ಬೆಂಗಳೂರು: ‘ಕೋವಿಡ್ ಸಮಯದಲ್ಲಿ ಬೆಡ್, ಚಿಕಿತ್ಸೆ, ಔಷಧಿ, ಆಕ್ಸಿಜನ್, ಲಸಿಕೆ ನೀಡದೆ ಜನ ಸಾಯುವಂತೆ ಮಾಡಿ ಅವರಿಗೆ ಬೂದಿ ಕೊಟ್ಟಿರುವ ಬಿಜೆಪಿ ಸರ್ಕಾರಕ್ಕೆ ಜನ ಆಶೀರ್ವಾದ ಮಾಡಬೇಕಾ?’ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರು ಛೇಡಿಸಿದ್ದಾರೆ.
Advertisement
ಬೆಂಗಳೂರು ಹೊರವಲಯದ ದೊಡ್ಡಬಳ್ಳಾಪುರದಲ್ಲಿ ದಿನಸಿ ಕಿಟ್ ವಿತರಣೆ ಕಾರ್ಯಕ್ರಮಕ್ಕೆ ಗುರುವಾರ ಚಾಲನೆ ನೀಡಿದ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಡಿ.ಕೆ. ಶಿವಕುಮಾರ್ ಅವರು, ‘ರಾಜ್ಯದ ಉದ್ದಗಲಕ್ಕೂ ಕೋವಿಡ್ ವಾರಿಯರ್ಸ್ ಗಳಿಗೆ ಗೌರವ ಸೂಚಿಸುವುದು ಕಾಂಗ್ರೆಸ್ ಕಾರ್ಯಕ್ರಮ. ಸೋಂಕಿನಿಂದ ಸತ್ತವರ ಕುಟುಂಬಕ್ಕೆ ಪರಿಹಾರ ಸಿಗುವಂತೆ ಮಾಡಬೇಕು. ಅದಕ್ಕೆ ಪೂರಕವಾಗಿ ಡೆತ್ ಆಡಿಟ್ ಮಾಡಿಸಿ, ಮಾಹಿತಿ ಸಂಗ್ರಹಿಸಲು ತಿಳಿಸಿದ್ದೇವೆ ಎಂದರು.
Advertisement
Advertisement
ಯಾವ ರೈತರಿಗೂ ಬೆಂಬಲ ಬೆಲೆ ಸಿಕ್ಕಿಲ್ಲ. ರೈತರ ವಿಚಾರದಲ್ಲಿ ಕೇವಲ ಮಾತನಾಡುತ್ತಿದ್ದಾರೆಯೇ ಹೊರತು ಯಾರಿಗೂ ನೆರವಾಗಿಲ್ಲ. ಸರ್ಕಾರ ಒಂದೆರಡು ದಿನಗಳಲ್ಲಿ ಸದನ ಕರೆಯಬಹುದು, ಆಗ ಸರ್ಕಾರ ಎಷ್ಟು ಜನರಿಗೆ ನೆರವು ನೀಡಿದೆ ಎಂದು ಲೆಕ್ಕ ನೀಡಲಿ. ಬಿಜೆಪಿಯವರು ತಮ್ಮ ಸಭೆಗಳಿಗೆ ಮಾತ್ರ ಯಾಕೆ ವಿನಾಯಿತಿ ಕೊಟ್ಟುಕೊಂಡಿದ್ದಾರೆ. ಬೇರೆಯವರಿಗೆ ಯಾಕೆ ಅವಕಾಶ ನೀಡುತ್ತಿಲ್ಲ. ರಾಜಕೀಯ ಸಭೆ ಮಾಡಬಾರದು ಎಂದು ಸರ್ಕಾರ ಹೇಳುತ್ತದೆ. ಮತ್ತೊಂದು ಕಡೆ ಕೇಂದ್ರ ಸಚಿವರು ಜನಾಶೀರ್ವಾದ ಸಭೆ ಮಾಡುತ್ತಿದ್ದಾರೆ. ಅವರು ಯಾವ ಸಭೆಯಾದರೂ ಮಾಡಿಕೊಳ್ಳಲಿ. ಸರ್ಕಾರ ಅಧಿಕಾರ ದುರುಪಯೋಗ ಮಾಡಿಕೊಂಡು ತಾರತಮ್ಯ ಮಾಡುತ್ತಿದೆ. ಕೋವಿಡ್ ನಿಯಮಾವಳಿ ಏನು ಬೇಕಾದರೂ ಮಾಡಲಿ. ಆದರೆ ಅದು ಎಲ್ಲರಿಗೂ ಅನ್ವಯವಾಗಬೇಕು ಎಂದು ಕಿಡಿಕಾರಿದರು. ಇದನ್ನೂ ಓದಿ: ನನ್ನ ಆತ್ಮಸ್ಥೈರ್ಯ ಕುಗ್ಗಿಸಲು 10 ಜನ್ಮ ಎತ್ತಿ ಬಂದ್ರೂ ಆಗಲ್ಲ: ಸುಮಲತಾ
Advertisement
ಸರ್ಕಾರ ಬೆಳಗಾವಿಯಲ್ಲಿ ಸದನ ಮಾಡದೆ ಉತ್ತರ ಕರ್ನಾಟಕವನ್ನು ನಿರ್ಲಕ್ಷಿಸಿದೆ. ಅಲ್ಲಿನ ನೆರೆ ಸಂತ್ರಸ್ತರಿಗೆ ಕಳೆದ ವರ್ಷದ ಪರಿಹಾರವೇ ಸಿಕ್ಕಿಲ್ಲ. ಆ ಭಾಗಕ್ಕೆ ಸಂಬಂಧಿಸಿದಂತೆ ಹಲವು ವಿಚಾರ ಚರ್ಚೆ ಆಗಬೇಕಿದೆ. ಆ ಭಾಗದ ಜನರನ್ನು ಎದುರಿಸಲು ಸರ್ಕಾರಕ್ಕೆ ಸಾಧ್ಯವಿಲ್ಲವೇ? ನಮ್ಮ ಶಾಸಕರು ಆಶಾ ಕಾರ್ಯಕರ್ತರು, ಅಂಗನವಾಡಿ ಕಾರ್ಯಕರ್ತರು, ಆಸ್ಪತ್ರೆ ಕಾರ್ಯಕರ್ತರನ್ನು ಗುರುತಿಸಲು ಕಳೆದೊಂದು ತಿಂಗಳಿಂದ ಸುಮಾರು 40 ಸಾವಿರ ಕುಟುಂಬಗಳಿಗೆ ಆಹಾರ ಕಿಟ್ ವಿತರಿಸಿದ್ದಾರೆ. ಇವರು ಶಾಸಕರಾಗಿರುವುದು ಬಿಟ್ಟರೆ, ಬೇರಾವುದೇ ಅಧಿಕಾರ ಇಲ್ಲ. ಆದರೂ ತಾಲೂಕಿನ ಜನರ ಜೀವನಕ್ಕೆ ನೆರವಾಗಿ ಗೌರವ ಸಲ್ಲಿಸುತ್ತಿದ್ದಾರೆ. ಹೀಗಾಗಿ ಪಕ್ಷದ ಪರವಾಗಿ ಅವರಿಗೆ ಅಭಿನಂದನೆಗಳು. ನೀವು ನಿಮ್ಮ ಜೀವವನ್ನು ಪಣಕ್ಕಿಟ್ಟು ನಿಮ್ಮ ಕರ್ತವ್ಯ ಮಾಡಿದ್ದೀರಿ. ಮನೆ, ಮನೆಗೆ ಹೋಗಿ ಮಾಹಿತಿ ಸಂಗ್ರಹಿಸಿ ಜನರ ಜೀವ ಉಳಿಸಲು ಸಾಕಷ್ಟು ತ್ಯಾಗ ಮಾಡಿದ್ದೀರಿ. ನಿಮಗೆ ಸಾಷ್ಟಾಂಗ ನಮಸ್ಕಾರಗಳು ಎಂದರು.
