ಬೆಂಗಳೂರು: ಐಷಾರಾಮಿ ಬೈಕ್‍ಗಳನ್ನು ಕದ್ದು ತಮಿಳುನಾಡಿಗೆ ಮಾರಾಟ ಮಾಡುತ್ತಿದ್ದ ನಾಲ್ವರು ಕಳ್ಳರನ್ನು ಪರಪ್ಪನ ಅಗ್ರಹಾರ ಪೊಲೀಸರು ಬಂಧಿಸಿದ್ದಾರೆ.
ತಮಿಳುನಾಡಿನ ಪ್ರಭು(21), ದೊಡ್ಡನಾಗಮಂಗಲದ ಬಿ.ಕಾಂ ವಿದ್ಯಾರ್ಥಿಗಳಾದ ಅರುಣ್ ಸಾಯಿ(21), ಕಾರ್ತಿಕ್ (18) ಹಾಗೂ 17 ವರ್ಷದ ಪಿಯುಸಿ ವಿದ್ಯಾರ್ಥಿಯೊಬ್ಬನನ್ನು ಪೊಲೀಸರು ಬಂಧಿಸಿದ್ದಾರೆ. ಬಂಧಿತರಿಂದ 30 ಲಕ್ಷ ರೂ. ಮೌಲ್ಯದ 28 ಬೈಕ್ ಗಳನ್ನು ಜಪ್ತಿ ಮಾಡಿದ್ದಾರೆ ಎಂದು ಆಗ್ನೇಯ ವಲಯದ ಡಿಸಿಪಿ ಬೋರಲಿಂಗಯ್ಯ ತಿಳಿಸಿದರು.
Advertisement
ಆರೋಪಿಗಳ ಪೋಷಕರು ಕೂಲಿ ಕೆಲಸ ಮಾಡುತ್ತಿದ್ದ ಇವರ ವಿಲಾಸಿ ಜೀವನಕ್ಕೆ ಹಣದ ಅವಶ್ಯಕತೆ ಇತ್ತು. ವ್ಹೀಲಿಂಗ್ ಹಾಗೂ ಡ್ರ್ಯಾಗ್‍ರೇಸ್ ಮಾಡುವುದನ್ನು ಕಲಿತಿದ್ದ ಇವರು ರಾತ್ರಿ ಸಮಯದಲ್ಲಿ ಮೋಜುಗಾಗಿ ನಗರವನ್ನು ಸುತ್ತುತ್ತಿದ್ದರು. ಈ ವೇಳೆ ಐಷಾರಾಮಿ ಬೈಕ್‍ಗಳ ಮೇಲೆ ಇವರಿಗೆ ಆಸೆ ಹುಟ್ಟಿತ್ತು. ಇವುಗಳನ್ನು ಖರೀದಿಸಲು ಹಣ ಇಲ್ಲದ ಕಾರಣ ವಿದೇಶದಲ್ಲಿ ಬೈಕ್ ಗಳನ್ನು ಹೇಗೆ ಕದಿಯುತ್ತಾರೆ ಎನ್ನುವುದನ್ನು ಯೂಟ್ಯೂಬ್ ವಿಡಿಯೋ ಮೂಲಕ ತಿಳಿದುಕೊಂಡು ಕಳ್ಳತನಕ್ಕೆ ಇಳಿದಿದ್ದರು.
Advertisement
ಬೆಳಗಿನ ಜಾವ ಕಳ್ಳತನ: ಮಡಿವಾಳ, ಎಚ್‍ಎಸ್‍ಆರ್ ಲೇಔಟ್, ಕೋರಮಂಗಲ, ಎಲೆಕ್ಟ್ರಾನಿಕ್‍ಸಿಟಿ, ಪರಪ್ಪನ ಅಗ್ರಹಾರ ಸುತ್ತಮುತ್ತಲು ಇರುವ ಪೇಯಿಂಗ್ ಗೆಸ್ಟ್ ಕಟ್ಟಡಗಳಲ್ಲಿ ಟೆಕ್ಕಿಗಳು ವಾಸವಾಗುತ್ತಿದ್ದಾರೆ. ಅಷ್ಟೇ ಅಲ್ಲದೇ ಇವರೆಲ್ಲ ರಾತ್ರಿ ತಡವಾಗಿ ಮಲಗಿ ಬೆಳಗ್ಗೆ ಲೇಟಾಗಿ ಏಳುತ್ತಾರೆ ಎನ್ನುವುದು ಇವರಿಗೆ ಗೊತ್ತಿತ್ತು. ಹೀಗಾಗಿ ಇವರು ಬೆಳಗಿನ ಜಾವ 3 ರಿಂದ 6 ಗಂಟೆ ನಡುವೆ ಬೈಕ್ ಕಳ್ಳತನ ಎಸಗುತ್ತಿದ್ದರು.
