-ರಾಜ್ಯ ರಾಜಕಾರಣದಲ್ಲಿ ಆಗುತ್ತಾ ‘ಸಂ’ಕ್ರಾಂತಿ..?
ಬೆಂಗಳೂರು: ರಾಜ್ಯದಲ್ಲಿ ಸಮ್ಮಿಶ್ರ ಸರ್ಕಾರ ರಚನೆಯಾಗಿ ಅರ್ಧ ವರ್ಷವೇ ಕಳೆದಿದೆ. ಇತ್ತ ಬಿಜೆಪಿ ಮಾತ್ರ ಸರ್ಕಾರ ರಚಿಸುವ ಹಠವನ್ನು ಬಿಡುತ್ತಿರುವ ಹಾಗೆ ಕಾಣಿಸುತ್ತಿಲ್ಲ. ಬಹಿರಂಗವಾಗಿ ಯಾವ ಶಾಸಕರನ್ನು ನಾವು ಸೆಳೆಯುವ ಪ್ರಯತ್ನ ಮಾಡಿಲ್ಲ. ಅವರಾಗಿಯೇ ಬಂದ್ರೆ ಸ್ವಾಗತಿಸುತ್ತೇವೆ ಎಂಬ ಹೇಳಿಕೆಗಳನ್ನು ಬಿಜೆಪಿ ನಾಯಕರು ನೀಡುತ್ತಲೇ ಬಂದಿದ್ದಾರೆ. ಇತ್ತ ಮತ್ತೋರ್ವ ಬಿಜೆಪಿ ನಾಯಕ ಉಮೇಶ್ ಕತ್ತಿ ಸರ್ಕಾರದ ಡೆಡ್ ಲೈನ್ ಕೊಡುತ್ತಾ ಬರುತ್ತಲೇ ಇದ್ದಾರೆ. ಈ ಎಲ್ಲ ಬೆಳವಣಿಗೆಗಳ ನಡುವೆ ಬಿಜೆಪಿಯ ಶಾಸಕರು ನವದೆಹಲಿ ತಲುಪಿದ್ದಾರೆ.
ಕಾಂಗ್ರೆಸ್ ಶಾಸಕರಿಗೆ ಬಿಜೆಪಿ ಒಡ್ಡುತ್ತಿರುವ ಆಮಿಷಗಳು ಬಗ್ಗೆ ಮಾಹಿತಿಗಳಿದ್ದರೂ, ಸಿಎಂ ಹೆಚ್.ಡಿ.ಕುಮಾರಸ್ವಾಮಿ ಮೌನಕ್ಕೆ ಜಾರಿದ್ದರಿಂದ ಸಹಜವಾಗಿಯೇ ಸಚಿವ ಡಿ.ಕೆ.ಶಿವಕುಮಾರ್ ಅಸಮಾಧಾನಗೊಂಡಿದ್ದಾರಂತೆ. ಆಪರೇಷನ್ ಕಮಲದ ಬಗ್ಗೆ ಮಾಹಿತಿಗಳಿದ್ದರೂ ಸಿಎಂ, ಮಾಜಿ ಸಿಎಂ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಸುಮ್ಮನಿದ್ದಾರೆ. ಒಂದು ವೇಳೆ ನಮ್ಮ ಶಾಸಕರು ಬಿಜೆಪಿ ಅತ್ತ ಹೋದ್ರೆ ಸಮ್ಮಿಶ್ರ ಸರ್ಕಾರಕ್ಕೆ ಸಂಕಷ್ಟ ಎದುರಾಗಲಿದೆ ಎಂಬ ವಿಷಯ ಗೊತ್ತಿದ್ರೂ, ಮೈತ್ರಿಯನ್ನು ಉಳಿಸಲು ಮುಂದಾಗುತ್ತಿಲ್ಲ ಎಂದು ಡಿಕೆ ಶಿವಕುಮಾರ್ ಪರೋಕ್ಷವಾಗಿಯೇ ಅಸಮಾಧಾನ ಹೊರಹಾಕಿದ್ದಾರೆ ಎಂದು ಹೇಳಲಾಗುತ್ತಿದೆ.
ಆಪರೇಷನ್ ಕಮಲವನ್ನು ತಡೆಯಲು ಕಾಂಗ್ರೆಸ್ ನಾಯಕರು ಪ್ರಯತ್ನ ಮಾಡುತ್ತಿಲ್ಲವಾ ಎಂಬ ಪ್ರಶ್ನೆ ರಾಜಕೀಯ ಅಂಗಳದಲ್ಲಿ ಹರಿದಾಡುತ್ತಿದೆ. ಸಮ್ಮಿಶ್ರ ಸರ್ಕಾರ ರಚನೆಯ ಹೊಣೆ ಹೊತ್ತಿದ್ದ ಡಿಕೆ ಶಿವಕುಮಾರ್ ತಮ್ಮ ನಾಯಕರ ವಿರುದ್ಧ ಬೇಸರಗೊಂಡಿದ್ದಾರೆ ಎಂಬ ಮಾಹಿತಿಗಳು ಲಭ್ಯವಾಗುತ್ತಿವೆ.
ಇತ್ತ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ತಮ್ಮ ಎಲ್ಲ ಶಾಸಕರೊಂದಿಗೆ ದೆಹಲಿಯಲ್ಲಿ ವಾಸ್ತವ್ಯ ಹೂಡಿದ್ದಾರೆ. ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ನೀಡುವ ಗ್ರೀನ್ ಸಿಗ್ನಲ್ ಗಾಗಿ ಕಾಯುತ್ತಿದ್ದಾರೆ. ಇಂದು ಸಂಜೆಯೊಳಗೆ ಸಭೆ ನಡೆಸಲಿರುವ ಅಮಿತ್ ಶಾ ಎಲ್ಲರೊಂದಿಗೆ ಚರ್ಚೆ ನಡೆಸಲಿದ್ದಾರೆ. ಈ ವೇಳೆ ಲೋಕಸಭಾ ಚುನಾವಣೆಯ ಸಿದ್ಧತೆ ಮತ್ತು ಕರ್ನಾಟಕದಲ್ಲಿ ಸರ್ಕಾರ ರಚನೆಯ ಕುರಿತು ಕೆಲ ಮಾಹಿತಿಗಳನ್ನು ನೀಡಲಿದ್ದಾರೆ ಎನ್ನಲಾಗುತ್ತಿದೆ.
ಇವರೆಲ್ಲ ಬಿಜೆಪಿ ಸೇರ್ತಾರಾ?
* ಬಿ.ನಾಗೇಂದ್ರ, ಬಳ್ಳಾರಿ ಗ್ರಾಮಾಂತರ ಶಾಸಕ (ಪಕ್ಷ ಸೇರುವ ಮುನ್ನ ಕೊಟ್ಟ ಭರವಸೆಯಂತೆ ಸಚಿವ ಸ್ಥಾನ ಸಿಗದೆ, ಯಾವ ನಿಗಮವೂ ಸಿಗದೆ ಕಾಂಗ್ರೆಸ್ ವಿರುದ್ಧ ಸಿಡಿದೆದ್ದ ಶಾಸಕ )
* ಮಹೇಶ್ ಕುಮಟಳ್ಳಿ, ಅಥಣಿ ಶಾಸಕ (ಬೆಳಗಾವಿಯ ಮಾಜಿ ಮಂತ್ರಿಯೊಬ್ಬರ ಕಟ್ಟಾ ಬೆಂಬಲಿಗ, ಅವರು ಹೇಗೆ ಹೇಳುತ್ತಾರೋ ಹಾಗೆ ಎಂದಿದ್ದ ನಾಯಕ)
* ಉಮೇಶ್ ಜಾಧವ್, ಚಿಂಚೋಳಿ ಶಾಸಕ (ಕಲಬುರಗಿ ಲೋಕಸಭೆ ಕ್ಷೇತ್ರದಿಂದ ಬಿಜೆಪಿಯಿಂದ ಕಣಕ್ಕಿಳಿಯಲು ಚಿಂತನೆ, ಇದಕ್ಕಾಗಿಯೇ ನಿಗಮ ಮಂಡಳಿ ಅಧಿಕಾರ ಸ್ವೀಕರಿಸದೆ ಸುಮ್ಮನಿರುವ ಜಾಧವ್, ಬಿಜೆಪಿ ನಾಯಕರ ಜೊತೆ ನಿರಂತರ ಸಂಪರ್ಕವಂತೆ)
* ಆನಂದ್ ಸಿಂಗ್, ಹೊಸಪೇಟೆ ಶಾಸಕ ( ಬಳ್ಳಾರಿ ಕೋಟಾದಲ್ಲಿ ಸಚಿವ ಸ್ಥಾನ ಸಿಗದೆ ನಿರಾಸೆ, ಪಿಯೂಶ್ ಗೋಯಲ್ ಜೊತೆ ನಿರಂತರ ಸಂಪರ್ಕದಲ್ಲಿದ್ದಾರೆ ಎಂಬ ಮಾತುಗಳು ಕೇಳಿ ಬರುತ್ತಿವೆ)
* ಗಣೇಶ್, ಕಂಪ್ಲಿ ಶಾಸಕ (ಮೊದಲ ಬಾರಿಗೆ ಆಯ್ಕೆಯಾದ ಶಾಸಕ, ಸದ್ಯ ನಾಗೇಂದ್ರ, ಆನಂದ್ ಸಿಂಗ್ ಜೊತೆ ಗುರುತಿಸಿಕೊಂಡಿರುವ ಶಾಸಕ )
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv, ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv