ಬೆಂಗಳೂರು: ಯಡಿಯೂರಪ್ಪ ಬಿಜೆಪಿ ನಡಿಗೆ ಸ್ಲಂ ಕಡೆಗೆ ಅಂತಾರೆ. 20 ವರ್ಷದಿಂದ ಸ್ಲಂ ನೋಡಿಲ್ಲ ಅಂತ ಅನ್ನಿಸುತ್ತೆ ಅವ್ನು ಅಸಾಮಿ. ಮಾತು ಎತ್ತಿದ್ರೆ ದಲಿತರ ಮನಗೆ ಹೋಗಿ ಊಟ ಮಾಡ್ತೀನಿ ಅಂತಾರೆ. ಆದರೆ ಹೋಟೆಲ್ ನಿಂದ ತಂದ ತಿಂಡಿ ತಿಂದು ಬರುತ್ತಾರೆ ಎಂದು ಹೇಳುವ ಮೂಲಕ ಸಿಎಂ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದ್ದಾರೆ.
ಚಿಕ್ಕಬಾಣಾವರ, ನಾಗಸಂದ್ರ, ರಾಜಾ ಕೆನಾಲ್‍ನಲ್ಲಿ 65 ಎಂಎಲ್‍ಡಿ ಸಾಮರ್ಥ್ಯದ ತ್ಯಾಜ್ಯ ನೀರು ಸಂಸ್ಕರಣಾ ಘಟಕ ಉದ್ಘಾಟನೆ ಕಾರ್ಯಕ್ರಮದಲ್ಲಿ ಮಾತನಾಡಿದ ಸಿದ್ದರಾಮಯ್ಯ ಏಕವಚನದಲ್ಲೆ ಬಿಎಸ್‍ವೈ ಅವರನ್ನು ಟೀಕಿಸಿದರು.
Advertisement
Advertisement
ದಲಿತ ಮೇಲೆ ಪ್ರೀತಿ ಇದ್ದರೆ ಅವರ ಹೆಣ್ಣು ಮಕ್ಕಳನ್ನು ಇವರ ಮನೆಗೆ, ಇವರ ಹೆಣ್ಣು ಮಕ್ಕಳನ್ನು ದಲಿತರ ಮನೆಗೆ ಕೊಟ್ಟು ಮದುವೆ ಮಾಡಲಿ. ಕೇವಲ ದಲಿತರ ಬಗ್ಗೆ ಅವ್ರು ನಾಟಕ ಮಾಡ್ತಿದ್ದಾರೆ ಅಂತ ಬಿಎಸ್‍ವೈ ವಿರುದ್ಧ ಕಿಡಿಕಾರಿದರು.
Advertisement
ಬೆಂಗಳೂರು ಹಾಳಾಗಲು ಬಿಜೆಪಿ ಕಾರಣ. ಬೆಂಗಳೂರಿನ ಸರ್ಕಾರದ ಆಸ್ತಿಗಳನ್ನು ಅಡ ಇಟ್ಟವರು ಬಿಜೆಪಿಯವರು. ಅವರು ಅಡ ಇಟ್ಟ ಎಲ್ಲ ಆಸ್ತಿಯನ್ನ ನಾವು ಬಿಡಿಸುತ್ತಿದ್ದೇವೆ. ಮುಂದೆಯೂ ಕಾಂಗ್ರೆಸ್ ಅಧಿಕಾರಕ್ಕೆ ಬರುತ್ತೆ ಅಂತ ಯಡಿಯೂರಪ್ಪ ಗೊತ್ತಾಗಿದೆ. ಅದಕ್ಕೆ ಬಿಜೆಪಿಯ 150 ಮಿಷನ್ ಬಗ್ಗೆ ಎಲ್ಲೂ ಮಾತಾಡುತ್ತಿಲ್ಲ. ಕಾಂಗ್ರೆಸ್ ಅಧಿಕಾರಕ್ಕೆ ಬರುತ್ತೆ ಅಂತ ಗೊತ್ತಾಗಿ ಸುಮ್ಮನಿದ್ದಾರೆ ಎಂದು ಲೇವಡಿ ಮಾಡಿದರು.
