ಅತೀ ತೀವ್ರ ತೂಫಾನ್ ಆಗಿ ಬದಲಾದ ಬಿಪರ್ಜೋಯ್- ಮುಂಬೈನಲ್ಲಿ ವೈಮಾನಿಕ ಸೇವೆಗಳಲ್ಲಿ ವ್ಯತ್ಯಯ

Public TV
2 Min Read
CYCLONE 1

– ತುರ್ತು ಸಭೆ ನಡೆಸಿದ ಪ್ರಧಾನಿ ಮೋದಿ, ಕಟ್ಟೆಚ್ಚರ

ನವದೆಹಲಿ: ಅರಬ್ಬಿ ಸಮುದ್ರದಲ್ಲಿ ಏರ್ಪಟ್ಟಿರುವ ಬಿಪರ್ಜೋಯ್ (Biparjoy Cyclone) ತೂಫಾನ್ ಅತಿ ತೀವ್ರ ಚಂಡಮಾರುತವಾಗಿ ಬದಲಾಗಿದೆ. ಕರಾವಳಿ ತೀರದತ್ತ ಇದು ಚಲಿಸ್ತಿರುವ ಹಿನ್ನೆಲೆಯಲ್ಲಿ ಬಲವಾದ ಗಾಳಿ ಬೀಸತೊಡಗಿದೆ. ಸಮುದ್ರ ಪ್ರಕ್ಷುಬ್ಧಗೊಂಡಿದ್ದು ರಕ್ಕಸಗಾತ್ರದ ಅಲೆಗಳು ಭೀತಿಯನ್ನುಂಟು ಮಾಡ್ತಿವೆ.

ಬಿರುಗಾಳಿಸಹಿತ ಮಳೆ ವೈಮಾನಿಕ ಸೇವೆಗಳಿಗೆ ಅಡ್ಡಿಯನ್ನುಂಟು ಮಾಡ್ತಿವೆ. ಮುಂಬೈ ಏರ್ ಪೋರ್ಟ್ (Mumbai Airport) ನಲ್ಲಿ ವಿಮಾನಗಳ ಆಗಮನ-ನಿರ್ಗಮನದಲ್ಲಿ ವ್ಯತ್ಯಯವಾಗಿದೆ. ಕೆಲ ವಿಮಾನ (Flights) ಗಳು ರದ್ದಾದ್ರೆ, ಇನ್ನೂ ಕೆಲ ವಿಮಾನಗಳ ಹಾರಾಟ ವಿಳಂಬವಾಗಿದೆ. ಪ್ರಯಾಣಿಕರು ಪರದಾಡುತ್ತಿದ್ದಾರೆ.

CYCLONE 2

ಇದೇ 15ರಂದು ಗುಜರಾತ್‍ನ ಕಛ್ ಮತ್ತು ಪಾಕಿಸ್ತಾನ (Pakistan) ದ ಕರಾಚಿ ನಡುವೆ ಬಿಪರ್ಜೋಯ್ ಚಂಡಮಾರುತ ತೀರವನ್ನು ದಾಟಲಿದೆ. ಸದ್ಯ ಪೋರಬಂದರ್‍ನಿಂದ 310ಕಿಲೋಮೀಟರ್ ದೂರದಲ್ಲಿ, ದ್ವಾರಕದಿಂದ 430 ಕಿಲೋಮೀಟರ್ ಸೈಕ್ಲೋನ್ ಕೇಂದ್ರೀಕೃತವಾಗಿದ್ದು, ಗಂಟೆಗೆ 8 ಕಿಲೋಮೀಟರ್ ವೇಗದಲ್ಲಿ ಈಶಾನ್ಯ ದಿಕ್ಕಿನತ್ತ ಚಲಿಸ್ತಿದೆ. ಚಂಡಮಾರುತ ತೀರದಾಟುವ ಸಂದರ್ಭದಲ್ಲಿ ಗಂಟೆಗೆ 135 ಕಿಲೋಮೀಟರ್ ವೇಗದಲ್ಲಿ ಗಾಳಿ ಬೀಸುವ ಸಂಭವ ಇದೆ.

