2 ಎಕರೆ 3 ಗುಂಟೆ ಇದ್ದ ಎಚ್‍ಡಿಡಿ ಕುಟುಂಬದ ಆಸ್ತಿ ಸಾವಿರಾರು ಎಕ್ರೆ ಆಗಿದ್ದು ಹೇಗೆ: ಬಿಜೆಪಿ ಪ್ರಶ್ನೆ

Public TV
3 Min Read
BJP Press meet 1 1

ಬೆಂಗಳೂರು: ಮಾಜಿ ಪ್ರಧಾನಿ ಎಚ್‍ಡಿ ದೇವೇಗೌಡ ಅವರ ಕುಟುಂಬದ ಹೊಂದಿದ್ದ 2 ಎಕರೆ 3 ಗುಂಟೆ ಜಮೀನು ಇಂದು ಸಾವಿರಾರು ಎಕರೆ ಆಗಿದ್ದು ಹೇಗೆ ಎಂದು ಬಹಿರಂಗ ಪಡಿಸಬೇಕು ಎಂದು ಬಿಜೆಪಿ ಪರಿಷತ್ ಸದಸ್ಯ ರವಿಕುಮಾರ್ ಪ್ರಶ್ನಿಸಿದ್ದಾರೆ.

ಸಿಎಂ ಯಡಿಯೂರಪ್ಪ ವಿರುದ್ಧ ಇಂದು ಹೇಳಿಕೆ ನೀಡುತ್ತಿದ್ದಂತೆ ಬಿಜೆಪಿ ನಾಯಕರೂ ಕೂಡ ಮಾಜಿ ಪ್ರಧಾನಿ ದೇವೇಗೌಡರ ಕುಟುಂಬದ ಹಳೆಯ ಕೇಸ್‍ಗಳನ್ನು ಮತ್ತೊಮ್ಮೆ ಕೆದಕಿದ್ದಾರೆ. ದೇವೇಗೌಡರ ಕುಟುಂಬ ಲೂಟಿಯಲ್ಲಿ ತೊಡಗಿದೆ ಎಂದು ಆರೋಪಿಸಿದರು. ಮಲ್ಲೇಶ್ವರದಲ್ಲಿರುವ ಬಿಜೆಪಿ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿದ ಕೇಸರಿ ನಾಯಕರು, ಸಚಿವ ರೇವಣ್ಣ ವಿರುದ್ಧದ ಭೂಕಬಳಿಕೆ ಆರೋಪ, ಹೆಚ್‍ಡಿಕೆ ವಿರುದ್ಧದ ಜಂತಕಲ್ ಮೈನಿಂಗ್, ಥಣಿಸಂದ್ರ ಡಿನೊಟೀಫಿಕೇಷನ್ ಪ್ರಕರಣಗಳನ್ನ ಪ್ರಸ್ತಾಪಿಸಿದರು. ನಿಮಗೂ ಕಾನೂನು ಕುಣಿಕೆ ಸುತ್ತಿಕೊಳ್ಳುತ್ತದೆ ಎಂದು ಎಚ್ಚರಿಕೆ ನೀಡಿದರು. ದೇವೇಗೌಡರ ಮೂಲ ಆಸ್ತಿ ಕೇವಲ 2 ಎಕರೆ. ಈಗ ಎಷ್ಟು ಸಾವಿರ ಎಕರೆ ಇದೆ. ಇದನ್ನೆಲ್ಲಾ ಹೇಗೆ ಮಾಡಿದ್ದೀರಿ ಎಂದು ಜನಕ್ಕೆ ಹೇಳಿ ಎಂದು ಬಿಜೆಪಿಯ ರವಿಕುಮಾರ್ ಆಗ್ರಹಿಸಿದರು.

vlcsnap 2018 09 20 19h16m38s57

ರವಿಕುಮಾರ್ ಮಾತನಾಡಿ, ಜೆಡಿಎಸ್ ಪಕ್ಷವನ್ನ ಹೇಗೆ ಕಟ್ಟಿದ್ದಾರೆ ಎಂಬುವುದನ್ನು ಪ್ರಜ್ವಲ್ ರೇವಣ್ಣ ಅವರೇ ಈ ಹಿಂದೆ ಬಹಿರಂಗ ಪಡಿಸಿದ್ದಾರೆ. 2 ಎಕರೆ 3 ಗುಂಟೆ ಜಮೀನು ಹೊಂದಿದ್ದ ಎಚ್‍ಡಿಡಿ ಕುಟುಂಬ ಇಂದು ಸಾವಿರಾರು ಎಕರೆ ಆಸ್ತಿ ಬಂದಿದ್ದು ಹೇಗೆ ಎಂಬುದನ್ನು ರೈತರಿಗೆ ಸಿಎಂ ಕುಮಾರಸ್ವಾಮಿ ಅವರು ತಿಳಿಸುವ ಅಗತ್ಯವಿದೆ. ಪ್ರಜ್ವಲ್ ರೇವಣ್ಣ ಅವರೇ ಹೇಳಿದಂತೆ ಜೆಡಿಎಸ್ ಸೂಟ್ ಕೇಸ್ ಪಾರ್ಟಿ ಎಂದು ಆರೋಪಿಸಿದರು. ಇದನ್ನು ಓದಿ: ನಾಡಿನ ಜನತೆ ಬಿಜೆಪಿ ವಿರುದ್ಧ ದಂಗೆ ಏಳಬೇಕು: ಸಿಎಂ ಎಚ್‍ಡಿಕೆ

