Sunday, 19th May 2019

ನನ್ನ ಇತಿಮಿತಿ ನನಗೆ ಗೊತ್ತಿದೆ, ಹದ್ದು ಮೀರಿ ಮಾತಾಡ್ತಿರೋದು ನೀವು: ಸಿಎಂ ವಿರುದ್ಧ ಬಿಎಸ್‍ವೈ ಗರಂ

ಬೆಂಗಳೂರು: ನನ್ನ ಇತಿಮಿತಿ ನನಗೆ ಗೊತ್ತಿದೆ, ಹದ್ದು ಮೀರಿ ಮಾತನಾಡುತ್ತಿರುವುದು ನೀವು ಎಂದು ಮುಖ್ಯಮಂತ್ರಿ ಕುಮಾರಸ್ವಾಮಿಯವರ ಹೇಳಿಕೆಗೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ತಿರುಗೇಟು ನೀಡಿದ್ದಾರೆ.

ಸಿಎಂ ಕುಮಾರಸ್ವಾಮಿ ಹೇಳಿಕೆಗೆ ತಿರುಗೇಟು ನೀಡಿದ ಅವರು, ನನ್ನ ಇತಿಮಿತಿ ಏನೆಂಬುದು ನನಗೆ ಗೊತ್ತಿದೆ. ಹದ್ದು ಮೀರಿ ಮಾತನಾಡುತ್ತಿರುವುದು ನೀವುಗಳು. ಇದರ ಬಗ್ಗೆ ಇಂದು ಸಂಜೆ 4 ಗಂಟೆಗೆ ತುರ್ತು ಪತ್ರಿಕಾಗೋಷ್ಠಿ ಕರೆದು ಉತ್ತರಿಸುತ್ತೇನೆ. ಮಾಜಿ ಸಚಿವ ಮಂಜು ಆರೋಪಕ್ಕೆ ಇದುವರೆಗೂ ನೀವು ಉತ್ತರ ಕೊಟ್ಟಿಲ್ಲ. ಸಿಎಂ ಕುಮಾರಸ್ವಾಮಿ ಕೇವಲ ಸೇಡಿನ ರಾಜಕಾರಣ ಮಾಡುತ್ತಿದ್ದಾರೆ ಎಂದು ಗುಡುಗಿದರು.

ಬಿಜೆಪಿ ಮಾಡಿದ ಯಾವುದೇ ಸಭೆಗಳಲ್ಲಿ ಸಚಿವ ಡಿ.ಕೆ.ಶಿವಕುಮಾರ್ ವಿರುದ್ಧ ನಾನು ಮಾತನಾಡಿಲ್ಲ. ಅಲ್ಲದೇ ಜಾರೀ ನಿರ್ದೇಶನಾಲಯ ಅವರ ಮೇಲೆ ಹಾಕಿರುವ ಕೇಸುಗಳಲ್ಲಿ ನಮ್ಮ ಪಾತ್ರ ಇಲ್ಲ. ನನ್ನ ವಿರುದ್ಧ ಯಾವುದೇ ಹಗರಣಗಳು ಇಲ್ಲ. ನಿಮ್ಮ ಹಗರಣಗಳನ್ನು ಮುಚ್ಚಿ ಹಾಕಲು ನನ್ನ ವಿರುದ್ಧ ಈ ರೀತಿಯ ಹೇಳಿಕೆ ನೀಡುತ್ತಿದ್ದೀರಿ ಎಂದು ಕಿಡಿಕಾರಿದರು. ಇದನ್ನೂ ಓದಿ: ಮಾಜಿ ಸಿಎಂ ಬಿಎಸ್‍ವೈಗೆ ಮುಖ್ಯಮಂತ್ರಿ ಎಚ್‍ಡಿಕೆ ಎಚ್ಚರಿಕೆ!

ಶಿವರಾಮ ಕಾರಂತ ಬಡಾವಣೆ ಬಗ್ಗೆ ತನಿಖೆ ಮಾಡಿ, ಸತ್ಯ ಜನತೆಗೆ ಗೊತ್ತಾಗಲಿ. ಅದನ್ನು ಬಿಟ್ಟು ಧಮಕಿ ಹಾಕಿದರೆ ಏನು ನಡೆಯಲ್ಲ. ದೇವೇಗೌಡರು ಹಾಗೂ ಕುಮಾರಸ್ವಾಮಿ ಕುಟುಂಬ ಮೈಸೂರಿನಲ್ಲಿ ಎಷ್ಟು ಸೈಟ್ ಮಾಡಿಕೊಂಡಿದ್ದೀರಿ ಎಂಬುದು ಚೆನ್ನಾಗಿ ಗೊತ್ತಿದೆ. ಎಲ್ಲವನ್ನೂ ದಾಖಲೆ ಸಮೇತ ಹೊರಕ್ಕೆ ಇಡುತ್ತೇನೆ. ಇಲ್ಲಿ ನಿಮ್ಮ ಅಧಿಕಾರವಿರಬಹುದು ಆದರೆ ಕೇಂದ್ರದಲ್ಲಿ ನಮ್ಮ ಅಧಿಕಾರ ಇದೆ. ಯಾವಾಗ ಏನು ಮಾಡುಬೇಕು ಎಂಬುದು ನಿಮಗಿಂತ ಚೆನ್ನಾಗಿ ನಮಗೆ ಗೊತ್ತು ಎಂದು ಸಿಎಂ ಕುಮಾರಸ್ವಾಮಿ ಹೇಳಿಕೆಗೆ ತಿರುಗೇಟು ನೀಡಿದರು.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

Leave a Reply

Your email address will not be published. Required fields are marked *