ಮಂಡ್ಯ: ಕುಡುಕ ಲಾರಿ ಚಾಲಕನಿಂದ ಇಬ್ಬರು ಬೈಕ್ ಸವಾರರು ಸಾವನ್ನಪ್ಪಿದ್ದು, ಅಪಘಾತ ಮಾಡಿ ತಪ್ಪಿಸಿಕೊಂಡು ಓಡುತ್ತಿದ್ದ ಲಾರಿ ಚಾಲಕನನ್ನು ಸ್ಥಳೀಯರೇ ಹಿಡಿದು ಥಳಿಸಿ ಪೊಲೀಸರಿಗೊಪ್ಪಿಸಿದ ಘಟನೆ ಮಂಡ್ಯದಲ್ಲಿ ನಡೆದಿದೆ.
ನಗರದ ಹೊರವಲಯದ ವಿಸಿ ಫಾರಂ ಗೇಟ್ ಬಳಿ ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿ ಇಂದು ಬೆಳ್ಳಂಬೆಳಗ್ಗೆ ಈ ಅಪಘಾತ ಸಂಭವಿಸಿದೆ. ಪ್ರವೀಣ್(22), ಪ್ರಮೋದ್(23) ಎಂಬವರು ಮೃತಪಟ್ಟ ದುರ್ದೈವಿಗಳು. ಬೈಕ್‍ಗೆ ಹಿಂಬದಿಯಿಂದ ಲಾರಿ ಗುದ್ದಿದ ಪರಿಣಾಮ ಬೈಕ್ ಸವಾರರಾದ ಯುವಕರಿಬ್ಬರು ಹೆದ್ದಾರಿಯಲ್ಲಿ ಬಿದ್ದಿದ್ದಾರೆ.
ಇಬ್ಬರ ದೇಹಗಳು ಲಾರಿಯ ಹಿಂಬದಿಯ ಚಕ್ರಕ್ಕೆ ಸಿಲುಕಿದರೂ ಲಾರಿ ನಿಲ್ಲಿಸದೆ ಚಾಲಕ ಸುಮಾರು 250 ಮೀಟರ್ ಲಾರಿಯನ್ನು ಓಡಿಸಿದ್ದಾನೆ. ಇದ್ರಿಂದ ಹೆದ್ದಾರಿಯುದ್ದಕ್ಕೂ ಬೈಕ್ ಸವಾರರ ದೇಹಗಳು ಛಿದ್ರ ಛಿದ್ರವಾಗಿ ಬಿದ್ದಿವೆ. ಪೊಲೀಸರು ಮೃತ ದೇಹದ ಭಾಗಗಳನ್ನು ಆಯ್ದು ಕವರ್‍ಗೆ ತುಂಬುತ್ತಿದ್ದಾರೆ. ಕೊನೆಗೆ ಲಾರಿ ನಿಲ್ಲಿಸಿ ಗದ್ದೆಯಲ್ಲಿ ಕದ್ದು ಪರಾರಿಯಾಗುತ್ತಿದ್ದ ಚಾಲಕನನ್ನು ಹಿಡಿದು ಥಳಿಸಿದ ಸ್ಥಳೀಯರು ಆತನನ್ನು ಪೊಲೀಸರ ವಶಕ್ಕೆ ಒಪ್ಪಿಸಿದ್ದಾರೆ.
ಮೃತ ಬೈಕ್ ಸವಾರರಿಬ್ಬರು ದೇವಸ್ಥಾನಕ್ಕೆ ಹೋಗುತ್ತಿದ್ದರೆಂದು ತಿಳಿದುಬಂದಿದೆ. ಘಟನೆಯಿಂದಾಗಿ ಬೆಂಗಳೂರು-ಮೈಸೂರು ಹೆದ್ದಾರಿ ಸಂಚಾರ ಸಂಪೂರ್ಣ ಅಸ್ತವ್ಯಸ್ತಗೊಂಡಿದ್ದು, ಸ್ಥಳಕ್ಕೆ ಆಗಮಿಸಿದ ಮಂಡ್ಯ ಗ್ರಾಮಾಂತರ ಠಾಣೆ ಪೊಲೀಸರು ಹೆದ್ದಾರಿ ಸಂಚಾರ ಸುಗಮಗೊಳಿಸಿದ್ದಾರೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ: www.instagram.com/publictvnews