ಬೆಂಗಳೂರು: ಸಿಎಂ ಕುಮಾರಸ್ವಾಮಿ ಅವರ ದಂಗೆ ಹೇಳಿಕೆ ರಾಜ್ಯ ರಾಜಕೀಯದಲ್ಲಿ ಭಾರೀ ಬೆಳವಣಿಗೆಗಳಿಗೆ ಕಾರಣವಾಗಿದ್ದು, ದಂಗೆ ಹೇಳಿಕೆಯನ್ನೇ ಬಿಜೆಪಿ ಅಸ್ತ್ರವಾಗಿಸಿಕೊಂಡು ಸಮ್ಮಿಶ್ರ ಸರ್ಕಾರದಲ್ಲಿ ಮಧ್ಯಪ್ರವೇಶ ಮಾಡುವಂತೆ ರಾಜ್ಯಪಾಲರಿಗೆ ದೂರು ನೀಡಿದೆ.
ರಾಜ್ಯ ಬಿಜೆಪಿ ನಾಯಕರು ಸಿಎಂ ಎಚ್‍ಡಿಕೆ ಮತ್ತು ಸರ್ಕಾರದ ಮೇಲೆ ಈ ಪರಿ ಮುಗಿಬೀಳಲು ಕಾರಣ ಗುರುವಾರ ರಾತ್ರಿ ನವದೆಹಲಿಯಿಂದ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಅವರು ಬಿಎಸ್ ಯಡಿಯೂರಪ್ಪ ಅವರಿಗೆ ಮಾಡಿದ ಒಂದು ಫೋನ್ ಕಾಲ್ ಕಾರಣ ಎನ್ನಲಾಗಿದೆ. ಮುಖ್ಯಮಂತ್ರಿಗಳ ದಂಗೆ ಹೇಳಿಕೆಯನ್ನು ಅಸ್ತ್ರವಾಗಿಸಿಕೊಂಡು ಸಮ್ಮಿಶ್ರ ಸರ್ಕಾರದ ವಿರುದ್ಧ ಭಾರೀ ಪ್ರತಿಭಟನೆ ನಡೆಸುವಂತೆ ಹಾಗೂ ಯಾವುದೇ ಕಾರಣಕ್ಕೂ ಈ ಅಸ್ತ್ರವನ್ನು ಕೈ ಬಿಡಿಬೇಡಿ ಎಂದು ಬಿಎಸ್‍ವೈ ಅವರಿಗೆ ಸೂಚಿಸಿದ್ದಾರೆ ಎನ್ನಲಾಗಿದೆ.
ರಾಷ್ಟ್ರೀಯ ಅಧ್ಯಕ್ಷರ ಸೂಚನೆ ಹಿನ್ನೆಲೆಯಲ್ಲಿ ಕೇಂದ್ರ ಸಚಿವ ಡಿವಿ ಸದಾನಂದಗೌಡ ನೇತೃತ್ವದ ಬಿಜೆಪಿ ನಿಯೋಗ ಸಿಎಂ ಕುಮಾರಸ್ವಾಮಿ ಅವರ ಹೇಳಿಕೆಯನ್ನು ಉಲ್ಲೇಖಿಸಿ ರಾಜ್ಯಪಾಲರಿಗೆ ದೂರು ನೀಡಿದೆ. ಬಿಜೆಪಿ ತನ್ನ ದೂರಿನಲ್ಲಿ ರಾಜ್ಯಾಧ್ಯಕ್ಷ ಬಿಎಸ್ ಯಡಿಯೂರಪ್ಪ ಅವರ ನಿವಾಸಕ್ಕೆ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರ ಮುತ್ತಿಗೆ ಹಾಕಿದ್ದು ಹಾಗೂ ಕೈ ಶಾಸಕರ ಅಸಮಾಧಾನ ವಿಚಾರಗಳನ್ನು ಪ್ರಸ್ತಾಪಿಸಿದೆ. ಈ ಕುರಿತು ಸಾಕ್ಷ್ಯಗಳನ್ನು ನೀಡಿರುವ ಬಿಜೆಪಿ, ತಮ್ಮ ದೂರಿಗೆ ಪೂರಕ ಆಗುವಂತೆ ಸಿಡಿಗಳನ್ನು ನೀಡಿದೆ.
