ಬೆಂಗಳೂರು: ರಾಜ್ಯ ವಿಧಾನಸಭಾ ಚುನಾವಣೆಗೆ ಬಿಜೆಪಿ ತನ್ನ ಅಭ್ಯರ್ಥಿಗಳ ಪಟ್ಟಿಯನ್ನು ರಾಮನವಮಿ ದಿನ ಮಾರ್ಚ್ 25ಕ್ಕೆ ಬಿಡುಗಡೆ ಮಾಡಲು ಮುಂದಾಗಿದೆ.
ಮೊದಲ ಪಟ್ಟಿಯಲ್ಲಿ 110 ವಿಧಾನಸಭಾ ಕ್ಷೇತ್ರಗಳ ಅಭ್ಯರ್ಥಿಗಳ ಪಟ್ಟಿಯನ್ನು ಬಿಜೆಪಿ ಹೈಕಮಾಂಡ್ ಬಿಡುಗಡೆ ಮಾಡಲಿದೆ ಎಂದು ಮೂಲಗಳು ಮಾಹಿತಿ ನೀಡಿವೆ.
ಈ ಪಟ್ಟಿಯಲ್ಲಿ ಹಾಲಿ ಶಾಸಕರಾಗಿರುವ ಬಹುತೇಕ ಮಂದಿಗೆ ಟಿಕೆಟ್ ಖಚಿತ ಎಂಬ ಮಾಹಿತಿ ಪಬ್ಲಿಕ್ ಟಿವಿಗೆ ಲಭಿಸಿದೆ. ಅಲ್ಲದೇ ಕಳೆದ ಚುನಾವಣೆಯಲ್ಲಿ ಕಡಿಮೆ ಅಂತರದಲ್ಲಿ ಪರಾಭವಗೊಂಡಿರುವ ಅಭ್ಯರ್ಥಿಗಳಿಗೂ ಮಣೆ ಹಾಕುವ ಸಾಧ್ಯತೆಗಳಿದ್ದು, ಪ್ರಮುಖವಾಗಿ 500 ರಿಂದ 2 ಸಾವಿರ ಮತಗಳ ಅಂತರದಲ್ಲಿ ಪರಾಭವಗೊಂಡ ಅಭ್ಯರ್ಥಿಗಳ ಆಯ್ಕೆಗೆ ಹೆಚ್ಚಿನ ಒಲವು ನೀಡಲಾಗಿದೆ.
ಅಭ್ಯರ್ಥಿಗಳ ಆಯ್ಕೆಯಲ್ಲಿ ಪ್ರಮುಖವಾಗಿ ಕ್ಷೇತ್ರದ ವಿಸ್ತಾರಕರ ವರದಿ ಮತ್ತು ಅಮಿತ್ ಶಾ ಅವರ ಟೀಂ ನೀಡಿರುವ ವರದಿ ಆಧಾರಿಸಿ ಟಿಕೆಟ್ ಅಂತಿಮ ಮಾಡಲಾಗುತ್ತಿದ್ದು, ಕ್ಷೇತ್ರದವರಲ್ಲದಿದ್ದರೂ ಗೆಲ್ಲುವ ಸಾಮರ್ಥ್ಯವಿದ್ದರೆ ಟಿಕೆಟ್ ನೀಡಲು ಪರಿಗಣನೆ ಮಾಡಲಾಗುತ್ತಿದೆ ಎನ್ನಲಾಗಿದೆ. ಇನ್ನುಳಿದಂತೆ ಅಭ್ಯರ್ಥಿಗಳ ಆಯ್ಕೆಯಲ್ಲಿ ಜಾತಿ ಸಮೀಕರಣ ಪ್ರಮುಖ ಅಂಶವಾಗಿದ್ದು, ಕ್ಷೇತ್ರದಲ್ಲಿ ಪಕ್ಷದ ಕಾರ್ಯಚಟುವಟಿಕೆ ಮತ್ತು ವರ್ಚಸ್ಸು ಆಧರಿಸಿ ಅಭ್ಯರ್ಥಿಗಳ ಆಯ್ಕೆ ಮಾಡಲಾಗುತ್ತಿದೆ. ವಿಶೇಷವಾಗಿ ಐದು ಮಂದಿಗಿಂತ ಹೆಚ್ಚು ಟಿಕೆಟ್ ಆಕಾಂಕ್ಷಿಗಳು ಇರುವ ಕ್ಷೇತ್ರಗಳ ಹೆಸರು ಮೊದಲ ಪಟ್ಟಿಯಿಂದ ಕೈಬಿಡಲಾಗಿದೆ.
ಮಾರ್ಚ್ 10 ರಿಂದ 19 ರವರೆಗೆ ಅಮಿತ್ ಶಾ ತಂಡದ ಸದಸ್ಯರು 224 ಕ್ಷೇತ್ರಗಳ ಪ್ರವಾಸ ನಡೆಸಲಿದ್ದು, ಮಾರ್ಚ್ 20 ರಂದು ಈ ವರದಿ ಸಲ್ಲಿಕೆಯಾಗಲಿದೆ. ಈ ವರದಿಯಲ್ಲಿ ಅಂಶಗಳನ್ನು ಆಧಾರಿಸಿ ರಾಜ್ಯ ಆರ್ ಎಸ್‍ಎಸ್ ನಾಯಕರ ಜೊತೆ ಚರ್ಚಿಸಿ ಅಮಿತ್ ಶಾ ಅಂತಿಮವಾಗಿ ಅಭ್ಯರ್ಥಿಗಳ ಪಟ್ಟಿಯನ್ನು ಸಿದ್ಧಪಡಿಸಲಿದ್ದಾರೆ ಎಂದು ಮೂಲಗಳು ತಿಳಿಸಿವೆ.
ರಾಮನವಮಿ ದಿನ ಟಿಕೆಟ್ ಘೋಷಣೆ ಮಾಡಿ ಹಿಂದೂ ಅಜೆಂಡಾವನ್ನು ಸಾರಲು ಬಿಜೆಪಿ ನಾಯಕರು ಮಾರ್ಚ್ 25 ರಂದೇ ಮೊದಲ ಪಟ್ಟಿ ಬಿಡುಗಡೆ ಸಿದ್ಧತೆ ನಡೆಸಿದ್ದಾರೆ ಎನ್ನಲಾಗಿದೆ.