ಕೋಲ್ಕತ್ತಾ: ಮತ ಎಣಿಕೆ ಕೇಂದ್ರದಲ್ಲಿ ಗಲಾಟೆಯಾಗಿದ್ದು, ಕೂಚ್ ಬೆಹಾರ್‌ನಲ್ಲಿ ಬಿಜೆಪಿ ಮತ್ತು ಟಿಎಂಸಿ ಕಾರ್ಯಕರ್ತರು ಪರಸ್ಪರ ಹೊಡೆದಾಡಿಕೊಂಡಿದ್ದಾರೆ.
ಅಸನ್ಸೋಲ್ ಎಂಜಿನಿಯರಿಂಗ್ ಕಾಲೇಜಿನ ಎಣಿಕೆ ಕೇಂದ್ರದ ಬಳಿ ನಡೆದ ಘರ್ಷಣೆಯಲ್ಲಿ ಕುರ್ಚಿಗಳು ಮತ್ತು ವಾಹನಗಳನ್ನು ಧ್ವಂಸಗೊಳಿಸಲಾಗಿದೆ. ಪರಿಸ್ಥಿತಿಯನ್ನು ನಿಯಂತ್ರಿಸಲು ಸ್ಥಳದಲ್ಲಿ ಭದ್ರತಾ ಸಿಬ್ಬಂದಿ ನಿಯೋಜಿಸಲಾಗಿದೆ.
ಘರ್ಷಣೆಯಲ್ಲಿ ತೊಡಗಿದ್ದ ಜನರನ್ನು ಚದುರಿಸಲು ಭದ್ರತಾ ಸಿಬ್ಬಂದಿ ಲಾಠಿ ಪ್ರಹಾರ ನಡೆಸಿದರು. ಪಶ್ಚಿಮ ಬಂಗಾಳದ ರಾಷ್ಟ್ರಗುರು ಸುರೇಂದ್ರನಾಥ ಮತ ಎಣಿಕೆ ಕೇಂದ್ರದ ಉತ್ತರ 24 ಪರಗಣದ ಬರಾಕ್‌ಪೋರ್‌ನಲ್ಲಿ ಮತ್ತೊಂದು ಗಲಾಟೆ ನಡೆದಿದೆ.
ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ಐತಿಹಾಸಿಕ ಗೆಲುವಿನ ನಿರೀಕ್ಷೆಯಲ್ಲಿದೆ. ಬಿಜೆಪಿ 190, ಟಿಎಂಸಿ 98, ಕಾಂಗ್ರೆಸ್ 1 ಕ್ಷೇತ್ರದಲ್ಲಿ ಮುನ್ನಡೆ ಸಾಧಿಸಿವೆ. ರಾಜ್ಯದಲ್ಲಿ ಭರ್ಜರಿ ಮುನ್ನಡೆ ಸಾಧಿಸುತ್ತಿದ್ದ ಬಿಜೆಪಿ ಕಾರ್ಯಕರ್ತರು ಸಂಭ್ರಮಿಸುತ್ತಿದ್ದಾರೆ. ಯಾವುದೇ ಅಹಿತಕರ ಘಟನೆ ನಡೆಯಬಾರದೆಂದು ಪಶ್ಚಿಮ ಬಂಗಾಳದಲ್ಲಿ ಸಂಭ್ರಮಾಚರಣೆ ಬ್ಯಾನ್ ಮಾಡಲಾಗಿದೆ.
ರಾಜಕೀಯ ಕುತೂಹಲದ ಕೇಂದ್ರ ಪಶ್ಚಿಮ ಬಂಗಾಳದ 294 ವಿಧಾನಸಭೆಗಳಿಗೆ ಏ.23 ಮತ್ತು 29 ರಂದು ಎರಡು ಹಂತಗಳಲ್ಲಿ ಚುನಾವಣೆ ನಡೆಯಿತು. ಒಟ್ಟು 2,926 ಅಭ್ಯರ್ಥಿಗಳು ಚುನಾವಣೆಯಲ್ಲಿ ಸ್ಪರ್ಧಿಸಿದ್ದರು. ಮೊದಲ ಹಂತದ ಚುನಾವಣೆಗೆ 152 ಸ್ಥಾನಗಳಲ್ಲಿ 1,487 ಹಾಗೂ ಎರಡನೇ ಹಂತದ ಚುನಾವಣೆಗೆ 142 ಕ್ಷೇತ್ರಗಳಲ್ಲಿ ಒಟ್ಟು 1,448 ಅಭ್ಯರ್ಥಿಗಳು ಸ್ಪರ್ಧಿಸಿದ್ದರು. ಮೊದಲ ಹಂತದಲ್ಲಿ 93.19% ಹಾಗೂ ಎರಡನೇ ಹಂತದಲ್ಲಿ 92.47% ಮತದಾನ ನಡೆಯಿತು. ಈ ರಾಜ್ಯ ಎಸ್‌ಐಆರ್ ಬಳಿಕ ಚುನಾವಣೆ ಎದುರಿಸಿದೆ. ಯಾವುದೇ ಪಕ್ಷ ರಾಜ್ಯದಲ್ಲಿ ಅಧಿಕಾರಕ್ಕೆ ಬರಲು 148 ಸೀಟ್‌ಗಳ ಬಹುಮತ ಬೇಕಿತ್ತು. ಈ ಬಾರಿ 385 ಮಹಿಳೆಯರು ಸ್ಪರ್ಧಿಸಿದ್ದರು.
