ಕೊಪ್ಪಳ: ಹೊಲ ಗದ್ದೆಗಳಲ್ಲಿ ಬೇಸಿಗೆ ಬೆಳೆಯ ಭತ್ತ ನಾಟಿ ಮಾಡುವ ಚಟುವಟಿಕೆಗಳು ಚುರುಕುಗೊಳ್ಳುತ್ತಿದ್ದಂತೆ ಆಹಾರ ಅರಸಿ ಹೊಲಗಳಿಗೆ ಆಗಮಿಸುತ್ತಿರುವ ಬೆಳ್ಳಕ್ಕಿಗಳ ಹಿಡ್ಡು ಗದ್ದೆಗಳಿಗೆ ರಂಗು ಮೂಡಿಸುತ್ತಿವೆ.
ಪ್ರತಿ ವರ್ಷ ಮುಂಗಾರು ಬೆಳೆ ಕಟಾವು ಮಾಡಿದ ನಂತರ ಬೇಸಿಗೆ ಬೆಳೆಗಾಗಿ ಭತ್ತದ ಸಸಿ ಮಡಿಗಳನ್ನು ಹಾಕಿ, ಎರಡ್ಮೂರು ತಿಂಗಳುಗಳ ಕಾಲ ಸಾವಯುವ ಗೊಬ್ಬರ, ಸಗಣೆ ಗೊಬ್ಬರಗಳನ್ನು ಹಾಕಿ ಭೂಮಿಯನ್ನು ಸಜ್ಜುಗೊಳಿಸುತ್ತಿದ್ದರು. ಆದರೆ ಈ ಬಾರಿ ಕಟಾವು ಮಾಡಿದ 15 ದಿನಗಳಲ್ಲಿಯೇ ಪುನಃ ಬೇಸಿಗೆ ಬೆಳೆಯನ್ನು ನಾಟಿ ಮಾಡಲು ಜಮೀನು ಸಿದ್ಧಗೊಳಿಸಲು ರೈತರು ಮುಂದಾಗಿದ್ದಾರೆ. ಅದಕ್ಕಾಗಿ ಹೊಲಗಳಿಗೆ ನೀರು ಹರಸಿ ಭೂಮಿಯನ್ನು ಹದಗೊಳಿಸಲಾಗುತ್ತಿದೆ.
Advertisement
Advertisement
ಈ ವೇಳೆಯಲ್ಲಿ ಬೆಳ್ಳಕ್ಕಿಗಳಿಗೆ ಬೇಕಾಗುವ ಕೀಟಗಳು ಜಮೀನಿನಲ್ಲಿ ಸುಲಭವಾಗಿಯೇ ದೊರೆಯುತ್ತವೆ. ಕೀಟಗಳ ಜೊತೆಗೆ ನೀರು ದೊರೆಯುತ್ತಿರುವುದರಿಂದ ಕೆಲವು ದಿನಗಳಿಂದ ಗಂಗಾವತಿ ತಾಲೂಕಿನ ನಾನಾ ಭಾಗಗಳ ಜಮೀನುಗಳಲ್ಲಿ ನೂರಾರು ಬೆಳ್ಳಕ್ಕಿಗಳ ಹಿಂಡು ಸ್ವಚ್ಛಂದವಾಗಿ ಹಾರಾಡುವ ಮೂಲಕ ರೈತರಿಗೂ ಸಹ ಆನಂದವನ್ನು ನೀಡುತ್ತಿವೆ.
Advertisement
ಎಲ್ಲೆಲ್ಲಿ ಹೆಚ್ಚಾಗಿವೆ ಹಕ್ಕಿಗಳ ಕಲರವ?
