ಬೆಂಗಳೂರು: ಆಡಳಿತ ಪಕ್ಷ ಬಿಜೆಪಿಯ ಆಂತರಿಕ ಕಲಹಗಳು ಸ್ಫೋಟಗೊಂಡು ಬಹಿರಂಗವಾಗುತ್ತಿವೆ. ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಬೆಂಬಲಿಗರ ಮಧ್ಯೆ ಪತ್ರ ಸಮರ ಮತ್ತಷ್ಟು ಜೋರಾಗಿದೆ.
ಸಿಎಂ ಯಡಿಯೂರಪ್ಪ ಅವರ ಪರ ವಹಿಸಿ ನಳಿನ್ ಕುಮಾರ್ ಕಟೀಲ್ ಅವರಿಗೆ ಬಿಜೆಪಿ ಯುವ ಮೋರ್ಚಾ ಉಪಾಧ್ಯಕ್ಷ ಭೀಮಾಶಂಕರ್ ಪಾಟೀಲ್ ಪತ್ರ ಬರೆದಿದ್ದರು. ಇದೇ ವಿಚಾರವಾಗಿ ಬಿಎಸ್‍ವೈ ಆಪ್ತ ಭೀಮಾಶಂಕರ್ ವಿರುದ್ಧ ನಳಿನ್ ಕುಮಾರ್ ಕಟೀಲ್ ಆಪ್ತ, ಬಿಜೆಪಿಯ ಹಿಂದುಳಿದ ವರ್ಗಗಳ ಮೋರ್ಚಾ ಕಾರ್ಯದರ್ಶಿ ಮಾಡಾಳು ಕೊಟ್ರೇಶ್ ಕಿಡಿಕಾರಿದ್ದಾರೆ. ಅಷ್ಟೇ ಅಲ್ಲದೆ ಪತ್ರದ ಮೂಲಕ ಖಡಕ್ ಎಚ್ಚರಿಕೆಯನ್ನು ರವಾನಿಸಿದ್ದಾರೆ. ಇದನ್ನು ಓದಿ: ಯಡಿಯೂರಪ್ಪಗೆ ಚೆಕ್ ಮೇಲೆ ಚೆಕ್ ಕೊಡ್ತಿದ್ದಾರೆ ಕಟೀಲ್
Advertisement
Advertisement
ನಿನ್ನ ಚರಿತ್ರೆ ಎಲ್ಲರಿಗೂ ಗೊತ್ತಿದೆ. ಪಕ್ಷದ ರಾಜ್ಯಾಧ್ಯಕ್ಷರನ್ನು ಪ್ರಶ್ನೆ ಮಾಡುವ ಅಧಿಕಾರ ನಿನಗೆ ಕೊಟ್ಟಿದ್ದು ಯಾರು? ನೀನೊಬ್ಬ ನಕಲಿ, ಢೋಂಗಿ ಹೋರಾಟಗಾರ. ಹಿಂದೊಮ್ಮೆ ಜನರೇ ನಿನಗೆ ಗೂಸಾ ಕೊಟ್ಟಿದ್ದರು. ಪಕ್ಷದಲ್ಲಿ ಯಾರೂ ಯಾರನ್ನೂ ಕಡೆಗಣಿಸಲ್ಲ. ಬಿ.ಎಸ್.ಯಡಿಯೂರಪ್ಪ ಅವರನ್ನು ಕಡೆಗಣಿಸಿದ್ದಕ್ಕೆ ಸಾಕ್ಷ್ಯ ಇದ್ದರೆ ಬಿಡುಗಡೆ ಮಾಡು. ನೀನು ಬರೆದ ಪತ್ರ ವಾಪಸ್ ಪಡೆದುಕೊಳ್ಳಬೇಕು. ಜೊತೆಗೆ ರಾಜ್ಯಾಧ್ಯಕ್ಷರ ಕ್ಷಮೆ ಕೇಳು. ಇಲ್ಲದಿದ್ದರೆ ಬಿಜೆಪಿ ಕಾರ್ಯಕರ್ತರು ನಿನ್ನ ವಿರುದ್ಧ ಉಗ್ರ ಹೋರಾಟ ಮಾಡಬೇಕಾಗುತ್ತದೆ ಎಂದು ಮಾಡಾಳು ಕೊಟ್ರೇಶ್, ಭೀಮಾಶಂಕರ್ ಪಾಟೀಲ್ ಅವರಿಗೆ ಎಚ್ಚರಿಕೆ ಕೊಟ್ಟಿದ್ದಾರೆ.
Advertisement
ಭೀಮಾಶಂಕರ್ ಪತ್ರದಲ್ಲಿ ಏನಿತ್ತು?