Advertisement
ಎಚ್‍ಡಿಕೆ ವಿರುದ್ಧ ಗರಂ: ರಾಜಕೀಯಕ್ಕಾಗಿ ಅಂದು ಕುಮಾರಸ್ವಾಮಿ ಅವರು 110 ಹಳ್ಳಿಗಳಿಗಳನ್ನು ಸೇರಿಸಿ ಹೋದ್ರು. ನೀರಿನ ಪ್ರಮಾಣ ಇದೆಯೋ ಇಲ್ಲವೋ ಎನ್ನುವುದನ್ನು ನೋಡದೇ ಹಾಗೆ ಸೇರಿಸಿಹೋದ್ರು. ಅವರು ಮಾಡಿದ ತಪ್ಪಿಗೆ ನಾವು ಇವತ್ತು ಎಲ್ಲರಿಗೂ ನೀರು ಕೊಡುತ್ತಿದ್ದೇವೆ. ಬೆಂಗಳೂರು ಅಭಿವೃದ್ಧಿಗೆ ನಮ್ಮ ಸರ್ಕಾರ ಹೆಚ್ಚು ಒತ್ತು ನೀಡುತ್ತಿದೆ. ರಸ್ತೆ, ನೀರು, ಸಾರಿಗೆ ಎಲ್ಲದಕ್ಕೂ ನಮ್ಮ ಸರ್ಕಾರ ಆದ್ಯತೆ ನೀಡಿದೆ ಎಂದರು.
ನಮ್ಮ ಸರ್ಕಾರ ಬಂದ ಮೇಲೆ ಇಂತಹ ಅನೇಕ ಅಭಿವೃದ್ಧಿ ಕೆಲಸ ಮಾಡಿದ್ದೇವೆ. ಬೆಂಗಳೂರಿನಲ್ಲಿ 1800 ಎಂಎಲ್‍ಡಿ ನೀರು ಸರಬರಾಜು ಆಗುತ್ತೆ. 1440 ಎಂಎಲ್‍ಡಿ ನೀರು ತ್ಯಾಜ್ಯ ನೀರು ಬರುತ್ತೆ. ತ್ಯಾಜ್ಯ ನೀರು ಸಂಸ್ಕರಣೆ ಇವತ್ತು ಅವಶ್ಯಕ ಹಾಗಾಗಿ ನೀರು ಸಂಸ್ಕರಣೆ ಮಾಡದೇ ಇದ್ರೆ ಸಮಸ್ಯೆ ಆಗುತ್ತೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ಬೆಳ್ಳಂದೂರಿನಲ್ಲಿ ಮೊದಲೇ ಮುಂಜಾಗ್ರತೆ ಕ್ರಮವಾಗಿ ಸಂಸ್ಕರಣ ಘಟಕ ತೆಗೆಯದೇ ಇರೋದ್ರಿಂದ ಇವತ್ತು ಸಮಸ್ಯೆ ಆಗಿದೆ. ಜನರಿಂದ ನಾವು ಬೈಯಿಸಿಕೊಳ್ಳುವ ಪರಿಸ್ಥಿತಿ ಬಂದಿದೆ. ಈಗ ಅಲ್ಲೂ ಕೂಡಾ ಘಟಕ ನಿರ್ಮಾಣ ಮಾಡ್ತಿದ್ದೇವೆ. ನಮ್ಮ ಸರ್ಕಾರ ಕುಡಿವ ನೀರು, ಒಳ ಚರಂಡಿಗೆ ಹೆಚ್ಚು ಒತ್ತು ನೀಡುತ್ತಿದೆ. ಇಂದು ಬೆಂಗಳೂರು ಬೆಳೆದಿದೆ. ಹೆಚ್ಚು ಜನಸಂಖ್ಯೆ ಆಗಿದೆ. ಅವರೆಲ್ಲರಿಗೂ ನೀರು ಒದಗಿಸಬೇಕಾಗಿದೆ ಎಂದು ಸಿಎಂ ಹೇಳಿದರು.
ಜಪಾನ್ ಅಂತರಾಷ್ಟ್ರೀಯ ಸಹಕಾರ ಸಂಸ್ಥೆ(ಜೈಕಾ)ಸಹಯೋಗದೊಂದಿಗೆ ನಿರ್ಮಿಸಿರುವ ಘಟಕ ಉದ್ಘಾಟನೆಯ ವೇಳೆ ಬೆಂಗಳೂರು ಅಭಿವೃದ್ಧಿ ಸಚಿವ ಕೆಜೆ ಜಾರ್ಜ್, ಕೆ.ಆರ್.ಪುರ ಶಾಸಕ ಬಸವರಾಜ್, ಮೇಯರ್ ಪದ್ಮಾವತಿ ಉಪಸ್ಥಿತರಿದ್ದರು.
ಬೆಂಗಳೂರಿನ ಚಿಕ್ಕ ಬಾಣಾವರ, ನಾಗಸಂದ್ರ, ರಾಜಾ ಕೆನಾಲ್ ನಲ್ಲಿ ಜಲ ಮಂಡಳಿ ನಿರ್ಮಿಸಿರುವ ತ್ಯಾಜ್ಯ ನೀರು ಸಂಸ್ಕರಣಾ ಘಟಕಗಳ ಉದ್ಘಾಟನೆ ನೆರವೇರಿಸಿದ ಸಂದರ್ಭ. pic.twitter.com/GHME7GDRaF
— CM of Karnataka (@CMofKarnataka) July 7, 2017