ಎಚ್‍ಡಿಕೆ ವಿರುದ್ಧ ಆರೋಪಗಳು ಸುರಿಮಳೆಗೈದ ಪುಟ್ಟಸ್ವಾಮಿ, ರಾಮನಗರ ಜಿಲ್ಲೆಯ ಕೇತಗಾನಹಳ್ಳಿಯಲ್ಲಿ ಕಾನೂನು ಉಲ್ಲಂಘಿಸಿ ಸಿಎಂ ಕುಮಾರಸ್ವಾಮಿ ಅವರು ಸರ್ಕಾರಿ ಜಮೀನು ಪಡೆದಿದ್ದಾರೆ. ಜಮೀನು ಪಡೆಯಲು ಕುಮಾರಸ್ವಾಮಿ ಅವರು ಅವರದ್ದೇ ಆದ ಕಾನೂನು ಸೃಷ್ಟಿ ಮಾಡಿಕೊಂಡಿದ್ದಾರೆ. ಈ ಹಿಂದಿನ ಅಧಿಕಾರಿಗಳನು ಬೆದರಿಸಿ 146 ಎಕರೆ ಗಣಿಗಾರಿಕೆ ಅನುಮತಿ ಪಡೆದ ಪ್ರಕರಣ ಇನ್ನು ನ್ಯಾಯಾಲಯದಲ್ಲಿದೆ. ಜಂತಕಲ್ ಮೈನಿಂಗ್ ಕಂಪನಿಗೆ ಗಣಿಕಾರಿಕೆ ನವೀಕರಣ ವಿಚಾರವಾಗಿ ನಿಮ್ಮ ಮೇಲೆ ಕೇಸ್ ಇದೆ. ಈ ಪ್ರಕರಣದಲ್ಲಿ ಎಚ್‍ಡಿಕೆ ಜಾಮೀನು ಪಡೆದಿದ್ದಾರೆ ಎಂದು ಎಚ್‍ಡಿಡಿ ಕುಟುಂಬ ಮೇಲಿನ ಪ್ರಕರಣಗಳ ಬಗ್ಗೆ ವಿವರಿಸಿದರು.

hdd hdk

ಜಮೀನು ಇಲ್ಲ ಎಂದು ಸುಳ್ಳು ಹೇಳಿ ಮಾಜಿ ಪ್ರಧಾನಿ ಎಚ್‍ಡಿಡಿ ಹಾಗೂ ಪತ್ನಿ ಅವರ ಹೆಸರಿನಲ್ಲಿ ಸರ್ಕಾರಿ ಆಸ್ತಿ ಪಡೆದಿದ್ದಾರೆ. ಬಳಿಕ ಈ ಜಮೀನು ರೇವಣ್ಣ ಕುಟುಂಬಕ್ಕೆ ವರ್ಗಾವಣೆ ಆಗಿದೆ. ಆದರೆ ಬಿಎಸ್‍ವೈ ಅವರ ವಿರುದ್ಧ ಎಲ್ಲ ಪ್ರಕರಣಗಳು ಖುಲಾಸೆ ಆಗಿದೆ. ಅದ್ದರಿಂದ ಅವರನ್ನು ಪ್ರಶ್ನಿಸುವ ಮುನ್ನ ನಿಮ್ಮ ಮೇಲಿನ ಪ್ರಕರಣ ಬಗ್ಗೆ ಯೋಚಿಸಿ, ಕಾನೂನು ಕ್ರಮ ಎದುರಿಸಿ. ಕರ್ನಾಟಕ ರಾಜ್ಯದಲ್ಲಿ ಸರ್ಕಾರಿ ಜಾಗಗಳನ್ನು ಕಬಳಿಸುವ ವಿಚಾರದಲ್ಲಿ ದೇವೇಗೌಡ ಅವರ ಮಕ್ಕಳಿಗೆ ಪಿಎಚ್‍ಡಿ ಪದವಿ ನೀಡಬೇಕು ಎಂದು ವ್ಯಂಗ್ಯವಾಡಿದರು. ಇದನ್ನು ಓದಿ: ನನ್ನ ಇತಿಮಿತಿ ನನಗೆ ಗೊತ್ತಿದೆ, ಹದ್ದು ಮೀರಿ ಮಾತಾಡ್ತಿರೋದು ನೀವು: ಸಿಎಂ ವಿರುದ್ಧ ಬಿಎಸ್‍ವೈ ಗರಂ

