ಬಳ್ಳಾರಿ: ಸಾಮಾನ್ಯವಾಗಿ ವಾಟ್ಸಪ್ ಗ್ರೂಪ್ ಗಳು ಗುಡ್ ಮಾರ್ನಿಂಗ್, ಗುಡ್ ನೈಟ್ ಗೆ ಸಂದೇಶ ಕಳುಹಿಸಲು ಹೆಚ್ಚು ಬಳಕೆಯಾಗುತ್ತದೆ. ಆದರೆ ಬಳ್ಳಾರಿಯಲ್ಲಿ ವಾಟ್ಸಪ್ ಗ್ರೂಪ್ ನಿಂದ ಕಳೆದು ಹೋದ ಬೈಕ್ ಪತ್ತೆಯಾಗಿದೆ.
ಹೌದು. ಬಳ್ಳಾರಿಯ ಜಿಸಿ ಲ್ಯಾಬ್ ಬಳಿ ನಿಲ್ಲಿಸಲಾಗಿದ್ದ ಫೋಟೋಗ್ರಾಫರ್ ಆನಂದ್ ಅವರ ಪಲ್ಸರ್ ಬೈಕ್ ಶುಕ್ರವಾರ ರಾತ್ರಿ ಕಳ್ಳತನವಾಗಿತ್ತು. ಬೈಕ್ ಕಳೆದು ಕೊಂಡ ಆನಂದ್ ವಾಹನ ಹುಡುಕಲು ವಾಟ್ಸಪ್ ಗ್ರೂಪ್ ಮೊರೆ ಹೋಗಿದ್ದರು. ಈ ವೇಳೆ ಅವರು ತಮ್ಮ ಬೈಕ್ ನ ಫೋಟೋ ಸಮೇತ ನಂಬರ್ ಗ್ರೂಪ್ ನಲ್ಲಿ ಹಂಚಿಕೊಂಡಿದ್ದರು.
ಬೈಕ್ ಕಳ್ಳತನ ಮಾಡಿದ ರಾಮು ಕಾಲೇಜು ವಿದ್ಯಾರ್ಥಿಯಾಗಿದ್ದು, ಕಳ್ಳತನ ಮಾಡಿದ ಬೈಕ್ ನಲ್ಲಿ ರಾಜಾರೋಷವಾಗಿ ಸುತ್ತಾಟ ನಡೆಸಿದ್ದ. ಈ ವೇಳೆ ಬೈಕ್ ನಂಬರ್ ಕಂಡ ಗ್ರೂಪ್ ನ ಸದಸ್ಯರಾದ ರಘು ಎಂಬವರು ಆನಂದ್ ಅವರಿಗೆ ಮಾಹಿತಿ ನೀಡಿದ್ದಾರೆ.
ಬೈಕ್ ಬಗ್ಗೆ ಮಾಹಿತಿ ಪಡೆದ ಆನಂದ್ ಸ್ಥಳೀಯರ ಸಹಾಯದಿಂದ ನಗರದ ಮಯೂರ ಹೊಟೇಲ್ ಬಳಿ ಕಳ್ಳನನ್ನು ಹಿಡಿದಿದ್ದಾರೆ. ಈ ವೇಳೆ ಯುವಕನಿಗೆ ಸಾರ್ವಜನಿಕರು ಹಿಗ್ಗಾಮುಗ್ಗಾ ಥಳಿಸಿದ್ದು, ಬ್ರೂಸ್ ಪೇಟೆ ಪೊಲೀಸರಿಗೆ ಆತನನ್ನು ಒಪ್ಪಿಸಿದ್ದಾರೆ.