ಪಾಟ್ನಾ: ತೀವ್ರ ಕುತೂಹಲ ಕೆರಳಿಸಿದ್ದ ಬಿಹಾರ ವಿಧಾನಸಭೆ ಚುನಾವಣಾ ಫಲಿತಾಂಶ ಬಹುತೇಕ ಮುಕ್ತಾಯಗೊಂಡಿದೆ. ಕೆಲ ಕ್ಷೇತ್ರಗಳಲ್ಲಿ ಮತ ಎಣಿಕೆಯ ಸುತ್ತುಗಳು ಬಾಕಿಯಿದ್ದರೂ ಎನ್‌ಡಿಎ ಈಗಾಗಲೇ 200+ ಕ್ಷೇತ್ರಗಳಲ್ಲಿ ಮುನ್ನಡೆ ಕಾಯ್ದುಕೊಂಡಿದ್ದು, ಪ್ರಚಂಡ ಬಹುಮತದತ್ತ ದಾಪುಗಾಲಿಟ್ಟಿದೆ.
ಬಿಹಾರದ ಬಹುತೇಕ ಎಲ್ಲ ಪ್ರಾಂತ್ಯಗಳಲ್ಲಿ ಎನ್‌ಡಿಎ ಮೇಲುಗೈ ಸಾಧಿಸಿದೆ. ಮೋದಿ-ನಿತಿಶ್ ಕುಮಾರ್ ಡಬಲ್ ಇಂಜಿನ್ ಸರ್ಕಾರಕ್ಕೆ ಜನರು ಬಹುಪರಾಕ್ ಎಂದಿದ್ದಾರೆ. ಮಹಿಳಾ ಮತದಾರರು ಎನ್‌ಡಿಎಗೆ ದೊಡ್ಡ ಪ್ರಮಾಣದ ಆರ್ಶಿವಾದ ಮಾಡಿದ್ದಾರೆ.
ಅದರಲ್ಲೂ ಬಿಜೆಪಿ ಬಿಹಾರದಲ್ಲಿ ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿದೆ. ಎನ್‌ಡಿಎ ಒಕ್ಕೂಟದಲ್ಲಿ ಬಿಜೆಪಿ 95, ಜೆಡಿಯು 82, ಎಲ್‌ಜೆಪಿ (ಆರ್‌ವಿ) 20, ಹೆಚ್‌ಎಎಮ್ (S) 5 ಹಾಗೂ ಆರ್‌ಎಲ್‌ಎಮ್ 4 ಸ್ಥಾನಗಳಲ್ಲಿ ಮುನ್ನಡೆ ಕಾಯ್ದುಕೊಂಡಿವೆ. ಆದ್ರೆ ಮಹಾಘಟಬಂಧನ್ ಮೈತ್ರಿಕೂಟದಲ್ಲಿ ಆರ್‌ಜೆಡಿ 25 ಸ್ಥಾನಗಳಲ್ಲಿದ್ದು, ಕಾಂಗ್ರೆಸ್ ಕೇವಲ 5 ಸ್ಥಾನಗಳಲ್ಲಷ್ಟೇ ಮುನ್ನಡೆ ಸಾಧಿಸಿದೆ.
ಎನ್‌ಡಿಎ ಗೆಲುವಿಗೆ ಕಾರಣವೇನು..?
* ನಿತೀಶ್ ನಾಯಕತ್ವ & 20 ವರ್ಷಗಳ ಆಡಳಿತ
ನಿತೀಶ್ ಅವರ 20 ವರ್ಷಗಳ ಆಡಳಿತದಲ್ಲಿ ಕಾನೂನು-ಸುವ್ಯವಸ್ಥೆ, ಮೂಲಸೌಕರ್ಯ (ರಸ್ತೆಗಳು, ಸೇತುವೆಗಳು) ಮತ್ತು ಅಭಿವೃದ್ಧಿ ಕಾರ್ಯಗಳು ಜನರ ಮೇಲೆ ಪರಿಣಾಮ ಬೀರಿವೆ. ಜೊತೆಗೆ ಮಹಿಳಾ ಪರ ಯೋಜನೆಗಳು ಸರ್ಕಾರದ ಕೈಹಿಡಿವೆ.
