ಬೆಂಗಳೂರು: ಚುನಾವಣೆಗೆ ದಿನ ಹತ್ತಿರ ಬರುತ್ತಿದ್ದಂತೆ ಸಿಎಂ ಸಿದ್ದರಾಮಯ್ಯ ವಿರುದ್ಧ ದೇಶದಲ್ಲಿ ಬಹುಕೋಟಿ ರೂ. ವಂಚನೆಗೈದು ಪರಾರಿಯಾಗಿರುವ ಹೂಡಿಕೆದಾರನ ವಿರುದ್ಧ ನಂಟು ಹೊಂದಿರುವ ಆರೋಪ ಕೇಳಿಬಂದಿದೆ.
ಮಲ್ಲೇಶ್ವರಂನಲ್ಲಿರುವ ಕಚೇರಿಯಲ್ಲಿ ಬಿಜೆಪಿ ರಾಷ್ಟ್ರೀಯ ವಕ್ತಾರ ಸಂಬಿತ್ ಪಾತ್ರ ದಾಖಲೆಗಳನ್ನು ಬಿಡುಗಡೆಗೊಳಿಸಿ ಉದ್ಯಮಿ ವಿಜಯ್ ಈಶ್ವರನ್ ಜೊತೆ ಸಿದ್ದರಾಮಯ್ಯ ನಂಟು ಹೊಂದಿದ್ದಾರೆ ಎಂದು ಆರೋಪಿಸಿದ್ದಾರೆ.
Advertisement
ಬಿಜೆಪಿ ಆರೋಪ ಏನು?
ಆಗಸ್ಟ್ 13, 2013ರಂದು ಸಿಎಂ ಚೀನಾಕ್ಕೆ ತೆರಳಿದ್ದ ವೇಳೆ ವಿಜಯ್ ಈಶ್ವರನ್‍ನನ್ನು ಭೇಟಿ ಮಾಡಿ ಜಾಗತಿಕ ಹೂಡಿಕೆದಾರರ ಸಮಾವೇಶದಲ್ಲಿ ಪಾಲ್ಗೊಳ್ಳುವಂತೆ ಆಹ್ವಾನಿಸಿದ್ದಾರೆ. ಪ್ರಸ್ತುತ ಮಲೇಷ್ಯಾದಲ್ಲಿರುವ ವಿಜಯ್ ಈಶ್ವರನ್ ತಮಿಳುನಾಡಿನಲ್ಲಿ 35 ಸಾವಿರಕ್ಕೂ ಹೆಚ್ಚು ಜನರಿಗೆ ವಂಚಿಸಿದ್ದು, ದೇಶದೆಲ್ಲೆಡೆ 100ಕ್ಕೂ ಹೆಚ್ಚು ಕಡೆ ಎಫ್‍ಐಆರ್ ದಾಖಲಾಗಿದೆ. ಚೆನ್ನೈ ಮತ್ತು ಮುಂಬೈ ಜಾರಿ ನಿರ್ದೇಶನಾಲಯದಿಂದ ವಿಚಾರಣೆಗೊಳಪಟ್ಟಿದ್ದ ವಿಜಯ್ ಈಶ್ವರನ್ 2009ರಿಂದ ದೇಶವನ್ನು ತೊರೆದು ಪರಾರಿಯಾಗಿದ್ದು, ಈ ವ್ಯಕ್ತಿಯನ್ನು ಭೇಟಿ ಮಾಡಿದ್ದು ಯಾಕೆ? ಈ ಭೇಟಿ ವೇಳೆ ಈಶ್ವರನ್ ಗಿಫ್ಟ್ ನೀಡಿದ್ದು ಆ ಗಿಫ್ಟ್ ಹ್ಯುಬ್ಲೊಟ್ ವಾಚ್ ಇರಬಹುದಲ್ಲವೇ ಎಂದು ಪ್ರಶ್ನಿಸಿದ್ದಾರೆ.
Advertisement
Advertisement
Advertisement
ನಾವು ಈಶ್ವರನ್ ನೀಡಿದ್ದು ವಾಚ್ ಎಂದು ಹೇಳುತ್ತಿಲ್ಲ. ಆ ಗಿಫ್ಟ್ ವಾಚ್ ಇರಬಹುದಾ ಎಂದು ಸಿದ್ದರಾಮಯ್ಯಗೆ ಪ್ರಶ್ನೆ ಮಾಡುತ್ತಿದ್ದೇವೆ. ದೇಶದೆಲ್ಲೆಡೆ ಎಫ್‍ಐಆರ್ ದಾಖಲಾದ ವಿಚಾರ ತಿಳಿದಿದ್ದರೂ ಅಕ್ರಮ ಎಸಗಿರುವ ಕಂಪೆನಿಯ ಜೊತೆ ಗುರುತಿಸಿಕೊಂಡಿದ್ದು ಯಾಕೆ ಎಂದು ಅವರು ಪ್ರಶ್ನಿಸಿದರು. ಸಿದ್ದರಾಮಯ್ಯ ಅಕ್ರಮ ಚಟುವಟಿಕೆಗಳಿಗೆ ಪ್ರೋತ್ಸಾಹ ನೀಡುತ್ತಿದ್ದು, ಕರ್ನಾಟಕದಲ್ಲಿ ಕಾಂಗ್ರೆಸ್ ಗಡಿಯಾರ ನಿಲ್ಲುವ ಕಾಲ ಬಂದಿದ್ದು, ಈ ಚುನಾವಣೆಯ ಬಳಿಕ ಗಡಿಯಾರದ ಮುಳ್ಳು ನಿಲ್ಲುತ್ತದೆ. ಯುಪಿಎ ಅವಧಿಯಲ್ಲೇ ಸಿಬಿಐ, ಸಿವಿಸಿ, ಎಸ್‍ಎಫ್‍ಐಒ ತನಿಖೆ ಆದೇಶ ನೀಡಿದೆ. ಹೀಗಾಗಿ ಕಾಂಗ್ರೆಸ್ ನಾವು ಮಾಡುತ್ತಿರುವ ಆರೋಪವನ್ನು ರಾಜಕೀಯ ಪ್ರೇರಿತ ಆರೋಪ ಎಂದು ಹೇಳಲು ಸಾಧ್ಯವಿಲ್ಲ. ಯುಪಿಎ ಸರ್ಕಾರ ಎರಡು ಬಾರಿ ಇದ್ದಾಗಲೂ ಈ ಉದ್ಯಮಿಯ ರಕ್ಷಿಸಿತ್ತು. ಈಗ ಸಿಎಂ ಸಿದ್ದರಾಮಯ್ಯ ಈ ವ್ಯಕ್ತಿಯನ್ನು ರಕ್ಷಿಸುತ್ತಿದ್ದಾರೆ ಎಂದು ಆರೋಪಿಸಿದರು.