ಸಿಎಂ ಮಮತಾ ಬ್ಯಾನರ್ಜಿ ನೇತೃತ್ವದ ಟಿಎಂಸಿ, ಬಿಜೆಪಿ ಮತ್ತು ಕಾಂಗ್ರೆಸ್ ಪ್ರಬಲ ಪೈಪೋಟಿ ಗೆಲುವಿಗಾಗಿ ಪ್ರಬಲ ಪೈಪೋಟಿ ನಡೆಸಿದ್ದವು. ರಾಜ್ಯದಲ್ಲಿ ಶಾಂತಿಯುತ ಮತದಾನಕ್ಕಾಗಿ ಕೇಂದ್ರ ಸರ್ಕಾರ ಹೆಚ್ಚಿನ ಸಂಖ್ಯೆಯಲ್ಲಿ ಸಿಆರ್‌ಪಿಎಫ್ ನಿಯೋಜಿಸಿತ್ತು. ಹೀಗಿದ್ದು, ಅಲ್ಲಲ್ಲಿ ಒಂದಷ್ಟು ಗೊಂದಲಗಳಾಗಿವೆ. ಚುನಾವಣೆ ಬಳಿಕವೂ ಬಂಗಾಳದ ದಕ್ಷಿಣ 24 ಪರಗಣಗಳ 15 ಮತಗಟ್ಟೆಗಳಲ್ಲಿ ಮರು ಮತದಾನ ನಡೆಯಿತು. ಫಾಲ್ಟಾ ಕ್ಷೇತ್ರದ ಎಲ್ಲ 285 ಮತಗಟ್ಟೆಗಳಲ್ಲಿ ಮೇ 21ಕ್ಕೆ ಮರು ಮತದಾನ ನಡೆಯಲಿದೆ. ಕಳೆದ ಚುನಾವಣೆಯಲ್ಲಿ ಟಿಎಂಸಿ 213, ಬಿಜೆಪಿ 77 ಸ್ಥಾನಗಳನ್ನು ಗೆದ್ದಿದ್ದವು.
ಕಳೆದ ಚುನಾವಣೆಯಲ್ಲಿ ತೃಣಮೂಲ ಕಾಂಗ್ರೆಸ್ (TMC): 215 ಸ್ಥಾನಗಳನ್ನು ಗೆದ್ದು ಪ್ರಚಂಡ ಬಹುಮತ ಸಾಧಿಸಿತ್ತು. ಭಾರತೀಯ ಜನತಾ ಪಕ್ಷ (BJP): 77 ಸ್ಥಾನಗಳನ್ನು ಗೆಲ್ಲುವ ಮೂಲಕ ಪ್ರಬಲ ವಿರೋಧ ಪಕ್ಷವಾಗಿ ಹೊರಹೊಮ್ಮಿತ್ತು. ಇತರರು: ರಾಷ್ಟ್ರೀಯ ಸೆಕ್ಯುಲರ್ ಮಜ್ಲಿಸ್ ಪಾರ್ಟಿ (RSMP) 1 ಸ್ಥಾನ ಮತ್ತು ಪಕ್ಷೇತರ ಅಭ್ಯರ್ಥಿ 1 ಸ್ಥಾನ ಗೆದ್ದಿದ್ದರು. ಕಾಂಗ್ರೆಸ್ ಮತ್ತು ಎಡರಂಗ: ಈ ಚುನಾವಣೆಯಲ್ಲಿ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಮತ್ತು ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾ (ಮಾರ್ಕ್ಸ್‌ವಾದಿ) ಯಾವುದೇ ಸ್ಥಾನವನ್ನು ಗೆಲ್ಲಲು ಸಾಧ್ಯವಾಗಿರಲಿಲ್ಲ.