Advertisement
Advertisement
ಕಳ್ಳತನ ಹೇಗೆ?
ನಾಲ್ಕು ಜನರು ಗುಂಪಾಗಿ ಹೋಗಿ ಕಳ್ಳತನ ಎಸಗದೇ ಒಬ್ಬೊಬ್ಬರೇ ಬೇರೆ ಬೇರೆ ರಸ್ತೆಗಳಿಗೆ ಹೋಗುತ್ತಿದ್ದರು. ಆರಂಭದಲ್ಲಿ ಬೈಕಿನ ಹ್ಯಾಂಡಲ್ ಲಾಕ್ ಮುರಿಯುತ್ತಿದ್ದರು. ನಂತರ ಇಗ್ನೇಷನ್ ವಯರ್ ಕತ್ತರಿಸಿ, ವಯರ್‍ಗಳನ್ನು ಕನೆಕ್ಟ್ ಮಾಡಿ ಚಲಾಯಿಸಿಕೊಂಡು ಹೋಗುತ್ತಿದ್ದರು. ವಾರದಲ್ಲಿ ಒಂದು ಬಾರಿ ಮಾತ್ರ ಈ ಕೃತ್ಯಗಳನ್ನು ಎಸಗುತ್ತಿದ್ದರು ಎಂದು ಪೊಲೀಸರು ತಿಳಿಸಿದರು.
ಬೈಕ್ ಮಾರಾಟ ಹೇಗೆ?
6 ತಿಂಗಳಿನಲ್ಲಿ 50ಕ್ಕೂ ಹೆಚ್ಚು ಬೈಕ್‍ಗಳನ್ನು ಕದ್ದಿದ್ದ ಆರೋಪಿಗಳು ಅವುಗಳನ್ನು ತಮಿಳುನಾಡಿನ ವೇಲೂರು ಹಾಗೂ ಅಂಬೂರಿನಲ್ಲಿರುವ ಪರಿಚಿತ ವಾಹನ ಡೀಲರ್‍ಗಳಿಗೆ ಕಡಿಮೆ ಬೆಲೆಗೆ ಮಾರಾಟ ಮಾಡುತ್ತಿದ್ದರು. ಈ ಸಂದರ್ಭದಲ್ಲಿ ಈ ಬೈಕ್‍ಗಳು ಬೆಂಗಳೂರಿನ ಫೈನಾನ್ಸ್ ನವರು ಜಪ್ತಿ ಮಾಡಿದ್ದ ವಾಹನಗಳು, ಮುಂಗಡವಾಗಿ 10 ಸಾವಿರ ಕೊಡಿ. ಬಳಿಕ ಈ ಬೈಕಿಗೆ ಸಂಬಂಧಿಸಿದ ಉಳಿದ ದಾಖಲೆಗಳನ್ನು ನೀಡುತ್ತೇವೆ ಎಂದು ನಂಬಿಸಿ ಮಾರಾಟ ಮಾಡುತ್ತಿದ್ದರು.
ಪೊಲೀಸರು ಪತ್ತೆ ಹಚ್ಚಿದ್ದು ಹೇಗೆ?
