ಪಾಟ್ನಾ: 2015ರಲ್ಲಿ ವರದಕ್ಷಿಣೆಗಾಗಿ ಹೆಂಡತಿಯನ್ನ ಕೊಲೆ ಮಾಡಿದ ಆರೋಪದ ಮೇಲೆ ಗಂಡ ಜೈಲಿನಲ್ಲಿ ಶಿಕ್ಷೆ ಅನುಭವಿಸುತ್ತಿದ್ರೆ ಅತ್ತ ಹೆಂಡತಿ ತನ್ನ ಪ್ರಿಯಕರನ ಜೊತೆಗಿದ್ದ ಸಂಗತಿ ಈಗ ಬೆಳಕಿಗೆ ಬಂದಿದೆ.
ಬಿಹಾರದ ಮುಜಾಫರ್‍ಪುರದ ನಿವಾಸಿ ಪಿಂಕಿಗೆ 2015ರಲ್ಲಿ ಮನೋಜ್ ಶರ್ಮಾ ಜೊತೆ ವಿವಾಹವಾಗಿತ್ತು. ಆದ್ರೆ ಮದುವೆಯಾದ ಕೆಲವೇ ತಿಂಗಳಲ್ಲಿ ಪಿಂಕಿ ನಾಪತ್ತೆಯಾಗಿದ್ದಳು. ಪಿಂಕಿ ಕುಟುಂಬಸ್ಥರು ಮನೋಜ್ ಶರ್ಮಾ ವಿರುದ್ಧ ವರದಕ್ಷಿಣೆ ಕಿರುಕುಳ ಪ್ರಕರಣ ದಾಖಲಿಸಿ, ನಮ್ಮ ಮಗಳನ್ನ ಈತನೇ ಕೊಂದಿದ್ದಾನೆ ಎಂದು ಆರೋಪಿಸಿದ್ದರು.
Advertisement
ಕೆಲವು ವಾರಗಳ ನಂತರ ಮುಜಾಫರ್‍ಪುರದ ಸರೈಯ್ಯಾ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಗುರುತು ಸಿಗಲಾರದಂತಹ ಕೊಳೆತ ಶವವೊಂದು ಪತ್ತೆಯಾಗಿತ್ತು. ಈ ಶವ ನಮ್ಮ ಮಗಳದ್ದೇ ಎಂದು ಪಿಂಕಿ ಪೋಷಕರು ಗುರುತಿಸಿದ್ದರು. ನಂತರ ಹೆಂಡತಿಯನ್ನ ಕೊಲೆ ಮಾಡಿದ್ದಾರೆಂಬ ಆರೋಪದ ಮೇಲೆ ಮನೋಜ್ ಶರ್ಮಾ ಅವರನ್ನ ಪೊಲೀಸರು ಬಂಧಿಸಿದ್ರು. ಸದ್ಯ ಮನೋಜ್ ಶರ್ಮಾ ಜೈಲಿನಲ್ಲಿದ್ದಾರೆ.
Advertisement
ಹೆಂಡತಿ ಬದುಕಿರೋದು ಗೊತ್ತಾಗಿದ್ದು ಹೇಗೆ?: ಕಳೆದ ಕೆಲವು ವಾರಗಳ ಹಿಂದೆ ಮನೋಜ್ ಶರ್ಮಾ ಅವರ ಕುಟುಂಬಸ್ಥರಿಗೆ ಪರಿಚಯಸ್ಥರೊಬ್ಬರ ಕರೆ ಬಂದಿತ್ತು. ಮಧ್ಯಪ್ರದೇಶದ ಜಬಲ್‍ಪುರದ ಕಾಂಟ್ ಪ್ರದೇಶದಲ್ಲಿ ನಾನು ಪಿಂಕಿಯನ್ನ ಮತ್ತೊಬ್ಬ ವ್ಯಕ್ತಿಯ ಜೊತೆಯಲ್ಲಿ ನೋಡಿದೆ ಎಂದು ಅವರು ಹೇಳಿದ್ದರು. ಆ ಬಳಿಕ ಮನೋಜ್ ಶರ್ಮಾ ಕುಟುಂಬಸ್ಥರು ಕೂಡ ಜಬಲ್‍ಪುರಕ್ಕೆ ಹೋಗಿ ಪಿಂಕಿಯನ್ನು ಕಣ್ಣಾರೆ ನೋಡಿದ ಮೇಲೆ ನಮಗೆ ಮಾಹಿತಿ ನೀಡಿದ್ರು ಎಂದು ಸರೈಯ್ಯಾ ಪೊಲೀಸ್ ಠಾಣೆಯ ಸಬ್ ಇನ್ಸ್‍ಪೆಕ್ಟರ್ ಶತ್ರುಘ್ನ ಶಮಾ ಪತ್ರಿಕೆಯೊಂದಕ್ಕೆ ತಿಳಿಸಿದ್ದಾರೆ.