* `ಸುಶಾಸನ’ ವಿರುದ್ಧ `ಜಂಗಲ್ ರಾಜ್’ ಎಂಬ NDA ಪ್ರಚಾರ ಯಶಸ್ವಿ
ಎನ್‌ಡಿಎ ಮೈತ್ರಿಕೂಟ `ಸುಶಾಸನ’ ವಿರುದ್ಧ `ಜಂಗಲ್ ರಾಜ್’ ಎಂಬ ಪ್ರಚಾರ ನಡೆಸಿತ್ತು. ಬಿಹಾರದಲ್ಲಿ ಲಾಲು-ರಾಬ್ರಿ ಆಡಳಿತದ 1990 ರಿಂದ 2005 ರವರೆಗಿನ ಅವಧಿಯನ್ನ ʻನೆಪೋಟಿಸಂ, ಅಪರಾಧ ಮತ್ತು ಭ್ರಷ್ಟಾಚಾರʼ ದಿಂದ ಕೂಡಿದ್ದ ʻಜಂಗಲ್ ರಾಜ್ʼ ಎಂದು ಬಿಜೆಪಿ ತೀವ್ರವಾಗಿ ಟೀಕಿಸಿತ್ತು. ಅವರ ಕಾಲಘಟ್ಟದಲ್ಲಿ ʻಕೊಲೆ, ಸುಲಿಗೆ ಮತ್ತು ವ್ಯಾಪಕ ಅರಾಜಕತೆʼ ಇತ್ತು ಎಂದು ಆರೋಪಿಸಿತ್ತು. ಅಲ್ಲದೇ ಪ್ರಧಾನಿ ಮೋದಿ ಸಹ ಮಹಾಘಟಬಂಧನ್ ಅಧಿಕಾರಕ್ಕೆ ಬಂದ್ರೆ ಬಿಹಾರದಲ್ಲಿ ಬಂದೂಕು ಸಂಸ್ಕೃತಿ ಅಧಿಕಾರಕ್ಕೆ ಬರುತ್ತದೆ ಎಂದು ವಾಗ್ದಾಳಿ ನಡೆಸಿದ್ದರು.
* ಜಾತಿ ಸಮೀಕರಣದಲ್ಲಿ ಮೇಲುಗೈ
ಈ ಬಾರಿ ಚುನಾವಣೆಯಲ್ಲಿ ಶೇ.60 ರಷ್ಟು ಬ್ರಾಹ್ಮಣ, ಭೂಮಿಹಾರ್, ರಜಪೂತ್ ಸಮುದಾಯಗಳು, ಆರ್ಥಿಕವಾಗಿ ಹಿಂದುಳಿದ ವರ್ಗಗಳ (EBC) 130ಕ್ಕೂ ಹೆಚ್ಚು ಉಪಜಾತಿಗಳು, ಯಾದವೇತರ ಸಮುದಾಯಗಳು, ಹಿಂದುಳಿದ ವರ್ಗಗಳು ಹಾಗೂ ಪರಿಶಿಷ್ಟ ಸಮುದಾಯಗಳು ಎನ್‌ಡಿಎ ಪರವಾಗಿ ಮತ ಚಲಾಯಿಸಿವೆ. ಅಲ್ಲದೇ ಮುಸ್ಲಿಂ ಮತದಾರರೇ ನಿರ್ಣಾಯಕವಾಗಿರುವ 36 ಕ್ಷೇತ್ರಗಳ ಪೈಕಿ 25 ಕ್ಷೇತ್ರಗಳಲ್ಲಿ ಭರ್ಜರಿ ಮುನ್ನಡೆ ಕಾಯ್ದುಕೊಂಡಿದೆ. ಇದರೊಂದಿಗೆ ಎಲ್‌ಜೆಪಿ ಜೊತೆಗೆ ಮೈತ್ರಿ ಮಾಡಿಕೊಂಡು ಕಳೆದ ಬಾರಿ ಸೋಲು ಕಂಡಿದ್ದ 20 ಕ್ಷೇತ್ರಗಳನ್ನ ಪುನಃ ತನ್ನ ತೆಕ್ಕೆಗೆ ತೆಗೆದುಕೊಳ್ಳುವಲ್ಲಿ ಜೆಡಿಯು ಯಶಸ್ವಿಯಾಗಿದೆ.
