ಚುನಾವಣೆ ನಡೆದ ಮರುದಿನವೇ ಕಾಲ್ಕಿತ್ತ ಬಿಜೆಪಿ ಅಭ್ಯರ್ಥಿ!

Public TV
2 Min Read
CTD 1 1

ಚಿತ್ರದುರ್ಗ: ಸಾಮಾನ್ಯವಾಗಿ ಚುನಾವಣೆಗೂ ಮುನ್ನ ಅಭ್ಯರ್ಥಿಗಳ ಪರ ವಿರೋಧ ಚರ್ಚೆಗಳು ಸರ್ವೆ ಸಾಮಾನ್ಯ. ಆದ್ರೆ ಚುನಾವಣೆ ಮುಗಿದ ಬಳಿಕವೂ ಸಾಮಾಜಿಕ ಜಾಲತಾಣಗಳಲ್ಲಿ ಕೈ ಹಾಗೂ ಬಿಜೆಪಿ ಕಾರ್ಯಕರ್ತರ ಸಮರ ಮುಂದುವರಿದಿದೆ.

ಹೌದು. ಚಿತ್ರದುರ್ಗ ಲೋಕಸಭಾ ಕ್ಷೇತ್ರದಲ್ಲಿ ಏಪ್ರಿಲ್ 18 ರಂದು ನಡೆದ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸಿರೋ ಬಿಜೆಪಿ ಅಭ್ಯರ್ಥಿ ಆನೇಕಲ್ ನಾರಾಯಣಸ್ವಾಮಿ ಹಾಗೂ ಇಬ್ಬರು ಕೂಡ ವಲಸಿಗರು. ಹೀಗಾಗಿ ಅವರಿಗೆ ಟಿಕೆಟ್ ಸಿಕ್ಕ ಮರುದಿನವೇ ಜಿಲ್ಲೆಯಲ್ಲಿ ತೀವ್ರ ವಿರೋಧ ವ್ಯಕ್ತವಾಗಿತ್ತು.

CTD CHANDRAPPA
                    ಮೈತ್ರಿ ಅಭ್ಯರ್ಥಿ ಚಂದ್ರಪ್ಪ

ಸ್ಥಳೀಯರಿಗೆ ಟಿಕೆಟ್ ನೀಡಬೇಕೆಂಬ ಕೂಗು ಕೂಡ ಕೇಳಿಬಂದಿತ್ತು. ಆದರೂ ಯಾರ ಮಾತಿಗೂ ಸೊಪ್ಪು ಹಾಕದ ರಾಷ್ಟ್ರೀಯ ಪಕ್ಷಗಳು ಈ ಅಭ್ಯರ್ಥಿಗಳನ್ನೇ ಅಂತಿಮ ಅಖಾಡಕ್ಕೆ ಇಳಿಸಿದ್ದವು. ಹೀಗಾಗಿ ಚುನಾವಣೆಯೂ ಕೂಡ ಶಾಂತಿಯುತವಾಗಿ ನಡೆದು ಕಳೆದ ಬಾರಿಗಿಂತ ಅಧಿಕ ಪ್ರಮಾಣದಲ್ಲಿ ಶೇ 70.79 ರಷ್ಟು ಮತದಾನವಾಗಿದೆ. ಆದ್ರೆ ಚುನಾವಣೆ ನಡೆದ ಮರುದಿನವೇ ಬಿಜೆಪಿ ಅಭ್ಯರ್ಥಿ ನಾರಾಯಣಸ್ವಾಮಿ ಚಿತ್ರದುರ್ಗದಿಂದ ಕಾಲ್ಕಿತ್ತಿದ್ದಾರೆ.

ಅಲ್ಲದೆ ಕೋಟೆನಾಡಿನಿಂದ ಆನೇಕಲ್‍ಗೆ ತೆರಳಿದ್ದು, ಫಲಿತಾಂಶಕ್ಕೂ ಮುನ್ನವೇ ನಾಪತ್ತೆಯಾಗಿರೋ ನಾರಾಯಣಸ್ವಾಮಿ ಮತ್ತೆ ವಾಪಾಸ್ ಬರೋದು ಬೇಡ. ಯಾಕಂದ್ರೆ ಇಲ್ಲಿ ಕಾಂಗ್ರೆಸ್ ಜಯ ಗಳಿಸಲಿದೆ ಎಂದು ಕೈ ಕಾರ್ಯಕರ್ತರು ಉದ್ವಿಗ್ನ ಹೇಳಿಕೆಗಳನ್ನು ಸಾಮಾಜಿಕ ಜಾಲಾತಾಣಗಳಲ್ಲಿ ಪೋಸ್ಟ್ ಮಾಡುತ್ತಿದ್ದಾರೆ. ಇದನ್ನು ಕೈ ನಾಯಕರು ಕೂಡ ಸಮರ್ಥಿಸಿಕೊಂಡಿದ್ದಾರೆ.

CTD 3

ಕೈ ನಾಯಕರ ಈ ಹೇಳಿಕೆಗೆ ಜಿಲ್ಲಾ ಬಿಜೆಪಿ ಅಧ್ಯಕ್ಷ ನವೀನ್ ಪ್ರತಿಕ್ರಿಯಿಸಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಕೈ ನಾಯಕರು ಹೀಗೆ ಸಕ್ರಿಯರಾಗಿರುವಷ್ಟು ಈ ಜಿಲ್ಲೆಯ ಅಭಿವೃದ್ಧಿಯತ್ತ ಕಾಳಜಿ ವಹಿಸುತ್ತಿದ್ದರೆ, ಈ ಬಾರಿ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಗೆ ಕೊನೆ ಪಕ್ಷ ತೀವ್ರ ತರಹದ ಸ್ಪರ್ಧೆಯನ್ನಾದರೂ ಒಡ್ಡಬಹುದಿತ್ತು. ಆದ್ರೆ ಇಂತಹ ಸಮಯ ವ್ಯರ್ಥ ಮಾಡುವ ಕೈ ನಾಯಕರ ಕಾಯಕಗಳಿಂದಲೇ ಜಿಲ್ಲೆಯ ಐದು ವಿಧಾನಸಭಾ ಕ್ಷೇತ್ರಗಳಲ್ಲಿ ಕಮಲ ಅರಳಿದೆ. ಇನ್ನು ಈ ಲೋಕಸಭಾ ಚುನಾವಣೆಯಲ್ಲೂ ಬಿಜೆಪಿ ಅಭ್ಯರ್ಥಿ ನಾರಾಯಣಸ್ವಾಮಿ ಪ್ರಚಂಡ ಬಹುಮತಗಳಿಂದ ಜಯಗಳಿಸಲಿದ್ದಾರೆ ಎಂದು ತಿರುಗೇಟು ನೀಡಿದ್ದಾರೆ.

ಒಟ್ಟಾರೆ ಬೆಂಕಿ ಆರಿದರೂ ಹೊಗೆ ಮಾತ್ರ ನಿಲ್ಲಲಿಲ್ಲ ಎಂಬಂತೆ ಚುನಾವಣೆ ಮುಗಿದರೂ ಕೂಡ ಚಿತ್ರದುರ್ಗ ಕಾಂಗ್ರೆಸ್ ಹಾಗೂ ಬಿಜೆಪಿ ಕಾರ್ಯಕರ್ತರ ವಾಕ್ ಸಮರ ಮಾತ್ರ ಸಾಮಾಜಿಕ ಜಾಲತಾಣಗಳಲ್ಲಿ ಇನ್ನೂ ನಿಂತಿಲ್ಲ.

Share This Article
Leave a Comment

Leave a Reply

Your email address will not be published. Required fields are marked *