ಸಿಎಂ ಸಿದ್ದರಾಮಯ್ಯ ನಾನು ಕನ್ನಡಿಗರನ್ನು ರಕ್ಷಿಸುತ್ತಿದ್ದಾರೆ ಎಂದು ಹೇಳುತ್ತಿದ್ದಾರೆ ಆದರೆ ತಮಿಳು ಉದ್ಯಮಿಯನ್ನು ರಕ್ಷಿಸುವ ಮೂಲಕ ಸಾವಿರಾರು ಕನ್ನಡಿಗರಿಗೆ ಮೋಸ ಮಾಡಿದ್ದಾರೆ ಎಂದು ಗಂಭೀರ ಆರೋಪ ಮಾಡಿದರು.
ಸಿಎಂಗೆ ಬಿಜೆಪಿಯಿಂದ 5 ಪ್ರಶ್ನೆಗಳು
1. ವಿಜಯ್ ಈಶ್ವರನ್‍ನ್ನ ಸಿದ್ದರಾಮಯ್ಯ ಚೀನಾದಲ್ಲಿ ಭೇಟಿ ಮಾಡಿದ್ದು ಏಕೆ?
2. ಭೇಟಿ ವೇಳೆ ನಿಮಗೆ ಈಶ್ವರನ್ ಗಿಫ್ಟ್ ನೀಡಿದ್ದಾರೆ ಅಲ್ವಾ?
3. ಅದು ಬೆಲೆ ಬಾಳುವ ಗಿಫ್ಟ್ ಎನ್ನಲಾಗಿದೆ. ಆ ದುಬಾರಿ ಗಿಫ್ಟ್ ಏನು?
4. ಆ ಗಿಫ್ಟ್ ಹ್ಯುಬ್ಲೊಟ್ ವಾಚ್ ಇರಬಹುದಾ…?
5. ಬಾದಾಮಿ ಮತ್ತು ಚಾಮುಂಡೇಶ್ವರಿಯಲ್ಲಿ ಸ್ಪರ್ಧೆ ಮಾಡುವಾಗ ಸಿಕ್ಕಿದ ಉಡುಗೊರೆಯನ್ನು ಏನೆಂದು ತಿಳಿಸಿದ್ದೀರಿ?
ಯಾರು ಈ ವಿಜಯ್ ಈಶ್ವರನ್?
ತಮಿಳು ಮೂಲದ ಮಲೇಷ್ಯಾದ ಉದ್ಯಮಿಯಾಗಿರುವ ವಿಜಯ್ ಈಶ್ವರನ್ ಹಣವನ್ನು ದುಪ್ಪಟ್ಟುಗೊಳಿಸುವ ಚೈನ್ ಬಿಸಿನೆಸ್ ಅನ್ನು ಭಾರತದಲ್ಲಿ ಆರಂಭಿಸಿದ್ದ. ಕಡಿಮೆ ಸಮಯದಲ್ಲಿ ಹಣ ಸಿಗುತ್ತದೆ ಎನ್ನುವ ಕಾರಣಕ್ಕೆ ಬಹಳಷ್ಟು ಮಂದಿ ಈ ಯೋಜನೆಯಲ್ಲಿ ಹಣವನ್ನು ಹೂಡಿದ್ದರು. 2009ರಲ್ಲಿ ಈತ ಭಾರತದಿಂದ ನಾಪತ್ತೆಯಾಗಿದ್ದಾನೆ. ಈತನ ಅಕ್ರಮಕ್ಕೆ ಸಂಬಂಧಿಸಿದಂತೆ 1300ಕ್ಕೂ ಹೆಚ್ಚು ಸಾಕ್ಷ್ಯಗಳು ಸಿಕ್ಕಿದ್ದು, ಕರ್ನಾಟಕ ಸರ್ಕಾರಕ್ಕೆ ಸಲ್ಲಿಸಲಾಗಿದೆ ಎಂದು ಬಿಜೆಪಿ ತಿಳಿಸಿದೆ.
In Sept 2013, Siddaramaiah went to attend WEF meeting in China and there he met Vijay Ishwaran who is an absconder. There was another absconder and SFIO has called both a national threat : Dr. @sambitswaraj #SiddaExposed pic.twitter.com/THJY16nz0l
— BJP (@BJP4India) May 6, 2018