ನನ್ನ ರಾಜಕೀಯ ಕಂಡು ಹೊಟ್ಟೆ ಉರಿ ಪಡ್ತಿದ್ದಾರೆ: ಸಿದ್ದರಾಮಯ್ಯ

Public TV
2 Min Read
siddaramaiah 1

ಬೆಂಗಳೂರು: ವ್ಯಕ್ತಿ ಗೆಲ್ತಾನೆ ಎಂದರೆ ಸೋಲಿಸೋಕೆ ಕಾಯ್ತಾ ಇರ್ತಾರೆ. ನನ್ನ ರಾಜಕೀಯ ಕಂಡು ಹೊಟ್ಟೆ ಉರಿ ಪಡುತ್ತಿದ್ದಾರೆ. ಅಂತವರು ನಮ್ಮನ್ನು ದ್ವೇಷಿಸಬಹುದು. ನಮ್ಮ ಪಕ್ಷದಲ್ಲಿ ಅಂತವರು ಯಾರೂ ಇಲ್ಲ. ನಮ್ಮ ಪಕ್ಷದಲ್ಲಿ ಎಲ್ಲರೂ ನನ್ನನ್ನು ಪ್ರೀತಿಸುತ್ತಾರೆ. ಬೇರೆ ಪಕ್ಷದಲ್ಲಿ ಹೊಟ್ಟೆ ಉರಿಯವರು ಇದ್ದಾರೆ. ನಮ್ಮ ಶಾಸಕರು ಎಲ್ಲರೂ ನನ್ನ ಪರವೇ ಇದ್ದಾರೆ. ಮುಂದೆ ಸಿಎಂ ಯಾರು ಎನ್ನುವುದನ್ನು ಹೈಕಮಾಂಡ್ ನಿರ್ಧರಿಸುತ್ತದೆ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.

ಬಿಜೆಪಿಯವರು ದೇಶವನ್ನು ಅಧೋಗತಿಗೆ ತಂದಿದ್ದಾರೆ. ಮಹಿಳೆ, ಯುವಕರ ಸಮಸ್ಯೆ ಸಾಕಷ್ಟಿವೆ. ಸಮಸ್ಯೆಗಳು ಬೃಹದಾಕಾರವಾಗಿ ಬೆಳೆಯುತ್ತಿವೆ. ಮತದಾರ ಪ್ರಭುಗಳು ಕಾಂಗ್ರೆಸ್ ಬೆಂಬಲಿಸುತ್ತಾರೆ. ಮುಂದೆ ಜನ ಕಾಂಗ್ರೆಸ್‌ಗೆ ಆಶೀರ್ವಾದ ಮಾಡುತ್ತಾರೆ ಎಂದರು. ಇದನ್ನೂ ಓದಿ: ನಾಳೆ ಸಿಎಂ ಬೊಮ್ಮಾಯಿ ದೆಹಲಿ ಪ್ರವಾಸ – ಕೇಂದ್ರ ಸಚಿವರ ಭೇಟಿ ಸಾಧ್ಯತೆ

siddaramaiah

ಬಿಜೆಪಿಯವರ ಕೋಮುವಾದ, ರಾಜಕೀಯ ದ್ವೇಷ ಸೇಡಿನ ರಾಜಕೀಯಕ್ಕೆ ಜನ ಬೇಸತ್ತಿದ್ದಾರೆ. ಅದಕ್ಕೆ ದ್ವೇಷ ರಾಜಕಾರಣವನ್ನು ಜನ ಒಪ್ಪುವುದಿಲ್ಲ. ಹಿಂದೆಯೂ ಒಪ್ಪಿಲ್ಲ, ಮುಂದೆಯೂ ಜನ ಒಪ್ಪಲ್ಲ. ಸಂವಿಧಾನಕ್ಕೆ ಆಪತ್ತು ಬಂದಾಗ ಜನ ರಕ್ಷಣೆಗೆ ನಿಲ್ಲುತ್ತಾರೆ. ನಾವೂ ಏನೂ ಇಲ್ಲದ ಕಡೆ ಗೆದ್ದಿದ್ದೇವೆ. ಜೀರೋ ಇದ್ದವರು ನಾವು. ಈಗ 2 ಕಡೆ ಗೆದ್ದಿದ್ದೇವೆ ಎಂದು ತಿಳಿಸಿದರು.

