ಚಿಕ್ಕಮಗಳೂರು: ಕೊರೊನಾ ಭೀತಿಯ ಬೆನ್ನಲ್ಲೇ ಕಾಫಿನಾಡಲ್ಲಿ ಮಂಗನ ಖಾಯಿಲೆ ಹಾಗೂ ಹಕ್ಕಿ ಜ್ವರ ಕಾಣಿಸಿಕೊಳ್ಳುತ್ತಿದ್ದು, ಜನರನ್ನು ಆತಂಕಕ್ಕೀಡು ಮಾಡಿವೆ.
ಕಾಫಿನಾಡಿನಲ್ಲಿ ಒಂದೂ ಕೊರೊನಾ ಪ್ರಕರಣ ಪತ್ತೆಯಾಗದಿದ್ದರೂ, ವೈರಸ್‍ಗೆ ಹೆದರಿ ಜನ ಮನೆಯಿಂದ ಆಚೆ ಬರುತ್ತಿಲ್ಲ. ಮೂಡಿಗೆರೆ, ಕೊಪ್ಪ, ಶೃಂಗೇರಿ ಹಾಗೂ ಎನ್.ಆರ್.ಪು ತಾಲೂಕಿನ ಜನ ಕೊರೊನಾಗಿಂತ ಕೆಎಫ್‍ಡಿ (ಮಂಗನ ಖಾಯಿಲೆ)ಗೆ ಬೆಚ್ಚಿ ಬೀಳುತ್ತಿದ್ದಾರೆ. ಮಂಗನ ಕಾಯಿಲೆಯಿಂದ ಜಿಲ್ಲೆಯಲ್ಲಿ ಈಗಾಗಲೇ ಆರೇಳು ಜನ ಬಳಲುತ್ತಿದ್ದಾರೆ.
ಈ ಎರಡು ಖಾಯಿಲೆಗಳ ಭಯದ ನಡುವೆ ಇದೀಗ ಅಲ್ಲಲ್ಲಿ ಹಕ್ಕಿಗಳು ಸಾಯುತ್ತಿದ್ದು, ಚಿಕ್ಕಮಗಳೂರಿಗೆ ಹಕ್ಕಿ ಜ್ವರವೂ ಕಾಲಿಟ್ಟಿದ್ಯ ಎಂಬ ಆತಂಕ ಸ್ಥಳಿಯರನ್ನು ಕಾಡುತ್ತಿದೆ. ಗುರುವಾರ ನಗರದ ಕೋಟೆ ಬಡಾವಣೆಯಲ್ಲಿ ಎರಡು ಪಾರಿವಾಳಗಳು ಸಾವನ್ನಪ್ಪಿದ್ದವು. ಇಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮನೆ ಮುಂದೆ ಎರಡು ಮೈನಾ ಹಕ್ಕಿಗಳು ಸಾವನ್ನಪ್ಪಿವೆ. ಗುರುವಾರ ಎರಡು, ಇಂದು ಎರಡು ಹಕ್ಕಿಗಳು ಸಾವನ್ನಪ್ಪಿರುವುದರಿಂದ ಮೈಸೂರು, ದಾವಣಗೆರೆಯಲ್ಲಿದ್ದ ಹಕ್ಕಿಜ್ವರ ಕಾಫಿನಾಡಿಗೂ ಕಾಲಿಟ್ಟಿತೇ ಎಂದು ಸ್ಥಳಿಯರು ಆತಂಕಕ್ಕೀಡಾಗಿದ್ದಾರೆ.
ದೇಶದ ಜನ ಕೊರೊನಾ ಭಯದಲ್ಲಿ ಬದುಕುತ್ತಿದ್ದರೆ, ಮಲೆನಾಡಿಗರು ಕೊರೊನಾ ಜೊತೆಗೆ ಕೆಎಫ್‍ಡಿ ಹಾಗೂ ಹಕ್ಕಿಜ್ವರದ ಆತಂಕದಲ್ಲಿ ದಿನ ದೂಡುವಂತಾಗಿದೆ. ಹಕ್ಕಿಗಳು ಸಾವನ್ನಪ್ಪಿದ ನಂತರ ಸ್ಥಳ ಪರಿಶೀಲನೆ ನಡೆಸಿ ಹಕ್ಕಿಗಳ ಕಳೆಬರಹವನ್ನು ಶಿವಮೊಗ್ಗದ ಲ್ಯಾಬಿಗೆ ಕಳುಸಲಾಗಿದೆ. ವರದಿ ಬಂದ ಬಳಿಕ ಹಕ್ಕಿಗಳು ಯಾವ ಕಾರಣಕ್ಕೆ ಸಾವನ್ನಪ್ಪಿವೆ ಎಂಬುದನ್ನು ತಿಳಿಯಲಿದೆ.