ಪ್ರತಿ ಬಾರಿಯೂ ಬೈಕ್ ಗಳು ಆಗ್ನೆಯ ವಿಭಾಗದಲ್ಲಿ ಕಳವು ಆಗುತ್ತಿದ್ದ ಹಿನ್ನೆಲೆಯಲ್ಲಿ ಪೊಲೀಸರು ಆರೋಪಿಗಳ ಪತ್ತೆಗೆ 24 ಜನರನ್ನು ಒಳಗೊಂಡ 3 ವಿಶೇಷ ತಂಡವನ್ನು ರಚಿಸಿದ್ದರು. ಕಳ್ಳತನ ಎಸಗಿದ್ದ ಸ್ಥಳದಲ್ಲಿದ್ದ ಸಿಸಿ ಕ್ಯಾಮೆರಾಗಳನ್ನು ಪರಿಶೀಲಿಸಿದರೂ ಆರೋಪಿಗಳ ಸುಳಿವು ಸಿಕ್ಕಿರಲಿಲ್ಲ. ಆರೋಪಿಗಳು ಬೈಕ್ ನಲ್ಲಿ ತಮಿಳುನಾಡಿಗೆ ತೆರಳುತ್ತಿರುವ ದೃಶ್ಯ ಅತ್ತಿಬೆಲೆ ಬಳಿ ಇರುವ ಟೋಲ್‍ಗೇಟ್ ನಲ್ಲಿರುವ ಸಿಸಿ ಕ್ಯಾಮೆರಾದಲ್ಲಿ ಪತ್ತೆಯಾಗಿದ್ದರೂ ಚಹರೆ ಪತ್ತೆಯಾಗಿರಲಿಲ್ಲ.
ಪೊಲೀಸರು ಬೈಕ್ ಗಳ ಕಳ್ಳತನ ಯಾವ ಸಮಯದಲ್ಲಿ ನಡೆದಿದೆ ಎನ್ನುವ ಮಾಹಿತಿ ಕಲೆ ಹಾಕಿದಾಗ ಬೆಳಗಿನ ಜಾವ ಕಳ್ಳತನ ನಡೆಯುತ್ತಿದೆ ಎನ್ನುವುದು ಗೊತ್ತಾಗಿದೆ. ಎಲ್ಲ ಕಳವು ಪ್ರಕರಣಗಳು 3 ರಿಂದ 6 ಗಂಟೆ ಒಳಗಡೆ ಆಗುತ್ತಿದ್ದ ಹಿನ್ನೆಲೆಯಲ್ಲಿ ಪೊಲೀಸರು ಬೈಕ್ ಕಳವಾದ ಪ್ರದೇಶಗಳಲ್ಲಿ ಚಿಂದಿ ಆಯುವವರ ವೇಷ ಧರಿಸಿ ಸುತ್ತಾಡಲು ಆರಂಭಿಸಿದರು. ಜುಲೈ 25ರ ಬೆಳಗ್ಗೆ 5 ಗಂಟೆಗೆ ಬಿಟಿಎಂ ಲೇಔಟ್‍ನಲ್ಲಿ ಬೈಕ್ ಕದಿಯಲು ಯತ್ನಿಸುತ್ತಿದ್ದಾಗ ಅರುಣ್ ಸಾಯಿ ಸಿಕ್ಕಿ ಬಿದ್ದಿದ್ದ. ಕೂಡಲೇ ಆತನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಎಲ್ಲ ಆರೋಪಿಗಳ ಹೆಸರನ್ನು ಬಾಯಿಬಿಟ್ಟಿದ್ದಾನೆ ಎಂದು ತನಿಖಾ ಅಧಿಕಾರಿಗಳು ತಿಳಿಸಿದರು.
ಮೋಜು ಮಸ್ತಿ: ಐಷಾರಾಮಿ ಬೈಕ್ ಗಳನ್ನು ಕದ್ದಿಯುತ್ತಿದ್ದ ನಾವು ಕಡಿಮೆ ಬೆಲೆಗೆ ಮಾರಾಟ ಮಾಡುತ್ತಿದ್ದೆವು. 1.5 ಲಕ್ಷ ರೂ. ಮೌಲ್ಯದ ಬುಲೆಟ್ ಬೈಕನ್ನು ಕೇವಲ 10 ಸಾವಿರಕ್ಕೆ ಮಾರಾಟ ಮಾಡಿದ್ದೇವೆ. ಇದರಿಂದ ಗಳಿಸಿದ ಹಣದಲ್ಲಿ ಕೇರಳ, ಕರ್ನಾಟಕದ ಪ್ರವಾಸಿ ತಾಣಕ್ಕೆ ತೆರಳಿ ಸುತ್ತಾಡುತ್ತಿದ್ದೆವು ಎಂದು ಆರೋಪಿಗಳು ವಿಚಾರಣೆ ವೇಳೆ ಬಾಯಿಬಿಟ್ಟಿದ್ದಾರೆ.