ಕಳೆದ ವರ್ಷ ನಮ್ಮ ಆಶಾ ಕಾರ್ಯಕರ್ತೆಯರು ತಮ್ಮ ಬೇಡಿಕೆ ಮುಂದಿಟ್ಟು ಪ್ರತಿಭಟನೆ ಮಾಡಿದರು. ನಂತರ ನಾನು ಮತ್ತು ಸಿದ್ದರಾಮಯ್ಯ ಅವರು ಇವರಿಗೆ, ವೃತ್ತಿ ಕಾಪಾಡಿಕೊಂಡು ಬಂದವರಿಗೆ, ಬೀದಿ ವ್ಯಾಪಾರಿಗಳು, ಚಾಲಕರಿಗೆ ಹಣ ಕೊಡಿ, ರೈತರಿಗೆ ಪರಿಹಾರ ನೀಡಿ, ಕಲಾವಿದರಿಗೆ ನೆರವು ನೀಡಿ ಎಂದು ಹೋರಾಟ ಮಾಡಿದೆವು. ಸರ್ಕಾರ ಒಂದು ತಿಂಗಳು 5 ಸಾವಿರ ನೀಡುವುದಾಗಿ ಹೇಳಿತ್ತು. ರೈತನಿಗೆ ಹೆಕ್ಟೇರ್ ಗೆ 10 ಸಾವಿರ ಪರಿಹಾರ ಘೋಷಿಸಿದರು. ನಾನು ರೈತರ ತೋಟಕ್ಕೆ ಹೋದಾಗ ದ್ರಾಕ್ಷಿ, ಕ್ಯಾರೆಟ್, ತರಕಾರಿ ಬೆಳೆದವರು ಕೆಜಿಗೆ 3-4 ರೂಪಾಯಿಯಂತೆ ತೆಗೆದುಕೊಂಡು ಹೋಗಿ ಎಂದಿದ್ದರು. ಇದನ್ನೂ ಓದಿ: ಸರ್ಕಾರದ ಜಸ್ಟ್ ಪಾಸ್ ಆಫರ್ ತಿರಸ್ಕರಿಸಿದ ವಿದ್ಯಾರ್ಥಿನಿ
ಚಾಲಕರು 25 ಲಕ್ಷ ಮಂದಿ ಇದ್ದಾರೆ. ಆದರೆ ಸರ್ಕಾರ 2.5 ಲಕ್ಷ ಜನರಿಗೆ ಮಾತ್ರ ಪರಿಹಾರ ಕೊಟ್ಟಿದೆ. ಮೋದಿ ಅವರು ದೇಶದ ಪ್ರಧಾನಿಗಳು, ನಾವು ಅವರನ್ನು ಗೌರವಿಸುತ್ತೇವೆ. ಅವರು ಚಪ್ಪಾಳೆ ಹೊಡಿ, ಜಾಗಟೆ ಬಾರಿಸು ಎಂದಾಗ ಅದನ್ನು ಮಾಡಿದ್ದೇವೆ. ದೀಪ ಹಚ್ಚಿ ಎಂದಾಗ ಹಚ್ಚಿದೆವು. ಮಹಾಭಾರತ ಯುದ್ಧ 18 ದಿನದಲ್ಲಿ ಮುಗಿದಿತ್ತು, ನಾನು ಕೋವಿಡ್ ವಿರುದ್ಧದ ಹೋರಾಟವನ್ನು 21 ದಿನಗಳಲ್ಲಿ ಮುಗಿಸುತ್ತೇನೆ ಎಂದಿದ್ದರು. ಆದರೆ ಇದುವರೆಗೂ ಆಗಿಲ್ಲ. ನಂತರ ಪರಿಹಾರ ಕೇಳಿದ್ದಕ್ಕೆ 20 ಲಕ್ಷ ಕೋಟಿ ರುಪಾಯಿ ಪ್ಯಾಕೇಜ್ ಘೋಷಿಸಿದರು. ಯಾರಿಗಾದರೂ ಪರಿಹಾರ ಬಂದಿತಾ? ಇಲ್ಲ. ನನಗೆ ಬಿಜೆಪಿ ಮಂತ್ರಿಯೊಬ್ಬರು ಸಿಕ್ಕಾಗ ಬಳ್ಳಾರಿಯಲ್ಲಿ ಹೆಣವನ್ನು ಬಿಸಾಕಿದ್ದು ಸರೀನಾ ಎಂದು ಪ್ರಶ್ನೆ ಮಾಡಿದೆ. ನಾವು ಆಶಾ ಕಾರ್ಯಕರ್ತರ ಬೇಡಿಕೆ ಈಡೇರಿಕೆಗೆ ಆಗ್ರಹಿಸಲಿದ್ದೇವೆ. ನಾವು ಆಗ್ರಹಿಸುವ ಮುನ್ನ ಬೇಡಿಕೆ ಈಡೇರಿಸಿ ಎಂದೇ. ಅದಕ್ಕವರು ಆಶಾ ಕಾರ್ಯಕರ್ತೆಯರಿಗೆ ನಾವು ಎಷ್ಟೇ ಮಾಡಿದರು ಅವರು ನಮಗೆ ಮತ ಹಾಕುವುದಿಲ್ಲ ಎಂದು ಪಕ್ಷದ ಸಭೆಯಲ್ಲಿ ಚರ್ಚೆಯಾಗಿದೆ ಎಂದರು.
Our frontline warriors have demonstrated selfless service in these difficult times but the Govt has turned its back on their well-being.
Met and thanked Aanganwadi, ASHA and other frontline workers in Doddabelavangala village, Doddaballapura,while distributing food kits to them. pic.twitter.com/Gu8j9yyvFy
— DK Shivakumar (@DKShivakumar) August 19, 2021
ಇಂದಿರಾಗಾಂಧಿ ಅವರ ಕಾಲದಲ್ಲಿ ಅಂಗನವಾಡಿ ಕಾರ್ಯಕರ್ತೆಯರಿಗೆ, ಯುಪಿಎ ಸರ್ಕಾರದ ಅವಧಿಯಲ್ಲಿ ಆಶಾ ಕಾರ್ಯಾಕರ್ತೆಯರಿಗೆ ಸಹಾಯ ಮಾಡಲಾಗಿದೆ. ಹೀಗಾಗಿ ಅವರು ನಮಗೆ ಮತ ಹಾಕುವುದಿಲ್ಲ ಎಂದು ಆ ಸಚಿವರು ಹೇಳಿದರು. ನಾನು ಶಾಸಕ ವೆಂಕಟರಮಣಯ್ಯ ಅವರಿಗೆ ಹೇಳಿದೆ. ಸರ್ಕಾರ ಅವರಿಗೆ ಸಹಾಯ ಮಾಡುತ್ತೋ ಇಲ್ಲವೋ, ನಾವು ಅವರಿಗೆ ಸಹಾಯ ಮಾಡಬೇಕು ಎಂದೇ. ನಾವು ಕೊಡುವ 3 ಸಾವಿರ ಹಣ, ಈ ಆಹಾರ ಕಿಟ್ ನಿಂದ ನಿಮ್ಮ ಹೊಟ್ಟೆ ತುಂಬುತ್ತದೆ ಎಂದು ನಾನು ಹೇಳುವುದಿಲ್ಲ. ಸತ್ತವರನ್ನು ನಾವು ವಾಪಸ್ ಕರೆ ತರಲು ಸಾಧ್ಯವಿಲ್ಲ. ಆದರೆ ಅವರ ಮನೆಗೆ ಹೋಗಿ ಸಾಂತ್ವನ ಹೇಳಿ ಧೈರ್ಯ ತುಂಬಬೇಕು ಎಂದು ಹೇಳಿದೆ. ಇದನ್ನೂ ಓದಿ: ಬಿಜೆಪಿ ಸರ್ಕಾರ ಜನತೆಗೆ ಬೂದಿ ಆಶೀರ್ವಾದ ಮಾಡಿದೆ: ಡಿ.ಕೆ.ಶಿ
ನಮ್ಮ ದಾಖಲೆ ಪ್ರಕಾರ 1 ಲಕ್ಷಕ್ಕೂ ಹೆಚ್ಚು ಮೃತರ ಕುಟುಂಬಗಳ ಮನೆಗಳಿಗೆ ನಮ್ಮ ನಾಯಕರು ಹೋಗಿ ಧೈರ್ಯ ತುಂಬಿದ್ದಾರೆ. ಅಷ್ಟೇ ಅಲ್ಲ, ಅವರ ಮಾಹಿತಿ ಪಡೆದು ಅವರಿಗೆ ಸರ್ಕಾರದಿಂದ ಸಿಗುವ ಪರಿಹಾರ ಕೊಡಿಸಲು ಅರ್ಜಿ ಹಾಕಬೇಕು ಎಂದು ಹೇಳಿದ್ದೇನೆ. ಸರ್ಕಾರದ ಹಣ ನಮ್ಮ ಜನರ ಹಣ. ಅದು ಜನರಿಗೆ ಸಿಗುವಂತೆ ಮಾಡಬೇಕು. ಗುಜರಾತ್ ನಲ್ಲಿ ಮೃತರಿಗೆ 4 ಲಕ್ಷ ರೂಪಾಯಿ ಪರಿಹಾರ ಘೋಷಿಸಲಾಗಿದೆ. ರಾಜ್ಯದಲ್ಲಿ 3 ಲಕ್ಷ ಜನ ಸತ್ತಿದ್ದಾರೆ ಎಂದು ಸರ್ಕಾರ ಮಾಹಿತಿ ನೀಡಿತ್ತು. ಈ ಬಗ್ಗೆ ಡೆತ್ ಆಡಿಟ್ ನಡೆಯಬೇಕು ಎಂದು ಈ ಮೂಲಕ ನಮ್ಮ ನಾಯಕರಿಗೆ ನಾನು ಹೇಳುತ್ತೇನೆ ಎಂದು ತಿಳಿಸಿದರು.
ಆಕ್ಸಿಜನ್ ದುರಂತದಲ್ಲಿ ಸತ್ತವರು ಕೇವಲ 3 ಜನ ಎಂದು ಸಚಿವರು ಹೇಳಿದರು. ಆಮೇಲೆ ನಾನು ಹಾಗೂ ಸಿದ್ದರಾಮಯ್ಯ ಅವರು ಹೋಗಿ ನೋಡಿದರೆ 36 ಜನ ನರಳಿ ಸತ್ತಿದ್ದಾರೆ. ನಾವು ಅಷ್ಟೂ ಕುಟುಂಬಗಳಿಗೆ ಭೇಟಿ ನೀಡಿ ತಲಾ ಒಂದು ಲಕ್ಷ ರುಪಾಯಿ ಹಣ ಕೊಟ್ಟು ಬಂದಿದ್ದೇವೆ. ಹೀಗೆ ನಾವು ಜನಪರ ಕಾರ್ಯಕ್ರಮ ರೂಪಿಸಿದ್ದೇವೆ. ನಾವು ಕೋವಿಡ್ ಸಮಯದಲ್ಲಿ ನಿಮ್ಮ ಕ್ಷೇತ್ರ ಸೇರಿದಂತೆ ರಾಜ್ಯಾದ್ಯಂತ ಎಲ್ಲ ಕಡೆ ನೆರವಾಗಲು ಕಾರ್ಯಕ್ರಮ ಮಾಡಿದ್ದೇವೆ. ನಾನು ಇಲ್ಲಿಗೆ ಬಿಜೆಪಿ ಅವರನ್ನು ಟೀಕೆ ಮಾಡಲು ಬಂದಿಲ್ಲ. ಈ ಕಷ್ಟಕಾಲದಲ್ಲಿ ಜನಪರವಾಗಿ ನಿಂತಿದ್ದು ಕಾಂಗ್ರೆಸ್ ಎಂಬುದನ್ನಷ್ಟೇ ಹೇಳುತ್ತಿದ್ದೇನೆ. ಆಕ್ಸಿಜನ್, ಬೆಡ್, ಔಷಧಿ, ಲಸಿಕೆ ಎಲ್ಲದಕ್ಕೂ ಕ್ಯೂ ನಿಲ್ಲಿಸಿದ್ದಾರೆ. ಅವರು ಹೆಣ ಸುಡಲು ಸಾಧ್ಯವಾಗಲಿಲ್ಲ. ನಾನು ಸರ್ಕಾರಕ್ಕೆ ಉಗಿದ ಮೇಲೆ ಹೊರವಲಯದಲ್ಲಿ ತಾತ್ಕಾಲಿಕ ಚಿತಾಗಾರ ನಿರ್ಮಿಸಿದರು. ಸೋಂಕಿನಿಂದ ಸತ್ತವರಿಗೆ ಕೋವಿಡ್ ಮರಣ ಎಂದು ಪ್ರಮಾಣ ಪತ್ರ ನೀಡಲಾಗಿಲ್ಲ. ಮನೆಯಲ್ಲಿ, ರಸ್ತೆಯಲ್ಲಿ ಸತ್ತವರ ಕುಟುಂಬಗಳಿಗೆ ಇದುವರೆಗೂ ಮರಣ ಪ್ರಮಾಣ ಪತ್ರ ನೀಡಿಲ್ಲ. ಅವರಿಗೆ ಮರಣ ಪ್ರಮಾಣ ಪತ್ರ ಕೊಡಿಸುವುದು ನಿಮ್ಮ ಜವಾಬ್ದಾರಿ. ನಾವು ಹೋರಾಟ ಮುಂದುವರಿಸಿ, ನಿಮಗೆ ಪರಿಹಾರ ಸಿಗುವಂತೆ ಮಾಡುತ್ತೇವೆ. ಆಸ್ಪತ್ರೆಯಲ್ಲಿ ದುಬಾರಿ ಬಿಲ್ ಕಟ್ಟಿದವರಿಗೆ ಸರ್ಕಾರ ಏನಾದರೂ ನೆರವು ನೀಡಿತಾ? ತೇಜಸ್ವಿ ಸೂರ್ಯ ಎಂಬ ಸಂಸದರು, ಬೆಡ್ ಸ್ಕ್ಯಾಮ್ ಎಂದು ಅವರದೇ ಸರ್ಕಾರ, ಪಾಲಿಕೆ, ಮಂತ್ರಿಗಳ ಮೇಲೆ ಆರೋಪ ಮಾಡಿದರು. ಯಾವ ರೀತಿ ಆಡಳಿತ ನಡೆದಿತ್ತು ಎಂದು ಎಲ್ಲರೂ ನೋಡಿದ್ದಾರೆ ಎಂದು ಟೀಕಿಸಿದರು.
