ಪಾಟ್ನಾ: ಮೋದಿಗೆ (Narendra Modi) ಯಾರೂ ಮತ ಹಾಕಬೇಡಿ ಎಂದು ಮಕ್ಕಳಿಗೆ ಹೇಳಿದ್ದ ಬಿಹಾರ ಶಾಲಾ ಶಿಕ್ಷಕನನ್ನು ಬಂಧಿಸಿ ಜೈಲಿಗೆ ಕಳುಹಿಸಲಾಗಿದೆ. ರಜಾಕ್ ಎಂಬಾತ ಜೈಲುಪಾಲಾದ ಶಿಕ್ಷಕ.
ಬಿಹಾರದ (Bihar Teacher) ಸರ್ಕಾರಿ ಶಾಲೆಯ ಶಿಕ್ಷಕರೊಬ್ಬರು ತಮ್ಮ ತರಗತಿಯ ಮಕ್ಕಳಿಗೆ ‘ಯಾರೂ ಮೋದಿಗೆ ಮತ ಹಾಕಬೇಡಿ’ ಎಂದು ಹೇಳಿದ್ದರು. ಹೀಗಾಗಿ ಅವರನ್ನು ಬಂಧಿಸಿ ಜೈಲಿಗೆ ಕಳುಹಿಸಿದ್ದಾರೆ ಎಂದು ಅಧಿಕಾರಿಯೊಬ್ಬರು ಭಾನುವಾರ ತಿಳಿಸಿದ್ದಾರೆ. ಇದನ್ನೂ ಓದಿ: ಲೋಕಸಭಾ ಚುನಾವಣೆ 2024: 5ನೇ ಹಂತದಲ್ಲಿರುವ ಪ್ರಮುಖ ಅಭ್ಯರ್ಥಿಗಳು
ಜಿಲ್ಲಾ ಶಿಕ್ಷಣಾಧಿಕಾರಿ ಎಫ್‌ಐಆರ್ ದಾಖಲಿಸಿದ ನಂತರ, ಚುನಾವಣಾ ಮಾದರಿ ನೀತಿ ಸಂಹಿತೆ ಉಲ್ಲಂಘಿಸಿದ್ದಕ್ಕಾಗಿ ಶಿಕ್ಷಕನ ವಿರುದ್ಧ ಪ್ರಕರಣ ದಾಖಲಿಸಲಾಗಿದೆ ಎಂದು ಮುಜಾಫರ್‌ಪುರ ಎಸ್‌ಎಸ್‌ಪಿ ರಾಕೇಶ್ ಕುಮಾರ್ ಹೇಳಿದ್ದಾರೆ.
ಕುರ್ಹಾನಿ ಬ್ಲಾಕ್‌ನ ಅಮ್ರಾಖ್‌ನಲ್ಲಿರುವ ಸರ್ಕಾರಿ ಮಾಧ್ಯಮಿಕ ಶಾಲೆಯ ಹಲವಾರು ವಿದ್ಯಾರ್ಥಿಗಳ ಕುಟುಂಬ ಸದಸ್ಯರು ಶಿಕ್ಷಕ ಹರೇಂದ್ರ ರಜಾಕ್ ಅವರ ನಡವಳಿಕೆಯನ್ನು ತಮ್ಮ ಗಮನಕ್ಕೆ ತಂದಿದ್ದಾರೆ ಎಂದು ಡಿಇಒ ಅಜಯ್ ಕುಮಾರ್ ಸಿಂಗ್ ಮಾಹಿತಿ ನೀಡಿದ್ದಾರೆ. ಇದನ್ನೂ ಓದಿ: ನಮ್ಮ ಗುರಿ ದೊಡ್ಡದಿದೆ, ಗೆಲ್ಲುವ ವಿಶ್ವಾಸವಿದೆ – ಅತಿಯಾದ ಆತ್ಮವಿಶ್ವಾಸ ಇಲ್ಲ: ಮೋದಿ
ಉಚಿತ ಪಡಿತರ ಯೋಜನೆಯಡಿ ಮಾನವ ಬಳಕೆಗೆ ಯೋಗ್ಯವಲ್ಲದ ಆಹಾರ ಧಾನ್ಯಗಳನ್ನು ವಿತರಿಸುವುದರಿಂದ ಯಾರೂ ಮೋದಿಗೆ ಮತ ಹಾಕಬೇಡಿ ಎಂದು ಮಕ್ಕಳಿಗೆ ಶಿಕ್ಷಕ ಹೇಳುತ್ತಿದ್ದರು. ಈ ವಿಚಾರಕ್ಕೆ ಸಂಬಂಧಿಸಿದಂತೆ ಮಕ್ಕಳ ಕುಟುಂಬ ಸದಸ್ಯರು ಲಿಖಿತ ದೂರು ಸಲ್ಲಿಸಿದ್ದಾರೆ ಎಂದು ಡಿಇಒ ತಿಳಿಸಿದ್ದಾರೆ.
ಹಲವಾರು ಹುಡುಗರು ಮತ್ತು ಹುಡುಗಿಯರು ತರಗತಿಯೊಳಗೆ ರಜಾಕ್ ಇಂತಹ ಮಾತುಗಳನ್ನು ಹೇಳುತ್ತಿದ್ದಾರೆಂದು ದೃಢಪಡಿಸಿದರು. ಪ್ರಾಥಮಿಕವಾಗಿ ಇದು ಮಾದರಿ ನೀತಿ ಸಂಹಿತೆಯ ಉಲ್ಲಂಘನೆಯಾಗಿದ್ದು, ಯಾವುದೇ ಸರ್ಕಾರಿ ನೌಕರರು ಮಾತನಾಡುವ ಮೂಲಕ ಚುನಾವಣಾ ಫಲಿತಾಂಶದ ಮೇಲೆ ಪ್ರಭಾವ ಬೀರಲು ಪ್ರಯತ್ನಿಸುವುದನ್ನು ನಿಷೇಧಿಸಲಾಗಿದೆ. ಯಾವುದೇ ರಾಜಕೀಯ ಪಕ್ಷದ ಪರ ಅಥವಾ ವಿರುದ್ಧವಾಗಿ ಮಾತನಾಡುವಂತಿಲ್ಲ. ಅಗತ್ಯ ಕ್ರಮಕ್ಕಾಗಿ ಶಿಕ್ಷಕರ ವಿರುದ್ಧ ಎಫ್ಐಆರ್ ದಾಖಲಿಸಲಾಗಿದೆ ಎಂದು ಅಧಿಕಾರಿ ಹೇಳಿದ್ದಾರೆ.