ಇದೇ ವೇಳೆ ಮಾತನಾಡಿದ ಮಾಜಿ ಉಪಮುಖ್ಯಮಂತ್ರಿ ಆರ್ ಅಶೋಕ್, ರಾಜ್ಯದ ಜವಾಬ್ದಾರಿಯುತ ಮುಖ್ಯಮಂತ್ರಿಯಾಗಿ ಕುಮಾರಸ್ವಾಮಿ ಅವರು ಜನರಿಗೆ ದಂಗೆ ಹೇಳಲು ಕರೆ ನೀಡಿ ಕಾನೂನು ಬಾಹಿರ ಹೇಳಿಕೆ ನೀಡಿದ್ದಾರೆ. ಈ ವಿಚಾರವಾಗಿ ರಾಜ್ಯಪಾಲರು ಮಧ್ಯಪ್ರವೇಶ ಮಾಡಬೇಕು. ಅಲ್ಲದೇ ಮುಖ್ಯಮಂತ್ರಿಯಾಗುವ ವೇಳೆ ರಾಜ್ಯದ ಕಾನೂನು ಕಾಪಾಡುತ್ತೇನೆ ಎಂದು ಹೇಳಿ ಇವತ್ತು ರಾಜ್ಯದಲ್ಲಿ ಕಾನೂನು ಹದಗೆಡಿಸುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದರು. ಇದನ್ನು ಓದಿ: ದಂಗೆ ಅಂದ್ರೆ ಜನ ಪ್ರತಿಭಟನೆ ಮಾಡ್ತಾರೆ ಅಂತ ಅರ್ಥ: ಎಚ್‍ಡಿಕೆ ಸ್ಪಷ್ಟನೆ

BJP Press meet 1

ಕಾಂಗ್ರೆಸ್ ಪಕ್ಷದ ಕೆಲ ಗುಂಡಾಗಳು ಇಂದು ಯಡಿಯೂರಪ್ಪ ಅವರ ಮನೆಗೆ ನುಗ್ಗಿದ್ದಾರೆ. ನಮ್ಮ ಶಾಸಕರು ಇರದೇ ಹೋಗಿದ್ದರೆ ದೊಡ್ಡ ಅನಾಹುತ ಆಗುತ್ತಿತ್ತು. ಆದರೆ ಪೋಲೀಸರು ಇದನ್ನು ನೋಡಿ ಸುಮ್ಮನೆ ಕೂತಿದ್ದಾರೆ. ಇದು ಸಮ್ಮಿಶ್ರ ಸರ್ಕಾರದ ಪ್ರಾಯೋಜಿತ ಪ್ರತಿಭಟನೆ. ಪೋಲೀಸರ ಸ್ವಯಂ ಪ್ರೇರಿತರಾಗಿ ಪ್ರತಿಭಟನಾಕಾರರ ವಿರುದ್ದ ಕೇಸ್ ದಾಖಲು ಮಾಡಬೇಕು. ಅಲ್ಲದೇ ಸಿಎಂ ಅವರ ದಂಗೆ ಹೇಳಿಕೆ ಐಪಿಸಿ ಸೆಕ್ಷನ್ 124 (ಎ) ಅಡಿಯಲ್ಲಿ ಕಾನೂನು ಬಾಹಿರ ಆಗಿದ್ದು, ತಕ್ಷಣ ಡಿಜಿ ಅವರು ಕುಮಾರಸ್ವಾಮಿ ವಿರುದ್ಧ ಪ್ರಕರಣ ದಾಖಲು ಮಾಡಬೇಕು ಎಂದು ಬಿಜೆಪಿ ಮುಖಂಡ ಪುಟ್ಟ ಸ್ವಾಮಿ ಆಗ್ರಹಿಸಿದರು.  ಇದನ್ನು ಓದಿ: ಮಾಜಿ ಸಿಎಂ ಬಿಎಸ್‍ವೈಗೆ ಮುಖ್ಯಮಂತ್ರಿ ಎಚ್‍ಡಿಕೆ ಎಚ್ಚರಿಕೆ!

Share This Article