Advertisement
ಪಿಂಕಿಗೆ ಮದುವೆಗೂ ಮುಂಚೆ ಮಯೂರ್ ಮಲಿಕ್ ಎಂಬಾತನ ಜೊತೆ ಸಂಬಂಧವಿತ್ತು. ತನಗೆ ಇಷ್ಟವಿಲ್ಲದೆ ಮನೋಜ್ ಶರ್ಮಾ ಜೊತೆ ಮದುವೆಯಾಗಿದ್ದಳು. ನಂತರ ಮಲಿಕ್ ಹಾಗೂ ಪಿಂಕಿ ಮುಜಾಫರ್‍ಪುರದಿಂದ ಓಡಿಹೋಗಿ ಜಬಲ್‍ಪುರದ ಕಾಂಟ್ ಪ್ರದೇಶದಲ್ಲಿ ನೆಲೆಸಿದ್ರು. ಇದೀಗ ಇಬ್ಬರನ್ನೂ ಬಿಹಾರಕ್ಕೆ ಕರೆದುಕೊಂಡು ಹೋಗಲಾಗ್ತಿದೆ ಎಂದು ಬಿಹಾರ ಪೊಲೀಸರು ಮಾಹಿತಿ ನೀಡಿದ್ದಾರೆ. ಮನೋಜ್ ಅವರನ್ನ ಕೊಲೆ ಆರೋಪಿಯಾಗಿಸುವ ಸಂಚಿನಲ್ಲಿ ಇನ್ನೂ ಹಲವರು ಭಾಗಿಯಾಗಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ.
Advertisement
ಮುಂದೇನು?: ಮೊದಲಿಗೆ ಬಿಹಾರ ಪೊಲೀಸರು ಪಿಂಕಿ ಬದುಕಿದ್ದಾಳೆಂದು ಕೋರ್ಟ್‍ನಲ್ಲಿ ಸಾಬೀತುಪಡಿಸಿ, ಕೊಲೆಯೇ ಮಾಡದೆ ನಿರಪರಾಧಿಯಾಗಿದ್ರೂ ಶಿಕ್ಷೆ ಅನುಭವಿಸ್ತಿರೋ ಮನೋಜ್ ಶರ್ಮಾ ಅವರನ್ನ ಬಿಡುಗಡೆ ಮಾಡಿಸಲಿದ್ದಾರೆ. ಮನೋಜ್ ಶರ್ಮಾ ವಿರುದ್ಧ ಸಂಚು ರೂಪಿಸಿದವರು, ಶವವನ್ನ ಪಿಂಕಿಯದ್ದು ಎಂದು ಗುರುತಿಸಿದವರನ್ನೂ ಸೇರದಂತೆ ಈ ಪ್ರಕರಣದಲ್ಲಿ ಭಾಗಿಯಾದ ಎಲ್ಲರ ವಿರುದ್ಧ ಪ್ರಕರಣ ದಾಖಲಿಸಲಾಗುತ್ತದೆ ಎಂದು ಕಾಂಟ್ ಪೊಲೀಸ್ ಠಾಣೆಯ ಅಧಿಕಾರಿ ಮಂಜೀತ್ ಸಿಂಗ್ ಹೇಳಿದ್ದಾರೆ.