವೆಂದು ಬಿಂಬಿಸಿ ಕೊಡಗು ಬಿಜೆಪಿ ಮುಖಂಡ ಕಳಗಿಯನ್ನುಕೊಲೆಗೈದ ಆರೋಪಿಗಳು ಸಿಕ್ಕಿಬಿದಿದ್ದು ಹೇಗೆ? ಪೊಲೀಸರು ಕೊಲೆ ಪ್ರಕರಣವನ್ನು ಬೇಧಿಸಿದ್ದು ಹೇಗೆ?
ಮೇಲ್ನೋಟಕ್ಕೆ ಅಪಘಾತ ಪ್ರಕರಣದಂತೆ ಕಂಡು ಬಂದಿದ್ದರೂ ತನಿಖೆ ನಡೆಸಿದ ನಂತರ ಪೊಲೀಸರು ಈ ವ್ಯವಸ್ಥಿತ ಕೊಲೆ ಪ್ರಕರಣವನ್ನು ಬೇಧಿಸಿದ್ದರು. ಪ್ರಕರಣಕ್ಕೆ ಸಂಬಂಧಿಸಿದಂತೆ ಸಂಪಾಜೆ ಕಲ್ಲುಗುಂಡಿ ನಿವಾಸಿಗಳಾದ ಸಂಪತ್ ಕುಮಾರ್, ಹರಿಪ್ರಸಾದ್ ಮತ್ತು ಲಾರಿ ಚಾಲಕ ಮಡಿಕೇರಿಯ ಜಯನ್ ಎಂಬವರನ್ನು ಮಡಿಕೇರಿ ಪೋಲೀಸರು ಬಂಧಿಸಿದ್ದರು.
ಜಾಮೀನಿನಲ್ಲಿ ಹೊರಗೆ ಬಂದಿದ್ದ ಆರೋಪಿಗಳಲ್ಲಿ ಒಬ್ಬನಾದ ಸಂಪತ್ ಕುಮಾರ್(35) ಎಂಬಾತನನ್ನು ಸುಳ್ಯದ ಶಾಂತಿನಗರದಲ್ಲಿ ಗುಂಡು ಹೊಡೆದು ಹತ್ಯೆ ಮಾಡಲಾಗಿತ್ತು. ಇದನ್ನೂ ಓದಿ: ಮಡಿಕೇರಿಯ ಬಿಜೆಪಿ ಮುಖಂಡ ಕಳಗಿ ಹತ್ಯೆಯ ಆರೋಪಿ ಸುಳ್ಯದಲ್ಲಿ ಬರ್ಬರ ಹತ್ಯೆ- ಸಿನಿಮಾ ಸ್ಟೈಲ್‌ನಲ್ಲಿ ಕೊಲೆ
ಕೊಲೆ ಮಾಡಿದ್ದು ಯಾಕೆ?
ಸಂಪಾಜೆ ಗ್ರಾಮ ಪಂಚಾಯತ್ ಅಧ್ಯಕ್ಷರಾಗಿದ್ದ ಬಾಲಚಂದ್ರ ಕಳಗಿ ಅವರಲ್ಲಿ ಸಂಪತ್ ವೈನ್ ಶಾಪ್ ತೆರೆಯಲು ಅನುಮತಿ ಕೇಳಿದ್ದ. ಕಳಗಿ ಅವರು ವೈನ್ ಶಾಪ್ ತೆರೆಯಲು ಅನುಮತಿ ನೀಡಿರಲಿಲ್ಲ. ರಿಕ್ರಿಯೇಶನ್ ಕ್ಲಬ್ ಮಾಡುವುದಕ್ಕೂ ಕಳಗಿ ವಿರೋಧ ವ್ಯಕ್ತಪಡಿಸಿದ್ದರು. ಅನುಮತಿ ನೀಡದ್ದಕ್ಕೆ ಅಸಮಾಧಾನಗೊಂಡಿದ್ದ ಸಂಪತ್ ಪ್ಲಾನ್ ಮಾಡಿ ಕೊಲೆ ಮಾಡಿದ್ದ.