ಮೈಸೂರು: ನಗರದಲ್ಲಿ ಹಕ್ಕಿ ಜ್ವರ ಖಾತ್ರಿಯಾಗಿದೆ. ಕುಂಬಾರಕೊಪ್ಪಲಿನಲ್ಲಿ ಸಾಕಿದ ಕೋಳಿ ಹಾಗೂ ಕೊಕ್ಕರೆ ಸ್ಯಾಂಪಲ್‍ನಲ್ಲಿ ಜ್ವರ ಇರುವುದು ಕಂಡು ಬಂದಿದೆ ಎಂದು ಜಿಲ್ಲಾಧಿಕಾರಿ ಅಭಿರಾಮ್ ಜಿ ಶಂಕರ್ ಹೇಳಿದ್ದಾರೆ.
ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹಕ್ಕಿ ಜ್ವರದ ಬಗ್ಗೆ ಇದೇ ತಿಂಗಳು 12 ರಂದು ಸ್ಯಾಂಪಲ್ ಕಳುಹಿಸಲಾಗಿತ್ತು. ಇದೀಗ ಇಂದು ಹಕ್ಕಿ ಜ್ವರ ಇರುವುದು ಖಚಿತವಾಗಿದೆ. ಹೀಗಾಗಿ ಸೋಂಕು ಬಂದಿರುವ ಸ್ಥಳದಲ್ಲಿ ಸಾಕಿರುವ ಹಕ್ಕಿಗಳನ್ನು ಸಾಯಿಸಬೇಕು. ಮನುಷ್ಯರಿಗೆ ಇದು ಹರಡುವುದಿಲ್ಲ. ಆದರೂ ಮುಂಜಾಗ್ರತವಾಗಿ ಹಕ್ಕಿಗಳನ್ನು ಸಾಯಿಸಬೇಕು ಎಂದು ತಿಳಿಸಿದ್ದಾರೆ.
ಸೋಂಕು ಪತ್ತೆಯಾದ ಸ್ಥಳದ 10 ಕಿ.ಮೀ ವ್ಯಾಪ್ತಿಯಲ್ಲಿ ನಾಳೆಯಿಂದ ಕೋಳಿ ಹಾಗೂ ಯಾವುದೇ ಪಕ್ಷಿಗಳನ್ನ ಮಾರಾಟ ಮಾಡುವಂತಿಲ್ಲ. ಸೋಂಕು ಪತ್ತೆಯಾದ 1 ಕಿ.ಮೀ ವ್ಯಾಪ್ತಿಯಲ್ಲಿ ತಿನ್ನುವಂತ ಪಕ್ಷಿಗಳನ್ನು ಸೇವನೆ ಮಾಡಬಾರದು ಎಂದಿದ್ದಾರೆ.
ನಾಳೆಯಿಂದ ಕಲ್ಲಿಂಗ್ ಆಪರೇಷನ್ ಮಾಡಲಾಗುವುದು. ಹೀಗಾಗಿ ವ್ಯಾಪ್ತಿಯಲ್ಲಿರುವ ಎಲ್ಲಾ ಹಕ್ಕಿಗಳನ್ನು ಗುಂಡಿ ತೆಗೆದು ಮುಚ್ಚಲಾಗುವುದು. ಈಗಾಗಲೇ ಸರ್ವೆ ಪ್ರಾರಂಭ ಮಾಡಲಾಗಿದೆ ಎಂದು ಜಿಲ್ಲಾಧಿಕಾರಿ ಹೇಳಿದ್ದಾರೆ.