ನಾನು ಯಾವ ಕ್ಷೇತ್ರದಿಂದ ಸ್ಪರ್ಧೆ ಮಾಡಬೇಕು ಎಂದು ತೀರ್ಮಾನ ಮಾಡಿಲ್ಲ. ಸ್ಪರ್ಧೆ ಮಾಡಬೇಕಾದರೆ ನಿಮಗೆ ಹೇಳುತ್ತೇನೆ. ಹೇಳಿಯೇ ಸ್ಪರ್ಧೆ ಮಾಡುತ್ತೇನೆ. ವರುಣಾ, ಚಾಮರಾಜಪೇಟೆ, ಬಾದಾಮಿ, ಹೆಬ್ಬಾಳ ಸೇರಿದಂತೆ ಎಲ್ಲಾ ಕಡೆ ಕರೆಯುತ್ತಿದ್ದಾರೆ. ಕಾಲು ಎಳೆಯುವವರು ಇದ್ದೇ ಇರುತ್ತಾರೆ. ನನ್ನ ರಾಜಕೀಯ ಬೆಳವಣಿಗೆ ಸಹಿಸದ ಜನ ಸೋಲಿಸುವ ಪ್ರಯತ್ನ ಮಾಡುತ್ತಾರೆ ಎಂದರು. ಇದನ್ನೂ ಓದಿ: ಪ್ರಧಾನಿ ಮೋದಿ ವಿರುದ್ಧವೂ ED ತನಿಖೆ ಮಾಡಿತ್ತು, ಆಗ ಹೋರಾಟ ಮಾಡಿರಲಿಲ್ಲ: ಕಟೀಲ್

Siddaramaiah

ನಮ್ಮ ಪಕ್ಷದಲ್ಲಿ ನನ್ನನ್ನು ಎಲ್ಲರೂ ಪ್ರೀತಿಸುತ್ತಾರೆ. ಪಕ್ಷದಲ್ಲಿ ಏಕಾಂಗಿಯಾಗಿದ್ದೇನೆ ಎಂದು ಮೈಸೂರಿನಲ್ಲಿ ಹೇಳಿದ ವಿಚಾರ ಆ ರೀತಿಯಲ್ಲ. ನಾನು ಒಬ್ಬ ಮಾತನಾಡಿದರೆ ಬಿಜೆಪಿಯವರು 20 ಜನ ತಿರುಗಿ ಬೀಳುತ್ತಾರೆ. ನಮ್ಮವರು ಬಿಜೆಪಿಯವರ ರೀತಿ ಮಾತನಾಡುವುದಿಲ್ಲ. ಬಿಜೆಪಿಯವರು ಬರೀ ಸುಳ್ಳು ಹೇಳುತ್ತಾರಲ್ಲಾ, ನಮ್ಮ ಪಕ್ಷದವರಿಗೆ ಅವರ ರೀತಿ ಸುಳ್ಳು ಹೇಳಲು ಬರಲ್ಲ ಎಂದು ತಿಳಿಸಿದರು.

ಇದೇ ವೇಳೆ ಆರೋಗ್ಯ ಸಚಿವ ಸುಧಾಕರ್‌ಗೆ ತಿರುಗೇಟು ನೀಡಿದ ಸಿದ್ದರಾಮಯ್ಯ, ನಮ್ಮ ಮನೆ ಹತ್ರ ಹಳೆ ಚಡ್ಡಿ ಹೊತ್ಕೊಂಡು ಬಂದಿದ್ದರು. ಅದಕ್ಕೆ ಅವರು ಏನನ್ನುತ್ತಾರೆ? ಚಲವಾದಿ ಮೇಲೆ ಏನಾದರೂ ಕೇಸ್ ಹಾಕಿದ್ದಾರಾ? ಮೈಸೂರಿನಲ್ಲಿ ಸಾಮೂಹಿಕ ಯೋಗಾಸನವಿದೆ. ಅಲ್ಲಿ ಕೋವಿಡ್ ಹೆಚ್ಚಾಗೋದಿಲ್ವಾ? ಮೋದಿ ರ‍್ಯಾಲಿ ಮಾಡ್ತಾರಲ್ಲಾ, ಅಲ್ಲಿ ಕೋವಿಡ್ ಹೆಚ್ಚಾಗಲ್ವಾ? ಇದರ ಬಗ್ಗೆ ಸುಧಾಕರ್ ಅವರನ್ನೇ ಕೇಳಬೇಕು ಎಂದು ವಾಗ್ದಾಳಿ ನಡೆಸಿದರು.

Live Tv

Share This Article
Leave a Comment

Leave a Reply

Your email address will not be published. Required fields are marked *