* ಬಂಪರ್ ಭರವಸೆಗಳು
ಚುನಾವಣಾ ಪ್ರಣಾಳಿಕೆಯಲ್ಲಿ 1 ಕೋಟಿ ಉದ್ಯೋಗ, 7 ಎಕ್ಸ್‌ಪ್ರೆಸ್‌ವೇಗಳು, ವೈದ್ಯಕೀಯ ಕಾಲೇಜು, ಉಚಿತ ವಿದ್ಯುತ್ (125 ಯೂನಿಟ್), 5 ಲಕ್ಷ ರೂ.ವರೆಗೆ ಉಚಿತ ಚಿಕಿತ್ಸೆ, ಮೀನುಗಾರರಿಗೆ ನಗದು ಇತ್ಯಾದಿ ಯೋಜನೆಗಳು ಗ್ರಾಮೀಣ ಭಾಗದ ಮತಗಳನ್ನ ಸೆಳೆಯುವಲ್ಲಿ ಯಶಸ್ವಿಯಾಗಿದೆ.
ಇತರೇ ಕಾರಣಗಳೇನು?
* ದಾಖಲೆ ಸಂಖ್ಯೆಯಲ್ಲಿ ಮಹಿಳಾ ಮತದಾರರ ಬಲವಾದ ಬೆಂಬಲ
* ಉಚಿತ ರೇಷನ್, ವಿದ್ಯುತ್, ಆರೋಗ್ಯ ಯೋಜನೆಗಳು ಜನಪ್ರಿಯ
* EBC ಮೀಸಲಾತಿ ನೀಡಿದ್ದು ದೊಡ್ಡ ಪ್ಲಸ್
* ಒಕ್ಕೂಟದ ಒಗ್ಗಟ್ಟು ಮತ್ತು ಬಿಜೆಪಿ-ನಿತೀಶ್ ಜೋಡಿ
* ಮೋದಿ-ನಿತೀಶ್ `ಡಬಲ್ ಇಂಜಿನ್’ ಪ್ರಭಾವ
* ಪ್ರಣಾಳಿಕೆಯ ಆಕರ್ಷಕ ಭರವಸೆಗಳು
* ಮಹಾಘಟಬಂಧನ್‌ನಲ್ಲಿನ ಒಳಜಗಳ, ಭಿನ್ನಾಭಿಪ್ರಾಯಗಳು ಎನ್‌ನ್‌ಡಿಗೆ ಗೆಲುವಿಗೆ ಕಾರಣವಾಗಿದೆ.
ಒಟ್ನಲ್ಲಿ ಕಾಂಗ್ರೆಸ್-ಆರ್‌ಜೆಡಿ ನೇತೃತ್ವದ ಮಹಾಘಟಬಂಧನ್ ಮೈತ್ರಿಕೂಟಕ್ಕೆ ಬಿಹಾರದಲ್ಲಿ ಭಾರೀ ಮುಖಭಂಗವಾಗಿದೆ. ಕಳೆದ ಬಾರಿಯ ಫಲಿತಾಂಶಕ್ಕಿಂತಲೂ ಆರ್‌ಜೆಡಿ-ಕಾಂಗ್ರೆಸ್ ಹೀನಾಯ ಸಾಧನೆ ಮಾಡಿದೆ. `ನಿಮೋ’ ಮ್ಯಾಜಿಕ್ ಮುಂದೆ ರಾಹುಲ್, ತೇಜಸ್ವಿ ತಂತ್ರ, ಪ್ರತಿತಂತ್ರಗಳು ಟುಸ್ ಆಗಿದೆ.


