ಬೆಂಗಳೂರು: ನಗರದಲ್ಲಿ ಟೀ ಮಾರಾಟ ಮಾಡುವ ಅಂಗಡಿ ನಡೆಸುತ್ತಾ ಬರೋಬ್ಬರಿ 15 ಬೈಕ್ ಗಳನ್ನು ಕದ್ದಿದ್ದ ಆರೋಪಿಯನ್ನ ತಿಲಕ್ ನಗರ ಪೊಲೀಸರು ಬಂಧಿಸಿದ್ದಾರೆ.
ನಿಹಾಲ್ ಬಂಧಿತ ಆರೋಪಿಯಾಗಿದ್ದು, ಬೈಕ್ ಕಳ್ಳತನ ಮಾಡಲು ಆರೋಪಿಗೆ ಸಹಾಯ ಮಾಡುತ್ತಿದ್ದ ಮಹಮ್ಮದ್ ಇಸಾಕ್ ನನ್ನು ಪೊಲೀಸರು ಬಂಧಿಸಿದ್ದಾರೆ.
ಹಲವು ದಿನಗಳಿಂದ ತಿಲಕ್ ನಗರ ಸೇರಿದಂತೆ ಶಾಂತಿನಗರ, ಅಶೋಕ್ ನಗರ, ಜಾನ್ಸನ್ ಮಾರ್ಕೆಟ್ ಪ್ರದೇಶದಲ್ಲಿ ಬೈಕ್ ಕಳ್ಳತನ ಪ್ರಕರಣಗಳು ಹೆಚ್ಚಾಗಿತ್ತು. ಪರಿಣಾಮ ಆರೋಪಿಗಳಿಗೆ ಕಡಿವಾಣ ಹಾಕಲು ತಿಲಕ್ ನಗರ ಪೊಲೀಸರು ಕಾರ್ಯಾಚರಣೆಗೆ ಇಳಿದಿದ್ದರು. ಪ್ರಕರಣದಗಳ ತನಿಖೆ ವೇಳೆ ಬೈಕ್ ಕಳ್ಳತನ ಮಾಡುತ್ತಿದ್ದ ಸಂದರ್ಭದ ಸಿಸಿಟಿವಿ ವಿಡಿಯೋ ಪೊಲೀಸರಿಗೆ ಲಭಿಸಿದೆ.
ತಿಲಕ್ ನಗರವನ್ನೇ ಫೇವರಿಟ್ ಸ್ಪಾಟ್ ಆಗಿ ಮಾಡಿಕೊಂಡಿದ್ದ ಆರೋಪಿಗಳು ಲಾಕ್ ಇಲ್ಲದೇ ಇರುವ ಬೈಕ್ ಗಳನ್ನು ಮಾತ್ರ ಟಾರ್ಗೆಟ್ ಮಾಡಿ ಕಳ್ಳತನ ಮಾಡುತ್ತಿದ್ದರು. ಇದುವರೆಗೂ 15 ಬೈಕ್ ಗಳನ್ನು ಕದ್ದಿದ್ದರು. ಆರೋಪಿ ನಿಹಾಲ್ ಬೈಕ್ ಕಳ್ಳತನ ಮಾಡಲು ಕ್ಯಾಬ್ ಚಾಲಕನಾಗಿದ್ದ ಇಸಾಕ್ ಸಹಾಯ ಮಾಡುತ್ತಿದ್ದ. ಆ ಬಳಿಕ ಕದ್ದ ಬೈಕ್ ಗಳನ್ನು ಪರಿಚಯ ಇರುವ ಸ್ನೇಹಿತರಿಗೆ ಮಾತ್ರ ಮಾರಾಟ ಮಾಡುತ್ತಿದ್ದ ಆರೋಪಿಗಳು ಹಲವು ದಿನಗಳ ಕಾಲ ಪೊಲೀಸರಿಗೆ ಚಳ್ಳೆಹಣ್ಣು ತಿನ್ನಿಸಿ ಕೃತ್ಯ ನಡೆಸುತ್ತಿದ್ದರು.