ಭಾರತೀಯ ಜನತಾ ಪಕ್ಷವನ್ನು ತಳಮಟ್ಟದಲ್ಲಿ ಸಂಘಟಿಸಿ ಅಧಿಕಾರಕ್ಕೆ ತಂದ ನಾಯಕ ಯಡಿಯೂರಪ್ಪ ಅವರು, ಅವರನ್ನು ಪಕ್ಷದ ಸಂಘಟನೆ, ಆಡಳಿತಾತ್ಮಕ ವಿಚಾರ ಸೇರಿದಂತೆ ಇನ್ನಿತರ ವಿಚಾರಗಳಲ್ಲಿ ಕಡೆಗಣಿಸುತ್ತಿರುವ ವಿಚಾರವನ್ನು ಬಲವಾಗಿ ಖಂಡಿಸುತ್ತೇನೆ.
Advertisement
ವೀರಶೈವ ಲಿಂಗಾಯತ ಸಮಾಜದ ಪ್ರಶ್ನಾತೀತ ಜನ ನಾಯಕರಾಗಿದ್ದು, ರೈತ, ಕಾರ್ಮಿಕ, ಬಡವರ, ಸರ್ವ ಸಮುದಾಯದ ಜನರು ಬಿಎಸ್‍ವೈ ಅವರ ಸಾಮಾಜಿಕ ಕಳಕಳಿ ಮೆಚ್ಚಿ ಅವರು ಅಧ್ಯಕ್ಷರಾಗಿದ್ದ ಅವಧಿಯಲ್ಲಿ ಪಕ್ಷಕ್ಕೆ ಮತ ಹಾಕಿ ಆಡಳಿತ ಚುಕ್ಕಾಣಿ ಹಿಡಿಯುವಂತೆ ಮಾಡಿದ್ದಾರೆ. ಆದರೆ ಇತ್ತೀಚೆಗೆ ಮುಖ್ಯಮಂತ್ರಿಯಾದ ಸಮಯದಿಂದ ಮತ್ತೆ ಅವರ ವಿರುದ್ಧ ಪಿತೂರಿಗಳು ನಡೆಯುತ್ತಿದೆ. ಪಕ್ಷ ಅಧಿಕಾರಕ್ಕೆ ಬರಲು ಬಿಎಸ್‍ವೈ ಬೇಕು. ಅಧಿಕಾರ ಸಿಕ್ಕ ನಂತರ ಬೇಡ ಎನ್ನುವ ಮನಸ್ಥಿತಿ ನಮ್ಮ ಪಕ್ಷದ ಬುದ್ಧಿವಂತರ ರೀತಿ ಮುಖವಾಡ ಧರಿಸಿರುವವರು ಮಾಡುತ್ತಿದ್ದಾರೆ. ಇಂತಹ ಕನಿಷ್ಠ ಯೋಚನೆ ಪಕ್ಷಕ್ಕೆ ನಿಜಕ್ಕೂ ಅಪಾಯ. ಇದರಿಂದ ನೀವೂ ಸಹ ಹೊರ ಬರಬೇಕು ಎಂದು ಪತ್ರದಲ್ಲಿ ತಿಳಿಸಿದ್ದರು.
ಈ ಕುರಿತು ಪಬ್ಲಿಕ್ ಟಿವಿಗೆ ಪ್ರತಿಕ್ರಿಯೆ ನೀಡಿದ್ದ ಭೀಮಾಶಂಕರ್ ಅವರು, ಪಕ್ಷ ಹಾಗೂ ಬಿಎಸ್‍ವೈ ಅವರ ವಿರುದ್ಧ ನಿರಂತರವಾಗಿ ಪಿತೂರಿ ನಡೆಸುತ್ತಿದ್ದಾರೆ. ರಾಜ್ಯದಲ್ಲಿ ಬಿಎಸ್‍ವೈ ಅವರನ್ನು ನೋಡಿ ಪಕ್ಷಕ್ಕೆ ಮತ ನೀಡಲಾಗಿದೆ. ಇದು ಪಕ್ಷದಲ್ಲಿ ಪಿತೂರಿ ನಡೆಸುತ್ತಿರುವವರಿಗೂ ತಿಳಿದಿದೆ. ಇದರ ಬಗ್ಗೆ ಹೊಸ ರಾಜ್ಯಾಧ್ಯಕ್ಷರಿಗೆ ತಿಳಿಸಲು ಪತ್ರ ಬರೆಯಲಾಗಿದೆ. ಕೆಲವರಿಗೆ ಇದನ್ನು ನೇರವಾಗಿ ಹೇಳಿದರೆ ಮಾತ್ರ ತಲುಪುತ್ತದೆ. ಆದ್ದರಿಂದಲೇ ಬಹಿರಂಗ ಪತ್ರ ಬರೆದಿದ್ದೇವೆ. ಇದನ್ನು ಎಚ್ಚರಿಕೆ ಅಥವಾ ಸಲಹೆಯಾಗಿ ತಿಳಿದುಕೊಳ್ಳಬಹುದು ಎಂದು ಸ್ಪಷ್ಟಪಡಿಸಿದ್ದರು.