ತುಂಗಭದ್ರಾ ನದಿ ಪಾತ್ರಗಳಲ್ಲಿ ಹಾಗೂ ಕೊಳವೆ ಬಾವಿ ಹೊಂದಿರುವ ರೈತರು ಸೇರಿ ಒಟ್ಟು 35 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಭತ್ತವನ್ನು ನಾಟಿ ಮಾಡಲಾಗುತ್ತದೆ. ನದಿ ಪಾತ್ರ ಮತ್ತು ಕೊಳವೆ ಬಾವಿ ನೀರು ಬಳಸಿ ರೈತರು ಬೇಸಿಗೆ ಬೆಳೆಯನ್ನು ನಾಟಿ ಮಾಡಲು ಮುಂದಾಗಿದ್ದಾರೆ. ಈಗಾಗಲೇ ಸರಿಸುಮಾರು 400ಕ್ಕೂ ಅಧಿಕ ಹೆಕ್ಟೇರ್ ಪ್ರದೇಶದಲ್ಲಿ ಭತ್ತವನ್ನು ನಾಟಿ ಮಾಡುವ ಕಾರ್ಯ ಜೋರಾಗಿಯೇ ನಡೆಯುತ್ತಿದೆ. ಹಾಗಾಗಿಯೇ ಹಕ್ಕಿಗಳು ಆಹಾರವನ್ನು ಅರಸಿ ತಾಲೂಕಿನ ಆನೆಗೊಂದಿ, ಚಿಕ್ಕರಂಪೂರ, ಮಲ್ಲಾಪೂರ, ಸಣಾಪೂರ, ಢಣಾಪೂರ, ಚಿಕ್ಕಜಂತಕಲ್, ಮುಸ್ಟೂರು, ವಡ್ಡರಹಟ್ಟಿ, ಸಂಗಾಪೂರ, ಬಸವನದುರ್ಗ, ಹನುಮನಹಳ್ಳಿ, ಹಿರೇಜಂತಕಲ್, ಸಿದ್ದಿಕೇರಿ, ಮರಳಿ, ಪ್ರಗತಿನಗರ ಸೇರಿದಂತೆ ನಾನಾ ಗ್ರಾಮಗಳಲ್ಲಿ ಬೆಳ್ಳಕ್ಕಿಗಳ ಹಿಂಡು ಬೀಡು ಬಿಟ್ಟಿವೆ.
Advertisement
ಕೃಷಿ ಕಾರ್ಮಿಕರಲ್ಲಿ ಸಂತಸ:
ಭತ್ತ ನಾಟಿ ಮಾಡುವ ಜಮೀನುಗಳಲ್ಲಿ ಮುಂಚಿತವಾಗಿಯೇ ಭೂಮಿಗೆ ನೀರು ಬಿಟ್ಟು, ಟ್ರ್ಯಾಕ್ಟರ್ ಗಳ ಸಹಾಯದಿಂದ ಹದಗೊಳಿಸಲಾಗುವುದು. ಹದಗೊಳಿಸುವ ವೇಳೆಯಲ್ಲಿ ಭೂಮಿಯಲ್ಲಿ ಇರುವ ಕೀಟಗಳು ಮೇಲೆ ಕಾಣಿಸಿಕೊಳ್ಳುತ್ತವೆ. ಅವುಗಳು ತಿನ್ನುವ ಉದ್ದೇಶದಿಂದ ಬೆಳ್ಳಕ್ಕಿಗಳು ಗುಂಪು ಗುಂಪಾಗಿ ಒಟ್ಟಿಗೆ ಕಾಣಿಸಿಕೊಳ್ಳುತ್ತವೆ. ಬೆಳಗಿನ ಜಾವದಲ್ಲಿ ಕಾಣಿಸಿಕೊಳ್ಳುವ ಹಕ್ಕಿಗಳ ಗುಂಪಿನ ಕಲರವ ಕೃಷಿ ಕಾರ್ಮಿಕರನ್ನು ಸಂತಸಗೊಳಿಸುತ್ತಿದೆ.
ಅಲ್ಲದೆ ದಾರಿಯಲ್ಲಿ ಹೋಗುವ ಜನರು ಜಮೀನಿನಲ್ಲಿ ಹಾರಾಡುವ ಬೆಳ್ಳಕ್ಕಿಗಳ ಗುಂಪುಗಳನ್ನು ನೋಡಿ, ಫೋಟೊ ಸೆರೆ ಹಿಡಿದು ಸಂತಸ ಪಡುತ್ತಿದ್ದಾರೆ. ಬೆಳ್ಳಕ್ಕಿಗಳು ಆಹಾರ ಅರಸಿ ಜಮೀನುಗಳ ಕಡೆ ಬಂದಿರುವುದು ನೋಡುಗರಿಗೆ ಹಾಗೂ ರೈತರ ಕಣ್ಣುಗಳನ್ನು ತಂಪಾಗಿಸುತ್ತಿವೆ.