ಇಂದು ರಾಜ್ಯಪಾಲರನ್ನು ಭೇಟಿ ಮಾಡಿದ ಬಿಜೆಪಿ ನಿಯೋಗದಲ್ಲಿ ಮಾಜಿ ಸಿಎಂ ಜಗದೀಶ್ ಶೆಟ್ಟರ್, ಮಾಜಿ ಡಿಸಿಎಂ ಆರ್ ಅಶೋಕ್, ಸಂಸದೆ ಶೋಭಾ ಕರಂದ್ಲಾಜೆ, ಅರವಿಂದ ಲಿಂಬಾವಳಿ, ಗೋವಿಂದ ಕಾರಜೋಳ, ಸುರೇಶ್ ಕುಮಾರ್ ಸೇರಿದಂತೆ 15ಕ್ಕೂ ಹೆಚ್ಚು ಶಾಸಕರು, ಸಂಸದರು ತೆರಳಿದ್ದರು.
ಇತ್ತ ರಾಜ್ಯ ರಾಜಕಾರಣದಲ್ಲಿ ನಡೆಯುತ್ತಿರುವ ಈ ಬೆಳವಣಿಗೆ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಅವರನ್ನು ಕಂಗೆಡಿಸಿದೆ ಎನ್ನಲಾಗಿದ್ದು, ಯಾವುದೇ ಕಾರಣಕ್ಕೂ ಆತುರಪಟ್ಟು ಸರ್ಕಾರ ಪತನಕ್ಕೆ ಅವಕಾಶ ಕೊಡಬೇಡಿ. ಸಿಎಂ ಹೇಳಿಕೆಯಿಂದ ಉಂಟಾಗುತ್ತಿರುವ ಡ್ಯಾಮೇಜ್ ಕಂಟ್ರೋಲ್ ಮಾಡಿ ಎಂದು ರಾಜ್ಯ ನಾಯಕರಿಗೆ ರಾಹುಲ್ ಸಂದೇಶ ರವಾನಿಸಿದ್ದಾರೆ ಎನ್ನಲಾಗಿದೆ.
ರಾಹುಲ್ ಸಂದೇಶ ಬೆನ್ನಲ್ಲೇ ಮಾಜಿ ಸಿಎಂ ಸಿದ್ದರಾಮಯ್ಯ ನಿವಾಸದಲ್ಲಿ ದೋಸ್ತಿ ಸರ್ಕಾರದ ಪ್ರಮುಖರ ನಾಯಕರು ತುರ್ತು ಸಭೆ ನಡೆಸಿದ್ದಾರೆ. ಈ ಸಭೆಯಲ್ಲಿ ಖುದ್ದು ಸಿಎಂ ಕುಮಾರಸ್ವಾಮಿ ಪಾಲ್ಗೊಂಡಿದ್ದರು. ಡಿಸಿಎಂ ಪರಮೇಶ್ವರ್, ಸಚಿವ ಡಿಕೆ ಶಿವಕುಮಾರ್ ಮತ್ತು ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಕೂಡ ಸಭೆಯಲ್ಲಿ ಉಪಸ್ಥಿತರಿದ್ದರು.
ಸಭೆಯಲ್ಲಿ ಸಿಎಂ ದಂಗೆ ಹೇಳಿಕೆಗೆ ಕಾಂಗ್ರೆಸ್ ನಾಯಕರು ತೀವ್ರ ಅಸಮಧಾನ ವ್ಯಕ್ತಪಡಿಸಿದ್ದರು. ಜೊತೆಗೆ ಎಲ್ಲರೂ ಊಟ ಮಾಡುತ್ತಲೇ ಬಿಜೆಪಿ ಕಾರ್ಯತಂತ್ರಗಳಿಗೆ ತಿರುಗೇಟು ನೀಡುವ ಬಗ್ಗೆ ಜಂಟಿ ರಣತಂತ್ರ ರೂಪಿಸಿದ್ದರು. ಸುದೀರ್ಘ 2 ಗಂಟೆ ಸಭೆ ಬಳಿಕ ಕುಮಾರಸ್ವಾಮಿ ಕಾವೇರಿಯಿಂದ ಹೊರಬಂದಾಗ ಬಾಗಿಲವರೆಗೆ ಸಿದ್ದರಾಮಯ್ಯ ಬೀಳ್ಕೊಟ್ಟರು. ಬಳಿಕ ಕಾಂಗ್ರೆಸ್ ನಾಯಕರು ಸಭೆ ಮುಂದುವರೆಸಿದ್ದರು.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv