ಕೋಲ್ಕತ್ತಾ: ಪಶ್ಚಿಮ ಬಂಗಾಳದ ಲೋಕಸಭಾ ಚುನಾವಣಾ ಸಮಯದಲ್ಲಿ ಹಿಂಸಾಚಾರ ಹೆಚ್ಚಾಗಿದ್ದು ಬಿಜೆಪಿ ಮತ್ತು ತೃಣಮೂಲ ಕಾಂಗ್ರೆಸ್ (ಟಿಎಂಸಿ) ಪಕ್ಷದ ಕಾರ್ಯಕರ್ತರು ನಿಗೂಢವಾಗಿ ಸಾವನ್ನಪ್ಪಿದ್ದಾರೆ.
ಪಶ್ಚಿಮ ಬಂಗಾಳದ ಝಗ್ರಾಮ್ ಜಿಲ್ಲೆಯಾ ಗೋಪಿಬಾಲ್ಲಪುರದ ಬಿಜೆಪಿ ಕಾರ್ಯಕರ್ತ, ಬೂತ್ ಅಧ್ಯಕ್ಷ ರಾಮನ್ ಸಿಂಗ್ ಅವರು ಶನಿವಾರ ರಾತ್ರಿ ನಿಗೂಢವಾಗಿ ಸಾವನ್ನಪ್ಪಿದ್ದಾರೆ.
ಕಾಂತಿ ಕ್ಷೇತ್ರದ ಮೆಡಿನಿಪುರ್ ಎಂಬಲ್ಲಿ ಟಿಎಂಸಿ ಕಾರ್ಯಕರ್ತ ಸುಧಾಕರ್ ಮೈತಿ ಎಂಬುವವರ ಮೃತದೇಹ ಸಿಕ್ಕಿದೆ. ಸಂಬಂಧಿಕರನ್ನು ನೋಡಿಕೊಂಡು ಬರುತ್ತೇನೆ ಎಂದು ಶನಿವಾರ ರಾತ್ರಿ ಆಸ್ಪತ್ರೆಗೆ ಹೋಗಿದ್ದ ಸುಧಾಕರ್ ಅವರು ಮನೆಗೆ ವಾಪಸ್ ಬಂದಿಲ್ಲ. ಅವರ ಮೃತದೇಹ ಕಾಂತಿ ಕ್ಷೇತ್ರದಲ್ಲಿ ಸಿಕ್ಕಿದೆ ಎಂದು ಪೊಲೀಸರು ಮನೆಯವರಿಗೆ ತಿಳಿಸಿದ್ದಾರೆ. ಅದರೆ ಸುಧಾಕರ್ ಮನೆಯವರು ಇದು ಕೊಲೆ ಎಂದು ಆರೋಪ ಮಾಡಿದ್ದಾರೆ.
ಶನಿವಾರ ರಾತ್ರಿ ಭಾಗನ್‍ಪುರ್ ಮತ್ತು ಮೆಡಿನಿಪುರ್ ನಲ್ಲಿ ಬಿಜೆಪಿ ಕಾರ್ಯಕರ್ತರಾದ ಆನಂತ ಗುಚೈತ್ ಮತ್ತು ರಂಜಿತ್ ಮೈಟಿ ಎಂಬುವವರ ಮೇಲೆ ಯಾರೋ ಕಿಡಿಗೇಡಿಗಳು ಗುಂಡಿನ ದಾಳಿ ಮಾಡಿದ್ದಾರೆ. ಅವರನ್ನು ತಮ್ಲುಕ್ ಅಸ್ಪತ್ರೆ ದಾಖಲು ಮಾಡಲಾಗಿತ್ತು. ಈಗ ಅವರನ್ನು ಹೆಚ್ಚಿನ ಚಿಕಿತ್ಸೆ ಕೊಡಿಸಲು ಕೋಲ್ಕತ್ತಾ ಆಸ್ಪತ್ರೆಗೆ ದಾಖಲಿಸಲಾಗಿದೆ.
ಇಂದು ಪಶ್ಚಿಮ ಬಂಗಾಳದ ಎಂಟು ಲೋಕಸಭಾ ಕ್ಷೇತ್ರದಲ್ಲಿ ಆರನೇ ಹಂತದಲ್ಲಿ ಚುನಾವಣೆ ನಡೆಯುತ್ತಿದೆ. ಝಗ್ರಾಮ್, ಮೆಡಿನಿಪುರ್, ಕಾಂತಿ, ತಮ್ಲುಕ್, ಬಂಕುರಾ, ಬಿಷ್ಣುಪುರ್, ಪುರುಲಿಯಾ ಮತ್ತು ಘಟಾಲ್ ಕ್ಷೇತ್ರದಲ್ಲಿ ಮತದಾನ ನಡೆಯುತ್ತಿದೆ.