ಮುಖ್ಯಮಂತ್ರಿಗಳನ್ನು ಯಾಕೆ ಬದಲಾಯಿಸಿದ್ದಾರೆ? ಯಾಕೆ ಬದಲಿಸಿದ್ದಾರೆ. ಪಾಪ ಅವರು ಕಣ್ಣಲ್ಲಿ ನೀರು ಹಾಕಿಕೊಂಡರು. ಆಡಳಿತ ವೈಫಲ್ಯದಿಂದ ಅವರನ್ನು ಬದಲಿಸಿದ್ದೀರಿ ಎಂದು ಭಾವಿಸಿದ್ದೇನೆ. ದೆಹಲಿಯಲ್ಲಿ ಆರೋಗ್ಯ ಸಚಿವರನ್ನು, ಇಲ್ಲಿ ಮುಖ್ಯಮಂತ್ರಿ ಬದಲಾವಣೆಯೇ ಬಿಜೆಪಿಯಿಂದ ಜನ ಮೆಚ್ಚುವ ಆಡಳಿತ ಸಿಕ್ಕಿಲ್ಲ ಎಂಬುದಕ್ಕೆ ಸಾಕ್ಷಿ. ಮುಂದೆ ಒಳ್ಳೆಯ ದಿನ ಬರುತ್ತದೆ. ಒಗ್ಗಟ್ಟಾಗಿ ಜನರ ಸೇವೆ ಮಾಡಿ, ಅವರ ವಿಶ್ವಾಸ ಗಳಿಸಿ. ಗ್ರಾಮ ಪಂಚಾಯತ್ ನಲ್ಲಿ ಸಭೆ ನಡೆಸಿ, ಪಂಚಾಯತ್ ಪ್ರತಿನಿಧಿ ಆರಿಸಬೇಕು. ಅಸಂಘಟಿತ ಕಾರ್ಮಿಕರಿಂದ ಹಿಡಿದು ರೈತರವರೆಗೂ ಯಾರೆಲ್ಲಾ ನಷ್ಟ ಅನುಭವಿಸಿದ್ದಾರೆ ಅವರಿಗೆ ಪರಿಹಾರ ಸಿಗುವಂತೆ ಮಾಡಬೇಕು. ಆಸ್ಪತ್ರೆ ಸಿಬ್ಬಂದಿ ಮೇಲೆ ಯಾರೂ ದಬ್ಬಾಳಿಕೆ ಮಾಡಬೇಡಿ. ನಿಮ್ಮ ಮನೆಯ ಸಹೋದರಿ ಆ ಸ್ಥಾನದಲ್ಲಿದ್ದರೆ ಏನು ಮಾಡುತ್ತಿದ್ದೀರಿ? ಅದೇ ರೀತಿ ಅವರನ್ನು ನಡೆಸಿಕೊಳ್ಳಿ ಎಂದು ಕಿವಿಮಾತು ನೀಡಿದರು. ಇದನ್ನೂ ಓದಿ: ಖರ್ಚಾಗುತ್ತಿಲ್ಲ, ಲಸಿಕೆ ವಾಪಸ್ ಖರೀದಿಸಿ – ಖಾಸಗಿ ಆಸ್ಪತ್ರೆಗಳಿಂದ ಮನವಿ
ಪಕ್ಷದ ಕರೆ ಮೇರೆಗೆ ರಾಜ್ಯಾದ್ಯಂತ ಕಾಂಗ್ರೆಸ್ ಕಾರ್ಯಕರ್ತರು ಕೆಲಸ ಮಾಡಿದ್ದಾರೆ. 