CYCLONE

ಕಛ್ ಮತ್ತು ಸೌರಾಷ್ಟ್ರದಲ್ಲಿ ಆರೆಂಜ್ ಅಲರ್ಟ್ (Orange Alert) ಪ್ರಕಟಿಸಲಾಗಿದೆ. ದ್ವಾರಕೆಯಲ್ಲಿ 1300 ಮಂದಿಯನ್ನು ಸುರಕ್ಷಿತ ಪ್ರದೇಶಕ್ಕೆ ಶಿಫ್ಟ್ ಮಾಡಲಾಗಿದೆ. ಪ್ರಧಾನಿ ನರೇಂದ್ರ ಮೋದಿ ತುರ್ತು ಸಭೆ ನಡೆಸಿ, ಹತ್ತು ಹಲವು ಸೂಚನೆಗಳನ್ನು ಅಧಿಕಾರಿಗಳಿಗೆ ನೀಡಿದ್ದಾರೆ. ಪಾಕಿಸ್ತಾನ ಕರಾವಳಿಯಲ್ಲೂ ಕಟ್ಟೆಚ್ಚರ ವಹಿಸಲಾಗಿದ್ದು, ತೀರ ಪ್ರದೇಶದ ಜನರನ್ನು ಬೇರೆಡೆಗೆ ಶಿಫ್ಟ್ ಮಾಡುವ ಕೆಲಸ ನಡೆಯುತ್ತಿದೆ. ಇದನ್ನೂ ಓದಿ: 4 ದಿನ ರಾಜ್ಯದಲ್ಲಿ ಭಾರೀ ಮಳೆ ಸಾಧ್ಯತೆ – ಸಮುದ್ರಕ್ಕೆ ಇಳಿಯದಂತೆ ಮೀನುಗಾರರಿಗೆ ಎಚ್ಚರಿಕೆ

ಇತ್ತ ರಾಜ್ಯದ ಕರಾವಳಿಯಲ್ಲೂ ಕಡಲು ಪ್ರಕ್ಷುಬ್ಧಗೊಂಡಿದೆ. ಕಾರವಾರದಲ್ಲಿ ನಾಲ್ಕೈದು ಅಡಿ ಎತ್ತರಕ್ಕೆ ಅಲೆಗಳು ಏಳುತ್ತಿವೆ. ಸಮುದ್ರ ತೀರದಲ್ಲಿ ಮೀನುಗಾರಿಕೆ ಸೇರಿ ಎಲ್ಲಾ ರೀತಿಯ ಚಟುವಟಿಕೆಗಳನ್ನು ಜಿಲ್ಲಾಡಳಿತ ನಿರ್ಬಂಧಿಸಿದೆ. ಆದರೂ ಮುರುಡೇಶ್ವರ (Murudeshwara) ದಲ್ಲಿ ಕೆಲ ಪ್ರವಾಸಿಗರು ಸಮುದ್ರಕ್ಕೆ ಇಳಿಯುವ ದುಸ್ಸಾಹಸ ಮಾಡಿದ್ದಾರೆ. ಹುಬ್ಬಳ್ಳಿಯ ಸಂತೋಷ್ ಎಂಬಾತ ಸಮುದ್ರದ ಪಾಲಾಗಿದ್ದಾನೆ. ಇಬ್ಬರನ್ನು ಲೈಫ್‍ಗಾರ್ಡ್‍ಗಳು ರಕ್ಷಣೆ ಮಾಡಿದ್ದಾರೆ.

UDUPI

ಉಡುಪಿಯ ಮಲ್ಪೆ ಬೀಚ್‍ (Malpe Beach Udupi) ಗೆ ನೆಟ್ ಅಳವಡಿಸಲಾಗಿದೆ. ಪ್ರವಾಸಿಗರು ನೀರಿಗಿಳಿಯೋದನ್ನು ತಡೆಯಲು ಪೊಲೀಸರು, ಲೈಫ್‍ಗಾರ್ಡ್‍ಗಳು ಹರಸಾಹಸ ಮಾಡ್ತಿದ್ದಾರೆ. ಮಂಗಳೂರಿನ ಸೋಮೇಶ್ವರ, ಬಟ್ಟಪ್ಪಾಡಿ, ಉಳ್ಳಾಲ, ಸುರತ್ಕಲ್ ಬಳಿ ರಕ್ಕಸ ಅಲೆಗಳು ತೀರಕ್ಕೆ ಅಪ್ಪಳಿಸುತ್ತಿವೆ. ಕಡಲಂಚಿನ ಹಲವು ಮನೆ, ಮರ ನೀರುಪಾಲಾಗ್ತಿದೆ. ಮೀನುಗಾರರ ರಕ್ಷಣೆಗೆ ರಕ್ಷಣಾ ತಂಡ ನಿಯೋಜನೆ ಮಾಡಲಾಗಿದ್ದು, ಸಹಾಯವಾಣಿ ತೆರೆಯಲಾಗಿದೆ. ಇನ್ನು ಕಡಲ ಕೊರೆತ ಹೆಚ್ಚಿದ್ದು, ಮುಂಗಾರು ಸಂದರ್ಭದಲ್ಲಿ ಸಮಸ್ಯೆ ಆಗದಂತೆ ನೋಡಿಕೊಳ್ಳುವುದಾಗಿ ಸಚಿವ ಮಂಕಾಳ ವೈದ್ಯ ಭರವಸೆ ನೀಡಿದ್ದಾರೆ.

Share This Article