2.5 ಕೋಟಿ ಜನರಿಗೆ ನೆರವಾಗಿದ್ದಾರೆ. ಈ ಕೋವಿಡ್ ನಿಂದ ನಮ್ಮ ನಾಯಕರ ಮನೆಗಳಲ್ಲೂ ಸಾವಾಗಿದೆ. ಕೇಂದ್ರ ಸಚಿವ ಸುರೇಶ್ ಅಂಗಡಿ ಅವರ ಮೃತದೇಹವನ್ನು ಅವರ ತವರಿಗೆ ಕಳುಹಿಸದೇ, ದೇಹಲಿಯಲ್ಲೇ ಅಂತ್ಯ ಸಂಸ್ಕಾರ ಮಾಡಿದರು. ಇಡೀ ದೇಶದಲ್ಲಿ ಉದ್ಯೋಗ, ಆಸ್ತಿ ಕಳೆದುಕೊಂಡವರು ಬಹಳಷ್ಟು ಜನರಿದ್ದಾರೆ. ಯಾರಿಗೂ ಸರ್ಕಾರ ತೆರಿಗೆ ಕಡಿಮೆ ಮಾಡಿಲ್ಲ. ಸಣ್ಣ ಪರಿಹಾರವನ್ನೂ ನೀಡಲಿಲ್ಲ. ಅವರಿಗೆ ಕೊಟ್ಟಿದ್ದು ಕೇವಲ ಬೂದಿ. ಈಗ ಬಿಜೆಪಿಯವರು ಜನಾಶೀರ್ವಾದ ಅಂತಾ ಮಾಡುತ್ತಿದ್ದಾರೆ. ನೀವು ಬೂದಿ ಕೊಟ್ಟಿದ್ದಕ್ಕೆ ಜನ ನಿಮಗೆ ಆಶೀರ್ವಾದ ಮಾಡುತ್ತಾರಾ? ಎಂದು ವಾಗ್ದಾಳಿ ನಡೆಸಿದರು.
ನಮಗೆ ರಾಜಕೀಯ ಸಭೆ ಮಾಡಬೇಡಿ ಎನ್ನುವ ಬಿಜೆಪಿ, ಜನಾಶೀರ್ವಾದ ಮಾಡಬಹುದಾ? ನಾಳೆ ರಾಜೀವ್ ಗಾಂಧಿ ಹಾಗೂ ದೇವರಾಜ ಅರಸು ಅವರ ಜನ್ಮದಿನ. ನಾವು ಕಾರ್ಯಕ್ರಮವನ್ನು ಅಂಬೇಡ್ಕರ್ ಸಮುದಾಯ ಭವನದಲ್ಲಿ ಮಾಡಲು ಹೊರಟಿದ್ದೆವು. ಅದಕ್ಕೆ ಜಿಲ್ಲಾಧಿಕಾರಿಗಳು ಅನುಮತಿ ನೀಡಿಲ್ಲ. ಹೀಗಾಗಿ ಕಾಂಗ್ರೆಸ್ ಕಛೇರಿಯಲ್ಲೇ ಕಾರ್ಯಕ್ರಮ ಮಾಡುತ್ತಿದ್ದೇವೆ. ಇದನ್ನೂ ಓದಿ: ಕೋವಿಡ್‍ನಿಂದ ಮೃತಪಟ್ಟ ತಾಯಿ ಮೊಬೈಲ್ ಕೊಡಿ ಪ್ಲೀಸ್ ಎಂದ ಬಾಲಕಿಗೆ ಸಿಕ್ತು ಫೋನ್
ಬಿಜೆಪಿಯವರು ತಮ್ಮ ಸ್ವಂತ ಕೆಲಸಕ್ಕೆ ಸರ್ಕಾರವನ್ನು ಬಳಸಿಕೊಳ್ಳುತ್ತಿದ್ದಾರೆ. ನಿಮ್ಮ ಆಶೀರ್ವಾದ ನಮ್ಮ ಮೇಲಿರಲಿ, ನಿಮ್ಮ ಸೇವೆಯನ್ನು ಪ್ರಾಮಾಣಿಕವಾಗಿ ಮಾಡುತ್ತೇವೆ. ನಮ್ಮ ಶಾಸಕರು ವೆಂಕಟರಮಣಯ್ಯ ಅವರು ಉತ್ತಮ ಕೆಲಸ ಮಾಡುತ್ತಿದ್ದಾರೆ. ನೀವು ನಮ್ಮ ಕೈ ಬಲಪಡಿಸಬೇಕು ಎಂದು ಮನವಿಮಾಡಿಕೊಂಡರು.